More

    ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲಿ

    ಉಪ್ಪಿನಬೆಟಗೇರಿ: ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಶಿಕ್ಷಣ ಇಲಾಖೆ ಕಂಕಣಬದ್ಧವಾಗಿದ್ದು, ವಿದ್ಯಾರ್ಥಿಗಳು ಎಲ್ಲ ಸೌಲಭ್ಯ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಹೇಳಿದರು.

    ಧಾರವಾಡ ತಾಲೂಕಿನ ಹನುಮನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನ ಮಹತ್ವವಾಗಿದ್ದು, ಪಾಲಕರಾದವರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು. ಶಿಕ್ಷಕರಾದವರು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಬೇಕು. ಮಕ್ಕಳು ಜ್ಞಾನ ಸಂಪಾದಿಸಿದರೆ ಸಕಲ ಸಂಪತ್ತೆಲ್ಲವೂ ಹುಡುಕಿಕೊಂಡು ಬರುತ್ತದೆ. ಆದ್ದರಿಂದ ಶಿಕ್ಷಕರನ್ನು ಗೌರವದಿಂದ ಕಾಣಬೇಕು ಎಂದರು.

    ಅಧ್ಯಕ್ಷತೆವಹಿಸಿದ್ದ ಎಸ್​ಡಿಎಂಸಿ ಅಧ್ಯಕ್ಷ ಮೃತ್ಯುಂಜಯಸ್ವಾಮಿ ಯರಗಂಬಳಿಮಠ ಮಾತನಾಡಿ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಪ್ರೇಮಿಗಳು ಈ ಶಾಲೆಗೆ ದತ್ತಿದಾನ ನೀಡಿ ಪ್ರೋತ್ಸಾಹಿಸುತ್ತಿದ್ದು, ಅವರೆಲ್ಲರ ಕಾರ್ಯ ಪ್ರಶಂಸನೀಯವಾಗಿದೆ ಎಂದರು.

    ಈ ವಿದ್ಯಾಲೋಕದ ಶ್ರೀಪತಿ ಕೊಲ್ಹಾರ ಮಾತನಾಡಿ, ಇಲ್ಲಿ ಕಲಿಯುವ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅವರು ತಾಂತ್ರಿಕ ಶಿಕ್ಷಣದಲ್ಲಿ ಸುಧಾರಿಸಲೆಂದು ನಾಲ್ಕು ಲ್ಯಾಪ್​ಟಾಪ್ ಕೂಡ ನೀಡಿದ್ದೇವೆ ಎಂದರು.

    ಪ್ರತಿಭಾವಂತ ವಿದ್ಯಾರ್ಥಿಗಳು, ದತ್ತಿ ದಾನಿಗಳು ಹಾಗೂ ಸಮಾಜ ಸೇವಕರನ್ನು ಸನ್ಮಾನಿಸಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು ಜರುಗಿದವು.

    ಬೈಲಹೊಂಗಲ ಸೋಮೇಶ್ವರ ಸಕ್ಕರೆ ಕಾರ್ಖಾನೆ ನಿರ್ದೇಶಕ ಮಲ್ಲಣ್ಣ ಅಷ್ಟಗಿ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಕಾಶಪ್ಪ ದೊಡವಾಡ, ಮುಖ್ಯ ಶಿಕ್ಷಕಿ ಎಸ್.ಎಂ. ಬೊಂಗಾಳೆ, ಬಸವರಾಜ ಹೊಸಮನಿ, ಸಿದ್ಧನಗೌಡ ಪಾಟೀಲ, ಮಹಾದೇವ ಬಾರಾಟಕ್ಕೆ, ಸವಿತಾ ಛಬ್ಬಿ, ಮಹಾಂತೇಶ ಬೊಬ್ಬಿ, ಬಸೀರಅಹ್ಮದ್ ಮಾಳಗಿಮನಿ, ಪಾರ್ವತೆವ್ವ ಹೊಸಮನಿ, ನಾಗಮ್ಮ ಬೊಬ್ಬಿ, ಮಂಜುನಾಥ ನವಲಗುಂದ, ತೇಜಸ್ವಿನಿ ಆಯಟ್ಟಿ, ನಿರ್ಮಲಾ ದೊಡವಾಡ ಸೇರಿ ಎಸ್​ಡಿಎಂಸಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕರಾದ ಎಸ್.ಬಿ. ಸವಸುದ್ದಿ ಹಾಗೂ ಆರ್.ಎಸ್. ಮನಗೂಳಿ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts