More

    ಹೆಸರಿಗಷ್ಟೇ ಎಂಬಂತಿದೆ ತಾಲೂಕು ಪಂಚಾಯಿತಿ, ಬೈಂದೂರಲ್ಲಿ ಕಾರ‌್ಯನಿರ್ವಹಣಾಧಿಕಾರಿ ಬಿಟ್ಟು ಬೇರೆ ಸಿಬ್ಬಂದಿಯೇ ಇಲ್ಲ!

    ಬೈಂದೂರು: ಬೈಂದೂರು ತಾಲೂಕು ರಚನೆಗೊಂಡು ಮೂರು ವರ್ಷ ಕಳೆದಿದ್ದು, ಸರ್ಕಾರ ಎರಡು ವರ್ಷದ ಬಳಿಕ ನೂತನ ತಾಲೂಕುಗಳಿಗೆ ತಾಲೂಕು ಪಂಚಾಯಿತಿ ಘೋಷಣೆ ಮಾಡಿತ್ತು. ಅದರಂತೆ ಬೈಂದೂರು ತಾಪಂ ರಚನೆಗೊಂಡು ಹಾಗೂ ನೂತನ ಕಾರ್ಯನಿರ್ವಹಣಾಧಿಕಾರಿ ನೇಮಕಗೊಂಡು ಒಂದು ವರ್ಷ ಕಳೆದರೂ ಯಾವುದೇ ಸಿಬ್ಬಂದಿಯ ನೇಮಕವಾಗದೆ ಹೆಸರಿಗೆ ಮಾತ್ರ ಎಂಬಂತೆ ಕಾರ್ಯನಿರ್ವಹಿಸುತ್ತಿದೆ.

    ಇತ್ತೀಚೆಗೆ ಅಧ್ಯಕ್ಷ, ಉಪಾಧ್ಯಕ್ಷರು ಆಯ್ಕೆಯಾಗಿದ್ದು, ಒಂದು ಸಾಮಾನ್ಯ ಸಭೆ ಬೈಂದೂರಿನ ಕಚೇರಿಯಲ್ಲಿ ನಡೆದಿದೆ. ಈ ಕಚೇರಿಗೆ ತಾತ್ಕಾಲಿಕವಾಗಿ ಓರ್ವ ಸಿಬ್ಬಂದಿ ನೇಮಕವಾಗಿದೆ. ತಾಲೂಕು ಪಂಚಾಯಿತಿಯಿಂದ ಆಗಬೇಕಾದ ಯಾವುದೇ ಕೆಲಸ ನಡೆಯುತ್ತಿಲ್ಲ. ಎಲ್ಲದಕ್ಕೂ ಕುಂದಾಪುರ ತಾಪಂ ಕಚೇರಿಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಈಗಲೂ ಇದೆ. ಬೈಂದೂರು ತಾಪಂ ಸಾಮಾನ್ಯ ಸಭೆಯೂ ಕುಂದಾಪುರ ತಾಪಂ ಕಚೇರಿಯಲ್ಲಿ ನಡೆದಿರುವುದು ಜನರಿಗೆ ನಿರಾಸೆ ತಂದಿದೆ. ನೂತನ ತಾಪಂನ ಯಾವ ಕಾರ್ಯವೂ ಇಲ್ಲಿ ನಡೆಯುತ್ತಿಲ್ಲ. ತಾಪಂ ಕಚೇರಿ ಈಗಿನ ಬೈಂದೂರು ಪಟ್ಟಣ ಪಂಚಾಯಿತಿ ಕಚೇರಿಯ ಒಂದು ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಅತ್ಯಂತ ಇಕ್ಕಟ್ಟಾಗಿರುವ ಸ್ಥಳ.

    ಮುಂದಿನ ಸಾಮಾನ್ಯ ಸಭೆ ಬೈಂದೂರಿನಲ್ಲೇ ನಡೆಸಲು ಜನ ಒತ್ತಾಯಿಸಿದ್ದಾರೆ. ಇಲ್ಲಿ ತಾಪಂಗೆ ಸರ್ಕಾರ ಜಾಗ ಮಂಜೂರು ಮಾಡಿದ್ದರೂ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಂಡಿಲ್ಲ. ಕೂಡಲೇ ಟೆಂಡರ್ ಕರೆದು ಮುಂದಿನ ಕ್ರಮ ಕೈಗೊಳ್ಳುವಂತೆ ಬೈಂದೂರಿನ ಜನ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರನ್ನು ಒತ್ತಾಯಿಸಿದ್ದಾರೆ.

    ಬೈಂದೂರು ತಾಪಂ ಸಾಮಾನ್ಯ ಸಭೆ ಮುಂದಿನ ದಿನಗಳಲ್ಲಿ ಬೈಂದೂರು ಪಪಂ ಕಚೇರಿಯ ಮೀಸಲಿಟ್ಟ ಸ್ಥಳದಲ್ಲಿ ನಡೆಸುವಂತೆ ಉಪವಿಭಾಗಾಧಿಕಾರಿಗೆ ತಿಳಿಸಲಾಗಿದೆ. ಹಾಗೆಯೇ 10.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಿನಿ ವಿಧಾನಸೌಧ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಹೌಸಿಂಗ್ ಬೋರ್ಡ್ ವತಿಯಿಂದ ನಿರ್ಮಾಣ ಮಾಡಲಾಗುವುದು. 100 ಹಾಸಿಗೆ ವ್ಯವಸ್ಥೆಯ ತಾಲೂಕು ಆಸ್ಪತ್ರೆ, ತಾಲೂಕು ಪಂಚಾಯಿತಿ ಕಟ್ಟಡ ಹಾಗೂ ನ್ಯಾಯಾಲಯ ನಿರ್ಮಾಣ ಕಾಮಗಾರಿಗೆ ಶೀಘ್ರ ಚಾಲನೆ ದೊರೆಯಲಿದೆ.
    ಬಿ.ಎಂ.ಸುಕುಮಾರ ಶೆಟ್ಟಿ
    ಬೈಂದೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts