More

    ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ಸಿಗೆ ಕ್ರಮ ಕೈಗೊಳ್ಳಿ

    ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

    ಮಕ್ಕಳ ಭವಿಷ್ಯ ನಿರ್ಧರಿಸುವ ಸಮಯದಲ್ಲಿ ಕೋವಿಡ್-19 ಕಾಡುತ್ತಿದೆ. ಆದರೆ, ಸರ್ಕಾರ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಪರೀಕ್ಷೆ ನಡೆಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡು ಪರೀಕ್ಷೆ ಯಶಸ್ವಿಗೊಳಿಸಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

    ತಾಪಂ ಸಭಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ನಗರ ಸೇರಿ ತಾಲೂಕಿನಲ್ಲಿ 15 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬ ಮಹಿಳಾ ಸೇರಿ ಮೂವರು ಪೊಲೀಸ್ ಕಾನ್​ಸ್ಟೇಬಲ್ ನೇಮಿಸಬೇಕು. ಪರಸ್ಪರ ಅಂತರ ಕಾಯ್ದುಕೊಳ್ಳುವಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ತಲಾ ಒಂದು ಮಾರ್ಗಕ್ಕೆ ಒಬ್ಬ ಸಿಬ್ಬಂದಿ ನೇಮಕ ಮಾಡಬೇಕು ಎಂದು ಡಿವೈಎಸ್​ಪಿ ಟಿ.ವಿ. ಸುರೇಶ ಅವರಿಗೆ ಸೂಚಿಸಿದರು.

    ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆ ಮಾಡಲು ಪ್ರತಿ ಕೇಂದ್ರಕ್ಕೆ ಇಬ್ಬರು ವೈದ್ಯಕೀಯ ಸಿಬ್ಬಂದಿ, ಒಬ್ಬರು ಆಶಾ ಕಾರ್ಯಕರ್ತೆಯರನ್ನು ನೇಮಿಸಬೇಕು. ಎಲ್ಲ ಕೇಂದ್ರಗಳಿಗೂ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಮಷಿನ್ ಪೂರೈಸಬೇಕು. ಅಗತ್ಯ ಔಷಧ ಹಾಗೂ ಉಪಕರಣಗಳನ್ನು ಒದಗಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸಂತೋಷಕುಮಾರ ಅವರಿಗೆ ಸೂಚಿಸಿದರು.

    ಗ್ರಾಮೀಣ ಭಾಗದ ಪರೀಕ್ಷಾ ಕೇಂದ್ರಗಳಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ. ಕಾಂಬಳೆ, ನಗರದ ಕೇಂದ್ರಗಳಿಗೆ ನಗರಸಭೆ ಆಯುಕ್ತ ಡಾ. ಎನ್. ಮಹಾಂತೇಶ ಅವರನ್ನು ನೇಮಕ ಮಾಡಲಾಗಿದೆ. ಆಯಾ ಶಾಲೆಯ ಪ್ರಾಚಾರ್ಯರು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಇಬ್ಬರಂತೆ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ನೇಮಕ ಮಾಡಲು ತಿಳಿಸಬೇಕು ಎಂದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಹಸೀಲ್ದಾರ್ ಬಸನಗೌಡ ಕೋಟೂರು, ಬಿಇಒ ಎನ್. ಶ್ರೀಧರ ಮತ್ತಿತರರಿದ್ದರು.

    ತಾಲೂಕಿನಲ್ಲಿ 2041 ವಿದ್ಯಾರ್ಥಿಗಳು: ಜೂ. 25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಬ್ಯಾಡಗಿ ತಾಲೂಕಿನ 7 ಕೇಂದ್ರಗಳಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಕೆ. ರುದ್ರಮುನಿ ತಿಳಿಸಿದರು.

    ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 7 ಪರೀಕ್ಷಾ ಕೇಂದ್ರಗಳಲ್ಲಿ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಗಿದೆ. ಎಲ್ಲ ಶಿಕ್ಷಕರ ಸಭೆ ನಡೆಸಿದ್ದು, ಮೊಬೈಲ್ ಆಪ್ ಮೂಲಕ ಮಾಹಿತಿ ಕಳುಹಿಸಲಾಗಿದೆ. ಪರೀಕ್ಷೆ ದಿನದಂದು ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಹಾಜರಿರಲು ಸೂಚಿಸಲಾಗಿದೆ. ಪರೀಕ್ಷಾ ಕೊಠಡಿಗೆ ಹೋಗುವ ಮುನ್ನ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಲಾಗುವುದು. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಲು ತಿಳಿಸಲಾಗಿದೆ. ಇಲಾಖೆ, ವಿವಿಧ ಸಂಘ-ಸಂಸ್ಥೆಗಳು ಹಾಗೂ ದಾನಿಗಳಿಂದ ಮಾಸ್ಕ್ ಸಂಗ್ರಹಿಸಿ, ಶಾಲೆಗಳಿಗೆ ತಲುಪಿಸಲಾಗಿದೆ. ಸೋಂಕು ಲಕ್ಷಣ ಇರುವ ಮಕ್ಕಳಿಗೆ ಪ್ರತ್ಯೇಕ ಕೊಠಡಿಗಳನ್ನು ಸಿದ್ಧಪಡಿಸಿದ್ದೇವೆ ಎಂದರು.

    2041 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಆಯಾ ಶಾಲೆ ಹಾಗೂ ಇಲಾಖೆಗಳಿಂದ ಹೆಚ್ಚುವರಿ ವಾಹನ ವ್ಯವಸ್ಥೆ ಮಾಡಲಾಗಿದೆ. ಹೊರಜಿಲ್ಲೆಯ 58 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ತಾಲೂಕಿನ 43 ವಿದ್ಯಾರ್ಥಿಗಳು ಬೇರೆ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. 154ಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಎಲ್ಲರಿಗೂ ಸ್ಯಾನಿಟೈಸರ್ ನೀಡಲಾಗುವುದು. ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದು ಮನವಿ ಮಾಡಿದರು. ಪರೀಕ್ಷಾ ಕೇಂದ್ರಗಳ ಉಸ್ತುವಾರಿ ಅಧಿಕಾರಿ ಬಸವರಾಜ ಸೋಮಕ್ಕಳವರ, ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಎಚ್. ರ್ಬಾ, ಬಿಸಿಯೂಟ ಸಹಾಯಕ ನಿರ್ದೇಶಕ ಬಿ. ತಿಮ್ಮಾರೆಡ್ಡಿ, ಶಿಕ್ಷಕ ಸುಭಾಸ ಬಿ. ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts