More

    ತಂತ್ರಜ್ಞಾನ ಕೌಶಲ ಮೈಗೂಡಿಸಿಕೊಳ್ಳಿ

    ಬೆಳಗಾವಿ: ಆಧುನಿಕ ಯುಗದ ತಂತ್ರಜ್ಞಾನದ ಕೃತಕ ಬುದ್ಧಿಮತ್ತೆ ವಕೀಲರ ವೃತ್ತಿ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಉದಯೋನ್ಮುಖ ತಂತ್ರಜ್ಞಾನದ ಕೌಶಲಗಳನ್ನು ವಕೀಲರು ಕರಗತ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ಪ್ರಸಾದ್ ಸಲಹೆ ನೀಡಿದರು.

    ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಎಂ.ಕೆ. ನಂಬಿಯಾರ್ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

    ಈವರೆಗಿನ ಎಲ್ಲ ತಾಂತ್ರಿಕ ಸಂಶೋಧನೆಗಳ ಮೇಲೆ ಪರಿಣಾಮ ಬೀರುವ ಮತ್ತೊಂದು ತಾಂತ್ರಿಕ ಆವಿಷ್ಕಾರಗಳ ಹಾದಿಯಲ್ಲಿದ್ದೇವೆ. ಸುಧಾರಿತ ತಂತ್ರಜ್ಞಾನಗಳ ಪರಿಣಾಮ ವಕೀಲರ ಕೆಲಸವೂ ಪರಿಣಾಮ ಬೀರಲಿದ್ದು, ಎದುರಾಗುವ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಿರಬೇಕು. ಹೊಸ ಆಲೋಚನೆಗಳು ಮತ್ತು ಸೂಪ್ತ ಪ್ರತಿಭೆ ಪ್ರಸ್ತುತಪಡಿಸಲು ಅಣಕು ನ್ಯಾಯಾಲಯ ಸ್ಪರ್ಧೆ ಅತ್ಯುತ್ತಮ ವೇದಿಕೆಯಾಗಿದೆ ಎಂದರು.

    ಅಣಕು ನ್ಯಾಯಾಲಯಗಳು ವಕೀಲ ವೃತ್ತಿ ಕೌಶಲಗಳನ್ನು ಪರಿಚಯಿಸುತ್ತವೆ. ಭವಿಷ್ಯದ ವಕೀಲರಿಗೆ ಇಂತಹ ಅಣಕು ನ್ಯಾಯಾಲಯವು ಅಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.

    ಸುಳ್ಳು ಆಶ್ವಾಸನೆ ಬೇಡ: ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲಾ ಸೊಸೈಟಿ ಅಧ್ಯಕ್ಷ ಅನಂತ ಮಂಡಗಿ ಮಾತನಾಡಿ, ಯಾವುದೇ ಸಂದರ್ಭದಲ್ಲಿಯೂ ಕಕ್ಷಿದಾರರು ಹಾಗೂ ನ್ಯಾಯಾಲಯವನ್ನು ನೈಜತೆ ಮರೆಮಾಚಿ ತಪ್ಪುದಾರಿಗೆ ಎಳೆಯಬಾರದು. ಜತೆಗೆ ಸೋಲು ಗೆಲುವಿನ ಬಗ್ಗೆ ಸುಳ್ಳು ಆಶ್ವಾಸನೆ ನೀಡಬಾರದು. ಹಣಕ್ಕಾಗಿಯೇ ವಕಾಲತು ವಹಿಸುವುದು ಬೇಡ. ಕಕ್ಷಿದಾರರಿಂದ ಪ್ರಕರಣದ ಪರಿಪೂರ್ಣ ಮಾಹಿತಿ ಪಡೆದ ನಂತರವೇ ವಕಾಲತ್ತಿನ ನಿರ್ಧಾರ ಕೈಗೊಳ್ಳಬೇಕು ಎಂದು ಯುವ ವಕೀಲರಿಗೆ ಸಲಹೆ ನೀಡಿದರು.

    ವಕೀಲ ಪಿ.ಎಸ್. ಸಾವಕಾರ್, ಆಡಳಿತ ಮಂಡಳಿ ಅಧ್ಯಕ್ಷ ಎಸ್.ವಿ. ಗಣಾಚಾರಿ, ಪ್ರಾಚಾರ್ಯ ಎ.ಎಚ್. ಹವಾಲ್ದಾರ್, ಗಿರೀಶ ವಾಗ್, ಸಚ್ಚಿದಾನಂದ ಪಾಟೀಲ, ಮೇಘಾ ಸೋಮಣ್ಣವರ ಹಾಗೂ ನಿವೇದಿತಾ ದೀಕ್ಷಿತ ಸೇರಿ ಇತರರು ಇದ್ದರು. ಸೌಂದರ್ಯ ಪ್ರಾರ್ಥಿಸಿದರು. ಜಿನಾಲ್ ಬಾಟಿ ಹಾಗೂ ಹರ್ಷಾ ವಾಗ್ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts