More

    ನಿಯಮ ಉಲ್ಲಂಘಿಸಿ ಕಾಮಗಾರಿಗೆ ಟೆಂಡರ್​

    ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಕೋಚಿಮುಲ್​) ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ. ಆದರೂ, ನಿಯಮ ಉಲ್ಲಂಘಿಸಿ ಕಾಮಗಾರಿಗಳಿಗೆ ಟೆಂಡರ್​ ಕರೆಯಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಂಡಿರುವುದರ ವಿರುದ್ಧ ಚುನಾವಣಾಧಿಕಾರಿ ಹಾಗೂ ಸಹಕಾರ ಚುನಾವಣೆ ಪ್ರಾಧಿಕಾರದ ಆಯುಕ್ತರಿಗೆ ದೂರು ನೀಡಲಾಗಿದೆ.

    ಒಕ್ಕೂಟದ ಆಡಳಿತ ಮಂಡಳಿಯ ಅಧಿಕಾರಾವಧಿ ಮೇ 12ಕ್ಕೆ ಮುಗಿಯಲಿದೆ. ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿ ರಚನೆಗಾಗಿ ಚುನಾವಣೆ ನಡೆಸಲು ರಿಟರ್ನಿಂಗ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.
    ಅದರಂತೆ ಚುನಾವಣೆ ಪ್ರಕ್ರಿಯೆ ಕೈಗೊಂಡಿರುವ ಚುನಾವಣಾಧಿಕಾರಿ, ಆಡಳಿತ ಮಂಡಳಿ ಅವಧಿಯನ್ನು ಏ.28ಕ್ಕೆ ನಿಗದಿಪಡಿಸಿ ಆದೇಶಿಸಿದ್ದಾರೆ.
    ಜತೆಗೆ, ಸಹಾಯಕ ರಿಟರ್ನಿಂಗ್​ ಅಧಿಕಾರಿ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಆಡಳಿತ ಮಂಡಳಿ ಯಾವುದೇ ಕಾಮಗಾರಿ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ರ್ನಿಣಯ ಕೈಗೊಳ್ಳಲು ಅವಕಾಶವಿರುವುದಿಲ್ಲ. ಯಾವುದೇ ಸಭೆ ಸಮಾರಂಭ ಹಾಗೂ ಇನ್ನಿತರ ಆರ್ಥಿಕ ಚಟುವಟಿಕೆ ಕೈಗೊಳ್ಳಬಾರದೆಂದು ಟಿಪ್ಪಣಿ ಹೊರಡಿಸಿದ್ದಾರೆ.
    ಆದರೂ, ನಿಯಮ ಉಲ್ಲಂಘಿಸಿ ಒಕ್ಕೂಟದಲ್ಲಿ ಮಾ.5ರಂದು 10ನೇ ಆಡಳಿತ ಮಂಡಳಿ ಸಭೆ ಕರೆದು ಎಂ.ವಿ.ಕೆ ಗೋಲ್ಡನ್ ​ಡೇರಿ ನಿಮಾರ್ಣ ಸಂಬಂಧ ಡೇರಿ ಆಂತರಿಕ ವಿದ್ಯುದಿಕರಣ ಕೆಲಸಕ್ಕೆ ಸಂಬಂಧಿಸಿದ ಟೆಂಡರ್​, ಮೆಕ್ಯಾನಿಕಲ್​ ಯಂತ್ರೋಪಕರಣಗಳ ಸರಬರಾಜು, ಅಳವಡಿಕೆಗೆ ಮತ್ತು ಚಾಲನೆಗೆ ಟೆಂಡರ್​ ಕರೆಯಲು ತೀರ್ಮಾನ ಕೈಗೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
    ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಶಿಥಿಲ ಕೇಂದ್ರದಲ್ಲಿ ಐಸ್​ಕ್ರೀಂ ಉತ್ಪಾದನಾ ಘಟಕದ ನಿಮಾರ್ಣಕ್ಕೆ ಸಂಬಂಧಿಸಿದಂತೆ ಯಂತ್ರೋಪಕರಣ ಸರಬರಾಜು, ಅಳವಡಿಕೆ ಮತ್ತು ಚಾಲನೆಗೆ ಸಂಬಂಧಿಸಿದ ಮರುಟೆಂಡರ್​, ತಾಲೂಕಿನ ಹೊಳಲಿ ಸಮೀಪದ ಜಮೀನಿನಲ್ಲಿ ಸೋಲಾರ್​ ವಿದ್ಯುತ್​ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಯಂತ್ರೋಪಕರಣ ಸರಬರಾಜು, ಅಳವಡಿಕೆಗೆ ಮತ್ತು ಚಾಲನೆಗೆ ಸಂಬಂಧಿಸಿದ ಟೆಂಡರ್​ ಇತ್ಯರ್ಥಪಡಿಸಲು ರ್ನಿಣಯ ಕೈಗೊಂಡಿರುವುದು ನೀತಿ ಸಂಹಿತೆ ಹಾಗೂ ಕಾನೂನಿಗೆ ವಿರುದ್ಧವಾಗಿದೆ. ಟೆಂಡರ್​ ಕರೆದು ಅಂಗೀಕರಿಸಿ ಕೋಟ್ಯಂತರ ಹಣ ಲಪಟಾಯಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
    ಚಟುವಟಿಕೆಯಲ್ಲಿ ತೊಡಗಿರುವ ಆಡಳಿತ ಮಂಡಳಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಪ್ರಸ್ತುತ ಆಡಳಿತ ಮಂಡಳಿಯನ್ನು ಕೂಡಲೇ ರದ್ದುಗೊಳಿಸಿ ಆಡಳಿತಾಧಿಕಾರಿ ನೇಮಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.

    ಅನುದಾನ ನೀಡದಂತೆ ಮನವಿ
    ಒಕ್ಕೂಟದ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿರುವುದು ಹಾಗೂ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ಟೆಂಡರ್​ ಪ್ರಕ್ರಿಯೆ ಕೈಗೊಳ್ಳದಂತೆ ಹಾಗೂ ಹಣ ಬಿಡುಗಡೆ ಮಾಡದಂತೆ ಮುಳಬಾಗಿಲು ನಿರ್ದೇಶಕ ಕೆ.ಎನ್​.ನಾಗರಾಜ ಅವರು ಒಕ್ಕೂಟಕ್ಕೆ ಪತ್ರ ಬರೆದು ಮನವಿ ಮಾಡಿದ್ದರೂ ಮನ್ನಣೆ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
    ಸ್ಥಳಿಯರ ವರ್ಗಾವಣೆಗೆ ಒತ್ತಾಯ
    ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ನಿವಾಸಿಗಳು ಒಕ್ಕೂಟದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರಿಂದ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುವುದರಿಂದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್​.ಗೋಪಾಲ ಮೂರ್ತಿ, ವ್ಯವಸ್ಥಾಪಕರಾದ ಕೆ.ವಿ.ಗಾಯತ್ರಿ, ಎನ್​.ನಾಗೇಶ್​ (ಆಡಳಿತ) ಎಂ.ಕೆ.ವಿಶ್ವನಾಥ್​ (ಖರೀದಿ), ಬಿ.ಎನ್​.ಗುರುಪ್ರಸಾದ್​ (ಡೇರಿ), ಕೆ.ಬಿ.ಮುರಳಿ (ವಿತ್ತ), ಚೈತ್ರಾ (ಡೇರಿ) ಜಿ.ಎನ್​.ವೆಂಕಟೇಶ್​ ಪ್ರಸಾದ್​ (ಎಂಐಎಸ್​), ಎ.ಶ್ರೀನಿವಾಸಗೌಡ (ಶೇತಾಂ) ಅವರು ಸ್ಥಳಿಯರಾಗಿದ್ದು, ಚುನಾವಣೆ ಉದ್ದೇಶದಿಂದ ವರ್ಗಾವಣೆ ಮಾಡಬೇಕು ಎಂದು ದೂರುದಾರ ರಾಜಣ್ಣ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts