More

    ಹಂತದಲ್ಲಿ ತಾಲೂಕು ಕಚೇರಿ ಕಟ್ಟಡ

    ಶಿವು ಹುಣಸೂರು
    ಹುಣಸೂರು ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಹುಣಸೂರು ಉಪವಿಭಾಗ ಮಟ್ಟದ ಸರ್ಕಾರಿ ಆಡಳಿತದ ಶಕ್ತಿಕೇಂದ್ರವೆಂದೇ ಗುರುತಿಸಲ್ಪಡುವ ತಾಲೂಕು ಕಚೇರಿಯ ಕಟ್ಟಡ ಬೀಳುವ ಹಂತದಲ್ಲಿದ್ದು, ಅಧಿಕಾರಿಗಳು ಜೀವಭಯದಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಕೂಡ ಭಯದಲ್ಲೇ ಕಚೇರಿಗೆ ಬಂದು ಕೆಲಸ ಕಾರ್ಯನಿರ್ವಹಿಸಿಕೊಂಡು ಹೋಗಬೇಕಿದೆ.

    ನಾಲ್ಕು ದಶಕಗಳ ಹಿಂದೆ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹುಣಸೂರು ಉಪವಿಭಾಗ ವ್ಯಾಪ್ತಿಯ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ಮತ್ತು ಕೆ.ಆರ್.ನಗರ ತಾಲೂಕುಗಳನ್ನೊಳಗೊಂಡ ಮಿನಿ ವಿಧಾನಸೌಧ ಕಟ್ಟಡವನ್ನು ಉದ್ಘಾಟಿಸಿದ್ದರು. ನಂತರದಲ್ಲಿ ಕಟ್ಟಡದ ನಿರ್ವಹಣೆಯಲ್ಲಿ ಆಸಕ್ತಿ ತೋರದ ಪರಿಣಾಮ ಈಗ ಕಟ್ಟಡದ ಶಿಥಿಲಗೊಂಡು ಬೀಳುವ ಹಂತದಲ್ಲಿದೆ.

    ಬೆಂಗಳೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ, ತಹಸೀಲ್ದಾರ್ ಕಚೇರಿ, ಖಜಾನಾಧಿಕಾರಿಗಳ ಕಚೇರಿ, ಉಪನೋಂದಣಾಧಿಕಾರಿಗಳ ಕಚೇರಿ, ಚುನಾವಣಾ ವಿಭಾಗ, ಸಾರ್ವಜನಿಕ ಪಡಿತರ ವಿತರಣಾ ವಿಭಾಗ, ಎಡಿಎಲ್‌ಆರ್ ಕಚೇರಿ ಸೇರಿದಂತೆ 10ಕ್ಕೂ ಹೆಚ್ಚು ಪ್ರಮುಖ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಕಟ್ಟಡದ ಹೊರಭಾಗ ಸುಂದರವಾಗಿ ಕಂಡರೆ ಒಳಗಿನ ಸ್ಥಿತಿ ಚಿಂತಾಜನಕವಾಗಿದೆ.

    ಕುಸಿದು ಬೀಳುತ್ತಿರುವ ಚಾವಣಿ
    ಮುಖ್ಯ ದ್ವಾರದಿಂದ ಒಳಹೋದ ಕೂಡಲೇ ಕಾರಿಡಾರ್ ಬಳಿಯ ಚಾವಣಿ ಕುಸಿದು ಬಿದ್ದಿರುವುದು ಗೋಚರಿಸುತ್ತದೆ. ಚಾವಣಿಯಿಂದ ಕಬ್ಬಿಣದ ಸರಳುಗಳು ಹೊರಬಂದಿದ್ದು, ಅಪಾಯ ಗೋಚರಿಸುವಂತೆ ಮಾಡಿವೆ. ಗೋಡೆಗಳು ಶೀತ ಹಿಡಿದು ಬೀಳುವ ಹಂತ ತಲುಪಿವೆ.

    ಸೋರುವ ಮೂಲ ದಾಖಲೆಗಳ ಕೊಠಡಿ
    ಉಪವಿಭಾಗ ವ್ಯಾಪ್ತಿಯ ಸರ್ವೇಯರ್ ಇಲಾಖೆಯ ಹಾಗೂ ಸಾರ್ವಜನಿಕರ ಸರ್ಕಾರಿ ದಾಖಲೆಗಳನ್ನು ಇಡುವ ಮೂಲ ದಾಖಲೆಗಳ ಕೊಠಡಿ ಮಳೆಯಿಂದ ಸೋರುತ್ತಿದ್ದು, ದಾಖಲೆಗಳು ನಾಶವಾಗುತ್ತಿವೆ. ದಾಖಲೆಗಳ ರಕ್ಷಣೆಗೆ ಪ್ಲಾಸ್ಟಿಕ್ ಹೊದಿಕೆ ಅಳವಡಿಸಲಾಗಿದೆ. ಚಾವಣಿಯಿಂದ ಸೋರುವ ನೀರು ಹರಿಯದಂತೆ ಬಕೆಟ್, ಪ್ಲಾಸ್ಟಿಕ್ ಡಬ್ಬಿಗಳನ್ನು ಇಡಲಾಗಿದೆ.
    ಕಚೇರಿಯ ಸಿಬ್ಬಂದಿಗೆ ನಿರ್ಮಿಸಿರುವ ಶೌಚಗೃಹ ಬಳಕೆಗೆ ಬಾರದೆ ಪಾಳು ಕೋಣೆಯಂತಾಗಿದೆ. ಮೇಲ್ಛಾವಣಿ ಅಲ್ಲಲ್ಲಿ ಕುಸಿದು ಬೀಳುತ್ತಿರುವುದರಿಂದ ಕಾರಿಡಾರ್‌ನಲ್ಲಿ ಸಾರ್ವಜನಿಕರು ತಿರುಗಾಡಲು ಹೆದರುವಂತಾಗಿದೆ.

    ಸಮರ್ಪಕ ಗಾಳಿ, ಬೆಳಕಿಲ್ಲ
    ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪ್ರತಿದಿನ ಜನಜಂಗುಳಿ ಇರುತ್ತದೆ. ಪ್ರತಿದಿನ ನೂರಕ್ಕೂ ಹೆಚ್ಚು ಆಸ್ತಿಪಾಸ್ತಿಗಳು ನೋಂದಣಿಯಾಗುವ ಕೊಠಡಿಯಲ್ಲಿ ಗಾಳಿ, ಬೆಳಕು ಸಮರ್ಪಕವಾಗಿರದೆ ಉಸಿರುಗಟ್ಟುವ ವಾತಾವರಣ ಇದೆ. ಅಲ್ಲದೆ ಚಿಕ್ಕ ಕೊಠಡಿಯಾಗಿರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

    ಬಳಕೆಗೆ ಬಾರದ ಶೌಚಗೃಹ
    ಉಪವಿಭಾಗ ವ್ಯಾಪ್ತಿಯ ಕಚೇರಿಗೆ ಹುಣಸೂರು, ಎಚ್.ಡಿ.ಕೋಟೆ, ಪಿರಿಯಾಪಟ್ಟಣ ಮೂರು ತಾಲೂಕುಗಳ ರೈತರು ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿರುವ ವಿವಿಧ ವ್ಯಾಜ್ಯಗಳಿಗೆ ಬರುತ್ತಾರೆ. ಪ್ರತಿದಿನ ಸಾವಿರಾರು ಸಾರ್ವಜನಿಕರು ಇಲ್ಲಿಗೆ ಬರುತ್ತಿದ್ದು, ಅವರ ಬಳಕೆಗೆ ಶೌಚಗೃಹ ಇಲ್ಲದಂತಾಗಿದೆ. ಕಟ್ಟಡದ ಹಿಂಭಾಗದಲ್ಲಿ 7 ವರ್ಷಗಳ ಹಿಂದೆ ನಿರ್ಮಿಸಲಾದ ಶೌಚಗೃಹಕ್ಕೆ ಬೀಗ ಹಾಕಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ, ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇಲ್ಲದಿರುವುದು ವಿಪರ್ಯಾವಾಗಿದೆ.

    ಅನೆಕ್ಟ್ ಬಿಲ್ಡಿಂಗ್
    2018ರಲ್ಲಿ ಇಡೀ ಕಟ್ಟಡವನ್ನು ನೆಲಸಮಗೊಳಿಸಿ 12 ಕೋಟಿ ರೂ.ಗಳ ವೆಚ್ಚದಲ್ಲಿ ಅನೆಕ್ಟ್ ಬಿಲ್ಡಿಂಗ್(ಉಪವಿಭಾಗ ಮಟ್ಟದ ಕಚೇರಿ ಸಮುಚ್ಚಯ) ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಅದರಂತೆ ಹಣವೂ ಮಂಜೂರಾಗಿತ್ತು. ನಂತರದಲ್ಲಿ ಈ ಕುರಿತು ಯಾವೊಬ್ಬ ಅಧಿಕಾರಿಯೂ ಕಾಳಜಿ ವಹಿಸದೆ ಹಣ ಸರ್ಕಾರಕ್ಕೆ ವಾಪಸ್ ಹೋಗಿದೆ ಎನ್ನಲಾಗುತ್ತಿದೆ. ತಾಲೂಕಿನ ಜನತೆ ಇನ್ನೆಷ್ಟು ವರ್ಷಗಳ ಕಾಲ ಇದೇ ಕಟ್ಟಡದಲ್ಲಿ ಸೇವೆ ಪಡೆಯಬೇಕೋ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts