More

    ಕಲಿತ ಸ್ಕೂಲ್‌ಗೆ ಬಣ್ಣ ಹಚ್ಚಿದ ಹಳೇ ವಿದ್ಯಾರ್ಥಿಗಳು

    ಕಮಲಾಪುರ: ತಾವು ಅಕ್ಷರ ಕಲಿತ ಶಾಲೆ ಸುಂದರವಾಗಿ ಕಾಣಬೇಕು ಎಂಬ ಉದ್ದೇಶದಿಂದ ಹಳೆಯ ವಿದ್ಯಾರ್ಥಿಳೆಲ್ಲ ಸೇರಿಕೊಂಡು ತಡಕಲ್​ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಸುಣ್ಣ- ಬಣ್ಣ ಹಚ್ಚಿ ಕಂಗೊಳಿಸುವಂತೆ ಮಾಡಿದ್ದಾರೆ.

    ೧೯೬೦ರಲ್ಲಿ ಶಾಲೆ ಆರಂಭವಾಗಿದ್ದು, ಸುಮಾರು ೬೦ ವರ್ಷಗಳಾಗಿವೆ. ೨೦೧೨ರಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ದಶಕ ಕಳೆದರೂ ಬಣ್ಣ ಕಾಣದೆ ಗೋಡೆಗಳು ಕಳೆ ಕಳೆದುಕೊಂಡಿದ್ದವು, ಇದನ್ನು ಗಮನಿಸಿದ ೨೦೦೩-೦೪ನೇ ಸಾಲಿನ ೮ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಹಳೆಯ ವೈಭವ ತಂದುಕೊಡುವುದಕ್ಕೆ ನಿರ್ಧರಿಸಿದರು. ಎಲ್ಲರೂ ಒಂದಿಷ್ಟು ಹಣ ಸಂಗ್ರಹಿಸಿ, ಬಣ್ಣ ಬಳಿಯುವ ಕೆಲಸ ಮಾಡಿದ್ದಾರೆ.

    ಹಳೆಯ ಶಾಲೆಗೆ ಹೊಸ ಟಚ್ ನೀಡುವುದರ ಜತೆಗೆ ತಾವು ಅಭ್ಯಾಸ ಮಾಡುವಾಗ ಬೋಧನೆ ಮಾಡಿ ಶಿಕ್ಷಕರನ್ನು ಹಾಗೂ ಟ್ಯೂಷನ್ ಹೇಳಿದ ಗುರುಗಳನ್ನು ಸತ್ಕರಿಸಲು ನಿರ್ಧರಿಸಿದ್ದಾರೆ. ತಾವು ಕಲಿತ ಶಾಲೆಯಲ್ಲಿಯೇ ಶುಕ್ರವಾರ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ.

    ಶಿಕ್ಷಣ ಪಡೆದು ಊರಿನಿಂದ ದೂರವುಳಿಯವು ಜನರೇ ಇರುವ ಇಂದಿನ ದಿನಗಳಲ್ಲಿ ತಾವು ಕಲಿತ ಶಾಲೆಗೆ ಸುಣ್ಣ- ಬಣ್ಣ ಬಳಿಯುವುದರ ಜತೆಗೆ ಅಕ್ಷರ ಕಲಿಸಿದ ಶಿಕ್ಷಕರನ್ನು ಸತ್ಕರಿಸುತ್ತಿರುವ ಯುವಕರ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದ್ದಾರೆ.

    ಗುರುವಂದನೆ ಸಮಾರಂಭ ನಾಳೆ: ಕಲಿತ ಶಾಲೆಗೆ ಹೊಸ ಕಳೆ ನೀಡುವುದರ ಜತೆಗೆ ವಿದ್ಯೆ ನೀಡಿದ ಗುರುಗಳನ್ನು ಸನ್ಮಾನಿಸುವುದಕ್ಕಾಗಿ ೨೦೦೩-೦೪ನೇ ಸಾಲಿನ ೮ನೇ ತರಗತಿ ವಿದ್ಯಾರ್ಥಿಗಳು ತಡಕಲ್​ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ೧೦ಕ್ಕೆ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಶಾಸಕ ಬಸವರಾಜ ಮತ್ತಿಮಡು, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ, ಬಿಆರ್‌ಸಿ ಡಾ.ಶಾಂತಾಬಾಯಿ ಬಿರಾದಾರ ಇತರರು ಭಾಗವಹಿಸಲಿದ್ದಾರೆ. ಮುಖ್ಯಗುರು ಸೂರ್ಯಕಾಂತ ಅಧ್ಯಕ್ಷತೆ ವಹಿಸುವರು.

    ವಿದ್ಯೆ ಕಲಿಸಿದ ಗುರುಗಳು ಹಾಗೂ ವಿದ್ಯಾಲಯದ ಋಣ ಮುಟ್ಟಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ, ಎಲ್ಲ ಸಹ ಪಾಠಿಗಳು ಸೇರಿ ಚಿಕ್ಕ ಸೇವೆ ಸಲ್ಲಿಸುತ್ತಿದ್ದೇವೆ. ಗುರುವಂದನೆ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಸಹಕರಿಸಿ.
    | ಸದಾಶಿವ ಚನ್ನಪ್ಪಗೋಳ, ತಡಕಲ್​ ಶಾಲೆ ಹಳೆಯ ವಿದ್ಯಾರ್ಥಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts