More

    ಮಗ ಟೀಂ ಇಂಡಿಯಾ ಆಟಗಾರ, ಅಪ್ಪ ಈಗಲೂ ಸಿಲಿಂಡರ್ ವಿತರಕ: ವಿಡಿಯೋ ವೈರಲ್..

    ಕೋಲ್ಕತ್ತ: ಟೀಂ ಇಂಡಿಯಾಗೆ ಕಳೆದ ವರ್ಷ ಪಾದಾರ್ಪಣೆ ಮಾಡಿದ ರಿಂಕು ಸಿಂಗ್, ಆ ಬಳಿಕ ಚುಟುಕು ಕ್ರಿಕೆಟ್‌ನಲ್ಲಿ ತನ್ನ ಹೆಜ್ಜೆಗುರುತು ಮೂಡಿಸುತ್ತಿದ್ದಾರೆ. 2023ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಪರ 14 ಪಂದ್ಯಗಳನ್ನಾಡಿ 474 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಆಯ್ಕೆ ಸಮಿತಿ ಗಮನ ಸೆಳೆಯುವಲ್ಲಿ ರಿಂಕು ಸಿಂಗ್ ಯಶಸ್ವಿಯಾಗಿದ್ದರು.

    ಇದನ್ನೂ ಓದಿ: ಮಾಲ್ಡೀವ್ಸ್ ಸರ್ಕಾರದ ವಿರುದ್ಧ ವಿಪಕ್ಷ ಪ್ರತಿಭಟನೆ: ಸಂಸತ್​ನಲ್ಲೇ ಮಾರಾಮಾರಿ!

    26 ವರ್ಷದ ರಿಂಕು ಸಿಂಗ್ ಅವರ ಟೀಂ ಇಂಡಿಯಾವರೆಗಿನ ಜರ್ನಿ ಅಷ್ಟೇನೂ ಸುಲಭವಾಗಿರಲಿಲ್ಲ. ಕಠಿಣ ಪರಿಶ್ರಮದ ಮೂಲಕ ಈ ಹಂತ ತಲುಪಿದ್ದಾರೆ. ಉತ್ತರಪ್ರದೇಶದ ಆಲಿಘರ್‌ನಲ್ಲಿ ತೀರಾ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ರಿಂಕು ಸಿಂಗ್, ತಮ್ಮ ಬಿಡುವಿನ ಸಮಯದಲ್ಲಿ ತಂದೆ ಖಂಚಂದ್ರ ಸಿಂಗ್ ಸಹೋದರ ಜೀತ್ ಸಿಂಗ್ ಜತೆ ಮನೆ ಮನೆಗೆ ಎಲ್​ಪಿಜಿ ಸಿಲಿಂಡರ್ ಡಿಲೆವರಿ ಮಾಡುತ್ತಿದ್ದರು.

    ರಿಂಕು ಸಿಂಗ್ ಪರಿಶ್ರಮಕ್ಕೆ ಆರಂಭದಲ್ಲೇ ಯಶಸ್ಸು ಸಿಕ್ಕಿತು. ಕಳೆದ ವರ್ಷ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಿಂಕು ಸಿಂಗ್, ತಮ್ಮ ತಂದೆ ಈ ಮೊದಲು ಕುಟುಂಬಕ್ಕೆ ಆಸರೆಯಾಗಿದ್ದ ಸಿಲಿಂಡರ್ ಡೆಲಿವರಿ ಕೆಲಸವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದರು.

    “ನಾನು ನನ್ನ ತಂದೆಗೆ ಇನ್ನಾದರೂ ನೀವು ರಿಲ್ಯಾಕ್ಸ್ ಮಾಡಿ. ನೀವು ಇಷ್ಟು ವರ್ಷ ಸಿಲಿಂಡರ್ ಡೆಲಿವರಿ ಮಾಡಿದ್ದು ಸಾಕು ಎಂದು ಹೇಳಿದ್ದೆ. ಆದರೆ ನನ್ನ ಅಪ್ಪ ಈಗಲೂ ತಾವು ಮಾಡುತ್ತಿರುವ ಕೆಲಸವನ್ನು ಖುಷಿಯಿಂದ ಮಾಡುತ್ತಿದ್ದಾರೆ. ನಾನು ಅವರ ಅಭಿಪ್ರಾಯವನ್ನು ಗೌರವಿಸುತ್ತೇನೆ. ಯಾಕೆಂದರೆ ಸುಮ್ಮನೇ ಮನೆಯಲ್ಲಿ ಕೂತು ಅವರಿಗೂ ಬೋರ್ ಆಗಬಹುದು. ಜೀವನಪೂರ್ತಿ ದುಡಿಮೆಯಲ್ಲೇ ಕಾಲ ಕಳೆಯುವವರು ದಿಢೀರ್ ಎನ್ನುವಂತೆ ಸುಮ್ಮನೆ ಮನೆಯಲ್ಲಿ ಕೂರುವುದು ಕಷ್ಟವಾಗಬಹುದು” ಎಂದು ರಿಂಕು ಹೇಳಿದ್ದರು.

    ಇದೀಗ ರಿಂಕು ಸಿಂಗ್ ತಂದೆ ಸಿಲಿಂಡರ್ ಡೆಲಿವರಿ ಮಾಡುತ್ತಿದ್ದಾರೆ ಎನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ರಿಂಕು ಸಿಂಗ್ ಅವರ ತಂದೆಯ ಸರಳ ಹಾಗೂ ತಾವು ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದ ಉದ್ಯೋಗದ ಮೇಲಿನ ಪ್ರೀತಿಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಅದ್ಭುತವಾಗಿ ಮ್ಯಾಚ್ ಫಿನಿಶಿಂಗ್ ಮಾಡುವ ರಿಂಕು ಸಿಂಗ್, ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪರ ಸ್ಥಾನ ಪಡೆಯುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts