More

    ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿಗೆ ಶತ ಸಂಭ್ರಮ

    ಬ್ಯಾಡಗಿ: ಬ್ಯಾಡಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘಕ್ಕೀಗ ಶತಮಾನೋತ್ಸವ ಸಂಭ್ರಮ.

    1921ರಲ್ಲಿ ಆರಂಭವಾದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ, 2021 ಫೆ. 24 ರಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಬ್ಯಾಡಗಿ ಒಕ್ಕಲುತನ ಹುಟ್ಟುವಳಿ ಸಹಕಾರಿ ಸಂಘವು ಆರಂಭದಲ್ಲಿ 109 ಸದಸ್ಯರನ್ನು ಹೊಂದಿತ್ತು. ಬಳಿಕ ತಾಲೂಕಿನ 9 ಪ್ರಾಥಮಿಕ ಸಹಕಾರಿ ಸಂಘಗಳೊಂದಿಗೆ ಒಟ್ಟು 118 ಸದಸ್ಯತ್ವದೊಂದಿಗೆ 2115 ರೂ. ಶೇರು ಬಂಡವಾಳ ಸಂಗ್ರಹಿಸಿ, ತನ್ನ ವಹಿವಾಟು ಆರಂಭಿಸಿತ್ತು. ಸದ್ಯ 1022 ಜನ ಸದಸ್ಯತ್ವ ಹೊಂದಿದ್ದು, ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ.

    ರೈತರಿಂದ ಆರಂಭವಾಗಿ ಸುದೀರ್ಘ ಇತಿಹಾಸ ಹೊಂದಿರುವ ಸಹಕಾರಿ ಸಂಘ ಸಾಕಷ್ಟು ಏರಿಳಿತ ಕಂಡಿದೆ. ಹಿಂದಿನ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರ ತ್ಯಾಗ ಹಾಗೂ ಪರಿಶ್ರಮ, ನಿಸ್ವಾರ್ಥ ಸೇವೆಯಿಂದ ಬೃಹತ್ ಆಗಿ ಬೆಳೆದು ನಿಂತಿದೆ. ಅಲ್ಲದೆ, ಕೋಟಿ ರೂ. ಅಧಿಕ ವಹಿವಾಟಿನೊಂದಿಗೆ ದಿನೇದಿನೆ ಅಭಿವೃದ್ಧಿ ಹೊಂದುತ್ತಿದೆ. ಸಂಘವು ಸುವರ್ಣ ಮಹೋತ್ಸವ, ವಜ್ರ ಮಹೋತ್ಸವ ಹಾಗೂ ಅಮೃತ ಮಹೋತ್ಸವ ಆಚರಿಸಿಕೊಂಡಿದೆ. ಇಂತಹ ಸಹಕಾರಿಗೆ ಶತಮಾನೋತ್ಸವ ದೊಡ್ಡ ಮೈಲುಗಲ್ಲಾಗಿದೆ.

    ಸ್ಮರಣ ಸಂಚಿಕೆ ಬಿಡುಗಡೆ: ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತದ ಶತಮಾನೋತ್ಸವ ಸವಿನೆನಪಿಗಾಗಿ ಆಡಳಿತ ಮಂಡಳಿ ನೂರು ಹೆಜ್ಜೆ ನೂರು ಪುಟ, ಶತಮಾನೋತ್ಸವ ಸ್ಮರಣೆ ಸಂಚಿಕೆ ಹೊರ ತರುತ್ತಿದ್ದು, ನಾಡಿನ ಹರಗುರು ಚರಮೂರ್ತಿಗಳು, ಜನಪ್ರತಿನಿಧಿಗಳು ಸಹಕಾರಿ ಸಂಘದ ತಮ್ಮ ಅನಿಸಿಕೆ ಹಂಚಿಕೊಂಡಿರುವುದು ಹೆಮ್ಮೆಯಾಗಿದೆ ಎಂದು ಅಧ್ಯಕ್ಷ ತಿರಕನಗೌಡ ಪಾಟೀಲ ತಿಳಿಸಿದ್ದಾರೆ.

    ಸಂಘಸಂಸ್ಥೆಗಳ ಅಭಿವೃದ್ಧಿಯಲ್ಲಿ ಸಹಕಾರಿ ಮನೋಭಾವ ಮುಖ್ಯವಾಗಿದೆ. ಸಂಘಗಳಲ್ಲಿ ವ್ಯವಹಾರ ಕೈಗೊಂಡ ಎಲ್ಲ ಸದಸ್ಯರು ಸಾಲ ಪಡೆದ ಬಳಿಕ ಹಣ ಸಕಾಲಕ್ಕೆ ಮರುಪಾವತಿ ಮಾಡಿದಲ್ಲಿ ಸಂಘದ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಹಿಂದಿನ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸರ್ವಸದಸ್ಯರ ಶ್ರಮದಿಂದ ನಾವು ಶತಮಾನೋತ್ಸವ ಹೊಸ್ತಿಲಲ್ಲಿ ನಿಂತಿದ್ದೇವೆ. ಮೆಣಸಿನಕಾಯಿ ಆವರಣದಲ್ಲಿರುವ ನಮ್ಮ ಸಹಕಾರಿ ಸಂಘ ಸ್ವಂತ ಕಾರ್ಯಾಲಯ ಹಾಗೂ ಉಗ್ರಾಣ ಹೊಂದಿದ್ದು, ಇನ್ನಷ್ಟು ಬೆಳೆಯಬೇಕೆಂಬ ಹಂಬಲಕ್ಕೆ ಎಲ್ಲರ ಸಹಕಾರ ಮುಖ್ಯವಾಗಿದೆ.
    | ಎ. ಶಿವಶಂಕರಪ್ಪ ವ್ಯವಸ್ಥಾಪಕರು ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts