More

    ಹೋರಾಟ ಇದ್ದರೆ ಮಾತ್ರ ಬದುಕು

    ಮುಧೋಳ: ರೈತ ಸಮೂಹದಲ್ಲಿ ಹೋರಾಟದ ಕಿಚ್ಚು ಹಚ್ಚಿದ ಹೋರಾಟಗಾರ ದಿ.ರಮೇಶ ಗಡದನ್ನವರ ಅವರ ಉಸಿರು ಇರದಿದ್ದರೂ ಪ್ರತಿ ರೈತರ ಉಸಿರಲ್ಲೂ ಅವರು ಉಸಿರಾಟ ಮಾಡುತ್ತಿದ್ದಾರೆ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಹೇಳಿದರು.

    ತಾಲೂಕಿನ ಶಿರೋಳದ ಕಾಡಸಿದ್ದೇಶ್ವರ ದೇವಸ್ಥಾನ ಹತ್ತಿರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯರ್ತರು ಶುಕ್ರವಾರ ಹಮ್ಮಿಕೊಂಡ ರೈತೋತ್ಸವ ಹಾಗೂ ರೈತ ನಾಯಕ ದಿ.ರಮೇಶ ಗಡದನ್ನವರ 62ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

    ವಿದ್ಯುತ್‌ಗಾಗಿ ಹೋರಾಟ ಹಾಗೂ ಕಬ್ಬಿನ ಬೆಲೆಗೆ ವೈಜ್ಞಾನಿಕ ಬೆಲೆ ಬರಲು ರಮೇಶ ಗಡದನ್ನವರ ಕೇವಲ ಮುಧೋಳ ರೈತ ಸಮೂಹಕ್ಕೆ ಸೀಮಿತವಾಗದೆ ಉತ್ತರ ಕರ್ನಾಟಕದ ರೈತರ ಎಲ್ಲ ಕಷ್ಟಗಳಿಗೆ ಸ್ಪಂದಿಸಿದ ಹೆಮ್ಮೆಯ ರೈತ ನಾಯಕರಾಗಿದ್ದರು. ರೈತ ಪರ ಹೋರಾಟ ಮಾಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಹೋರಾಟ ಮಾಡುವ ಸಂದರ್ಭದಲ್ಲಿ ಹೋರಾಟ ಮಾಡಿ ಕೊನೆಯ ಉಸಿರೆಳೆದ ದಿ.ಗಡದನ್ನವರ ಆದರ್ಶ ಎಲ್ಲರೂ ಅಳವಡಿಸಿಕೊಳ್ಳಬೇಕು. ಹೋರಾಟ ಮುಂದುವರಿಯಲಿ, ಮನೆಗೊಬ್ಬ ರಮೇಶ ಗಡದನ್ನವರ ಹುಟ್ಟಿ ಬರಲಿ ಎಂದು ಹೇಳಿದರು.

    ಆಶುಕವಿ, ಜನಪದ ಸಾಹಿತಿ ಸಿದ್ದಪ್ಪ ಬಿದರಿ ಮಾತನಾಡಿ, ದಿ.ಗಡದನ್ನವರ ಹೋರಾಟ ಕೇವಲ ಮಾತಿನಲ್ಲಿ ಹೇಳದೆ ಮಾಡಿ ತೋರಿಸಿದ ಮಹಾನ್ ವ್ಯಕ್ತಿ. ರೈತ ಸಂಘದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ರೈತ ಸಂಘಕ್ಕೆ ಕೇವಲ ಒಬ್ಬರೇ ನಾಯಕರಲ್ಲ. ರೈತ ಸಂಘದಲ್ಲಿರುವವರೆಲ್ಲರೂ ನಾಯಕರು ಎಂದು ಹೇಳಿದಂತಹ ಮಹಾನ್ ವ್ಯಕ್ತಿ ರಮೇಶ ಗಡದನ್ನವರ ಎಂದು ಹೇಳಿದರು.

    ನ್ಯಾಯವಾದಿ ಪ್ರಕಾಶ ವಸದ ಮಾತನಾಡಿ, ರೈತ ಸಮುದಾಯ ನನ್ನ ಕುಟುಂಬ ಎಂದು ಹೇಳಿ ಸಾವಿರಾರು ರೈತರು, ಮಹಿಳೆಯರನ್ನು ಸಮಾಜದಲ್ಲಿ ಮುಖ್ಯ ವೇದಿಕೆಗೆ ತಂದ ರಮೇಶ ಗಡದನ್ನವರ ಆದರ್ಶಗಳು ಎಲ್ಲೆಡೆ ಹರಡಬೇಕು ಎಂದು ಹೇಳಿದರು.

    ಹಳಿಂಗಳಿ ಮಹಾವೀರಪ್ರಭು ಸ್ವಾಮೀಜಿ ಮಾತನಾಡಿ, ಪ್ರಾಮಾಣಿಕ, ದಕ್ಷತೆಯಿಂದ ರೈತ ಸಂಘವನ್ನು ಕಟ್ಟಿದ ಗಡದನ್ನವರ ರೈತ ಸಮುದಾಯವನ್ನು ಸದೃಢಗೊಳಿಸಿದ್ದಾರೆ. ಗ್ರಾಮಗಳ ಸ್ವಚ್ಛತೆ ಹಾಗೂ ಶುದ್ಧ ಕುಡಿಯುವ ನೀರು ಗ್ರಾಮದ ಪ್ರತಿಯೊಬ್ಬರಿಗೂ ಸಿಗಬೇಕು. ರೈತರು ಸದಾಕಾಲ ಸಂತಸದಿಂದ ಇರಬೇಕು ಎನ್ನುವ ಕಾರಣ ಹೋರಾಟ ಮಾಡಿ ಜೀವನ ಸಾಗಿಸಿ ಕೊನೆಯುಸಿರೆಳೆದ ನಾಯಕನ ಸ್ಮರಣೆ ನಮ್ಮೆಲ್ಲರ ಹೃದಯದಲ್ಲಿದೆ ಎಂದರು.

    ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಕಡಕೋಳ, ರೈತ ಮುಖಂಡ ಸುಭಾಸ ಶಿರಬೂರ, ಗೋವಿಂದಪ್ಪ ಗುಜ್ಜನವರ, ಬಸಪ್ಪ ವಾಲಿಮರದ, ಶಂಕರ ಚಿಂಚಲಿ, ದುಂಡಪ್ಪ ಯರಗಟ್ಟಿ, ಬಸವರಾಜ ಕಾಂಬಳೆ, ಶಂಕರ ಚಿಂಚಲಿ, ಅಪ್ಪಾಸಾಹೇಬ ಸಂಗಣ್ಣವರ, ರಾಕೇಶ ಗಡದನ್ನವರ, ವೆಂಕಣ್ಣ ಮಳಲಿ ಉಪಸ್ಥಿತರಿದ್ದರು.
    ರಮೇಶ ಗಡದನ್ನವರ ಭಾವಚಿತ್ರದ ಮೆರವಣಿಗೆ ಸಕಲ ವಾದ್ಯ ವೃಂದದೊಂದಿಗೆ ಶಿರೋಳದ ಗಡದನ್ನವರ ಸರ್ಕಲ್‌ದಿಂದ ವೇದಿಕೆವರೆಗೆ ನಡೆಯಿತು.

    ಹೋರಾಟದ ಕಿಚ್ಚು ಹಚ್ಚಿ ರೈತರಿಗೆ ನ್ಯಾಯ ಕೊಡಿಸುತ್ತಿದ್ದ ನಮ್ಮ ತಂದೆಯವರು ನಮ್ಮ ಕುಟುಂಬವನ್ನು ಎಷ್ಟು ಪ್ರೀತಿಸುತ್ತಿದ್ದರೋ ಆ ಪ್ರೀತಿಗಿಂತಲೂ ರೈತ ಸಮೂಹವನ್ನು ತಮ್ಮ ಕುಟುಂಬವೆಂಬಂತೆ ಪ್ರೀತಿಸುತ್ತಿದ್ದರು. ಆವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಾನು ನಡೆಯುತ್ತಿದ್ದೇನೆ.
    ರಾಕೇಶ ಗಡದನ್ನವರ, ದಿ.ರಮೇಶ ಗಡದನ್ನವರ ಪುತ್ರ
    
    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts