ಹರಪನಹಳ್ಳಿ: ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳಲ್ಲಿ ಕೊಠಡಿ, ಶೌಚಗೃಹ, ಕಾಂಪೌಂಡ್ ನಿರ್ಮಿಸಲಾಗಿದೆ. ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸರಿಯಾಗಿ ನಿರ್ವಹಣೆ ಮಾಡಿಕೊಂಡು ಹೋಗಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತ ಪವನ್ ಕುಮಾರ್ ಮಾಲಪಾಟಿ ತಿಳಿಸಿದರು.
ತಾಲೂಕಿನ ಬೆಣ್ಣಿಹಳ್ಳಿ ಹಾಗೂ ಮೈದೂರು ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಅಡುಗೆ ಕೋಣೆ, ಕಾಂಪೌಂಡ್ ಹಾಗೂ ಹೈಟೆಕ್ ಶೌಚಗೃಹಗಳನ್ನು ಪರಿಶೀಲಿಸಿ ಮಾತನಾಡಿದರು. ಕಟ್ಟಡಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಇದೇ ರೀತಿ ಕಾಮಗಾರಿಯ ಕಡತಗಳನ್ನು ನಿರ್ವಹಿಸಬೇಕು ಎಂದು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.
ನರೇಗಾ ಹಾಗೂ ತೋಟಗಾರಿಕಾ ಇಲಾಖೆ ಸಹಕಾರದಿಂದ ಮೈದೂರು ಗ್ರಾಮದ ರೈತರಾದ ಕೆಂಚಮ್ಮ ಮತ್ತು ಗುರುಲಿಂಗನಗೌಡ ಅವರು ಬೆಳೆದಿರುವ ದಾಳಿಂಬೆ ಹಾಗೂ ಪಪ್ಪಾಯ ತೋಟವನ್ನು ವೀಕ್ಷಿಸಿದ ಆಯುಕ್ತರು, ರೈತರು ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಅಂಥವರಿಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಪಂ ಸಿಇಒ ಸದಾಶಿವ ಬಿ.ಪ್ರಭು, ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಗ್ರಾಮೀಣಾಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕ ವೇಣುಗೋಪಾಲ್ ರಾವ್, ರಾಜ್ಯ ನರೇಗಾ ಸಹಾಯಕ ನಿರ್ದೇಶಕ ಸಂಜೀವಕುಮಾರ, ಯೋಜನಾ ಇಂಜಿನಿಯರ್ ಅಭಿರಾಮ್, ಜಿಐಎಸ್ ಸಂಯೋಜಕ ಆದರ್ಶ, ಹರಪನಹಳ್ಳಿ ತಾಪಂ ಇಒ ವೈ.ಎಚ್.ಚಂದ್ರಶೇಖರ್, ಸಹಾಯಕ ನಿರ್ದೇಶಕ ಯು.ಎಚ್.ಸೋಮಶೇಖರ, ಎಡಿಪಿಸಿ ಬಸವರಾಜ್, ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ಐಇಸಿ ಸಂಯೋಜಕ ವಸಿಗೇರಪ್ಪ ಚಾಗನೂರು, ಲೋಕೇಶ್ ನಾಯ್ಕ, ರವಿ ಹಲಗೇರಿ ಇತರರಿದ್ದರು.