More

    ಯುಎಇಯಲ್ಲಿ ಸಿಕ್ಕ ಮೊದಲ ಗೆಲುವಿನ ಬಗ್ಗೆ ರೋಹಿತ್ ಶರ್ಮ ಹೇಳಿದ್ದೇನು?

    ಅಬುಧಾಬಿ: 2014ರ ಐಪಿಎಲ್‌ನಲ್ಲಿ ಯುಎಇಯಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಸೋಲು ಕಂಡಿದ್ದಲ್ಲದೆ, ಹಾಲಿ ಆವೃತ್ತಿಯಲ್ಲೂ ಮೊದಲ ಪಂದ್ಯ ಸೋತು ಆಘಾತ ಎದುರಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಕೊನೆಗೂ ಕೋಲ್ಕತ ನೈಟ್‌ರೈಡರ್ಸ್‌ ವಿರುದ್ಧದ ಬುಧವಾರದ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆದಿದೆ. ಈ ಬಗ್ಗೆ ಮುಂಬೈ ನಾಯಕ ರೋಹಿತ್ ಶರ್ಮ ಸಂತಸ ವ್ಯಕ್ತಪಡಿಸಿದ್ದು, ಈ ಪಂದ್ಯದಲ್ಲಿ ತಮ್ಮ ಯೋಜನೆಗಳೆಲ್ಲ ಕಾರ್ಯಗತವಾದವು ಎಂದಿದ್ದಾರೆ.

    ಮುಂಬೈ 5 ವಿಕೆಟ್‌ಗೆ 195 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದರೆ, ಕೆಕೆಆರ್ ತಂಡ 9 ವಿಕೆಟ್‌ಗೆ 146 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ದಿನೇಶ್ ಕಾರ್ತಿಕ್ (30), ನಿತೀಶ್ ರಾಣಾ (24) ಹೊರತಾಗಿ ಕೊನೆಯಲ್ಲಿ ಪ್ಯಾಟ್ ಕಮ್ಮಿನ್ಸ್ (33) ಮಾತ್ರ ಪ್ರತಿರೋಧ ಒಡ್ಡಿದರು. ಪ್ರಮುಖವಾಗಿ ಇವೊಯಿನ್ ಮಾರ್ಗನ್ (16) ಮತ್ತು ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ (11) ನಿರಾಸೆ ಮೂಡಿಸಿದರು. ಮುಂಬೈ ಪರ ವೇಗಿಗಳಾದ ಟ್ರೆಂಟ್ ಬೌಲ್ಟ್ (30ಕ್ಕೆ 2), ಜೇಮ್ಸ್ ಪ್ಯಾಟಿನ್‌ಸನ್ (25ಕ್ಕೆ 2), ಜಸ್‌ಪ್ರೀತ್ ಬುಮ್ರಾ (32ಕ್ಕೆ 2) ಮತ್ತು ಸ್ಪಿನ್ನರ್ ರಾಹುಲ್ ಚಹರ್ (26ಕ್ಕೆ 2) ಸಂಘಟಿತ ದಾಳಿ ನಡೆಸಿ ಕೆಕೆಆರಗೆ ಕಡಿವಾಣ ಹಾಕಿದರು.

    ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್‌ಗಾಗಿ ತಂಡದ ವೇಗದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಲಾಗಿತ್ತು. ಆದರೆ ಯುಎಇಯಲ್ಲೂ ಮೊದಲ 6 ಓವರ್‌ಗಳ ಕಾಲ ವೇಗದ ಬೌಲಿಂಗ್ ವಿಭಾಗ ಸದೃಢ ದಾಳಿ ನಡೆಸಿತು ಎಂದು ರೋಹಿತ್ ಹೇಳಿದ್ದಾರೆ.

    ಇದನ್ನೂ ಓದಿ: VIDEO: ಧೋನಿ ಸಿಡಿಸಿದ ಸಿಕ್ಸರ್ ಚೆಂಡನ್ನು ಕೊಂಡೊಯ್ದ ದಾರಿಹೋಕ..!

    80 ರನ್ ಸಿಡಿಸಿ ಮುಂಬೈ ಬೃಹತ್ ಮೊತ್ತಕ್ಕೆ ನೆರವಾದ ರೋಹಿತ್, 6 ತಿಂಗಳ ಬಳಿಕ ಮೈದಾನಕ್ಕಿಳಿದು ಹೆಚ್ಚಿನ ಸಮಯ ಬ್ಯಾಟಿಂಗ್ ಮಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಯುಎಇ ವಾತಾವರಣದಲ್ಲಿ ಸುದೀರ್ಘ ಸಮಯ ಆಡುವುದು ಸುಲಭವಲ್ಲ ಎಂದಿದ್ದಾರೆ.

    ಟೂರ್ನಿಯ ಮೊದಲ ಪಂದ್ಯದಲ್ಲಿ ತಂಡ ಆಟಗಾರರಿಗೆ ಲಯ ಸಿಗಲಿಲ್ಲ. ಕಮ್ಮಿನ್ಸ್ ಮತ್ತು ಮಾರ್ಗನ್ ಕ್ವಾರಂಟೈನ್ ಅವಧಿ ಮುಗಿದ ಕೂಡಲೇ ಮೈದಾನಕ್ಕಿಳಿಯಬೇಕಾಯಿತು. ಈ ವಾತಾವರಣಕ್ಕೆ ಅಷ್ಟು ಬೇಗ ಹೊಂದಿಕೊಳ್ಳುವುದು ಸುಲಭವಲ್ಲ ಎಂದು ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಹೇಳಿದ್ದಾರೆ.

    ಕೆಕೆಆರ್ ವಿರುದ್ಧ ಮುಂಬೈಗೆ ಇದು 20ನೇ ಗೆಲುವು. ಈ ಮೂಲಕ ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ 20 ಜಯ ಕಂಡ ಮೊದಲ ತಂಡವೆನಿಸಿತು. ರೋಹಿತ್ (18) ಐಪಿಎಲ್‌ನಲ್ಲಿ ಗರಿಷ್ಠ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಭಾರತೀಯರೆನಿಸಿದರು. ಧೋನಿ ಮತ್ತು ಯೂಸುಫ್​ ಪಠಾಣ್ ತಲಾ 17 ಬಾರಿ ಈ ಸಾಧನೆ ಮಾಡಿದ್ದಾರೆ. ಒಟ್ಟಾರೆಯಾಗಿ ಕ್ರಿಸ್ ಗೇಲ್ (21) ಮತ್ತು ಎಬಿ ಡಿವಿಲಿಯರ್ಸ್‌ (20) ರೋಹಿತ್‌ಗಿಂತ ಮುಂದಿರುವ ಆಟಗಾರರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts