More

    ಕಬ್ಬಿನ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಿ

    ಮುಧೋಳ: ಹಲವಾರು ವರ್ಷಗಳಿಂದ ಕಬ್ಬಿನ ಬಿಲ್ ಸಮರ್ಪಕವಾಗಿ ಪಾವತಿಯಾಗದೆ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಬಿಲ್ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮಳೆ ಕೊರತೆಯಿಂದ ಕಂಗಾಲಾಗಿರುವ ಕಬ್ಬು ಬೆಳೆಗಾರರಿಗೆ ಸರ್ಕಾರ ನೆರವು ನೀಡಬೇಕು ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತ ಕಾಂಬಳೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಆರಂಭಿಸುವ ಮುನ್ನವೇ ಈ ಎಲ್ಲ ಸಮಸ್ಯೆಗಳು ನಿವಾರಣೆಯಾಗಬೇಕು. ದರ ನಿಗದಿಯಾದರೆ ರೈತರು, ಸರ್ಕಾರ ಹಾಗೂ ಕಾರ್ಖಾನೆಗಳ ಆಡಳಿತ ಮಂಡಳಿಗೆ ಯಾವುದೇ ಆತಂಕ ಇರುವುದಿಲ್ಲ ಎಂದು ಹೇಳಿದರು.

    ಕಬ್ಬು ಬೆಳೆಗಾರರು ಶೋಷಣೆಗೆ ಒಳಗಾಗುತ್ತಿದ್ದು, ಪ್ರತಿಯೊಂದನ್ನೂ ಹೋರಾಟದ ಮೂಲಕವೇ ಪಡೆಯಬೇಕಾದ ಅನಿವಾರ್ಯತೆ ಇದೆ. 2022-23ನೇ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 2,850 ರೂ. ನೀಡಬೇಕು ಎಂದು ಸರ್ಕಾರ ಆದೇಶಿಸಿದರೂ ಕಾರ್ಖಾನೆಗಳು 2,800 ರೂ. ಮಾತ್ರ ಪಾವತಿಸಿವೆ. ಸರ್ಕಾರದ ಆದೇಶ ಪ್ರಶ್ನಿಸಿ ಕಾರ್ಖಾನೆಗಳ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸರ್ಕಾರದ ಮಾತು ಕೇಳಿ ಬೆಳೆಗಾರರು ಪರಿತಪಿಸುವಂತಾಗಿದೆ ಎಂದು ನೋವು ತೋಡಿಕೊಂಡರು.

    2021-22ನೇ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ ಎರಡನೇ ಕಂತಿನಲ್ಲಿ 62 ರೂ. ನೀಡುವುದಾಗಿ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಒಪ್ಪಿಕೊಂಡರೂ ಹಣ ನೀಡಿಲ್ಲ. ಅವರು ಘೋಷಿಸಿದಂತೆ ಹಣ ನೀಡಿದ್ದರೆ ಬೇರೆಲ್ಲ ಕಾರ್ಖಾನೆಗಳು ಆ ಹಣ ಪಾವತಿಸುತ್ತಿದ್ದವು. ಈ ಬಗ್ಗೆ ಸಭೆ ಕರೆದು ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ಡಿಸಿಗೆ ಮನವಿ ಮಾಡಿದರು.
    ತಾಲೂಕಿನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಗೆ 2022-23ನೇ ಸಾಲಿನಲ್ಲಿ ಕಬ್ಬು ಪೂರೈಸಿದ ರೈತರ ಬಿಲ್ ಪಾವತಿಸಬೇಕು. ಕಬ್ಬು ಕಟಾವು ಸಾಗಣೆ ಮಾಡಿದವರಿಗೆ ಹಾಗೂ ಕಾರ್ಮಿಕರಿಗೆ ವೇತನ ನೀಡಿ ನಂತರ ಕಾರ್ಖಾನೆ ಆರಂಭಿಸಬೇಕು ಎಂದು ಬಸವಂತ ಕಾಂಬಳೆ ಒತ್ತಾಯಿಸಿದರು.

    ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಜನ-ಜಾನುವಾರುಗೆ ಕುಡಿಯುವ ನೀರಿನ ಸಂಕಷ್ಟ ಎದುರಾಗಿದೆ. ಘಟಪ್ರಭಾ ಎಡದಂಡೆ ಕಾಲುವೆಗೆ ಸಮರ್ಪಕವಾಗಿ ನೀರು ಬಿಡುಗಡೆ ಮಾಡಬೇಕು. ಸದ್ಯ ಬಿಡುಗಡೆಯಾಗಿರುವ ನೀರು ಬೆಳಗಾವಿ ಜಿಲ್ಲೆಯನ್ನೂ ದಾಟುತ್ತಿಲ್ಲ. ನಮ್ಮ ಜಿಲ್ಲೆಯಲ್ಲೂ ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ವಿಶೇಷ ಅಧಿಕಾರಿ, ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಮಾತನಾಡಿ, ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಚಿವರು ಈ ಕುರಿತು ಸರ್ಕಾರದ ಮಟ್ಟದಲ್ಲಿ ಯತ್ನಿಸುತ್ತಿದ್ದಾರೆ. ಸರ್ಕಾರದ ಗ್ಯಾರಂಟಿ ಆಧರಿಸಿ ಸಾಲ ಪಡೆದು ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವುದು, ಬ್ಯಾಂಕ್ ಮೂಲಕ ಸಾಲ ತರುವ ಕುರಿತು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

    ಸಕ್ಕರೆ ಮಾರಾಟದಿಂದ ಬರುವ ಹಣದಲ್ಲಿ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಸಲಾಗುವುದು. ಹಿಂದಿನ ಆಡಳಿತ ಮಂಡಳಿಯು ಕಬ್ಬು ಕಟಾವು, ಸಾಗಣೆ ಗುತ್ತಿಗೆದಾರರಿಗೆ ನೀಡಿದ್ದ ಮುಂಗಡ ಹಣವನ್ನು ವಸೂಲು ಮಾಡಲಾಗುತ್ತಿದೆ. ಕಾಕಂಬಿ ಮಾರಾಟದ ಹಣದಿಂದ ಕಾರ್ಮಿಕರ ವೇತನ ನೀಡಲಾಗುತ್ತಿದೆ. ನವೆಂಬರ್‌ನಲ್ಲಿ ಕಾರ್ಖಾನೆ ಆಡಳಿತ ಮಂಡಳಿಯ ಚುನಾವಣೆ ನಡೆಯಲಿದೆ ಎಂದು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ತಹಸೀಲ್ದಾರ್ ವಿನೋದ ಹತ್ತಳ್ಳಿ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಆರ್.ಎನ್. ಪಾಟೀಲ, ಸಿಪಿಐ ಅಯ್ಯನಗೌಡ ಪಾಟೀಲ, ರೈತ ಮುಖಂಡರಾದ ಸುಭಾಷ ಶಿರಬೂರ, ದುಂಡಪ್ಪ ಯರಗಟ್ಟಿ, ಮಹೇಶಗೌಡ ಪಾಟೀಲ, ಮುತ್ತಪ್ಪ ಕೋಮಾರ, ದುಂಡಪ್ಪ ಲಿಂಗರಡ್ಡಿ, ರುದ್ರಪ್ಪ ಅಡವಿ, ಹಣಮಂತ ನಬಾಬ, ಮುತ್ತು ಹೊಸಕೋಟಿ, ವಿಠಲ ತುಂಬರಮಟ್ಟಿ, ಶ್ರೀಕಾಂತ ಕೋಲೂರ, ಹಣಮಂತಗೌಡ ಪಾಟೀಲ ಇದ್ದರು.

    ಸಮಸ್ಯೆ ಪರಿಹಾರಕ್ಕೆ ಯತ್ನ
    ರೈತರ ಸಮಸ್ಯೆ ಆಲಿಸಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ.ಮಾತನಾಡಿ, ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತೇನೆ. ನಾನು ನಿಮ್ಮ್ಮೊಂದಿಗೆ ಇದ್ದೇನೆ. ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುತ್ತೇನೆ. ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳ ಸಭೆ ಕರೆದು ಸ್ಪಷ್ಟ ಸೂಚನೆ ನೀಡುತ್ತೇನೆ ಎಂದರು. ಘಟಪ್ರಭಾ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸಲು ಜಿಎಲ್‌ಬಿಸಿ ಇಂಜಿನಿಯರ್ ಪ್ರಶಾಂತ ಅವರಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts