More

    ಟಿ20 ವಿಶ್ವಕಪ್: ಟೀಮ್​ ಇಂಡಿಯಾದಲ್ಲಿ ವಿಕೆಟ್​ ಕೀಪರ್​ ಸ್ಥಾನ ಸಂಪಾದಿಸಲು ಐವರ ಪೈಪೋಟಿ; ಕುತೂಹಲ ಕೆರಳಿಸಿದ ಆಯ್ಕೆ

    ಬೆಂಗಳೂರು: ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ತಂಡಗಳನ್ನು ಅಂತಿಮಗೊಳಿಸುವ ದಿನ ಹತ್ತಿರ ಬರುತ್ತಿದೆ. ಐಸಿಸಿ ಮೇ 1ರವರೆಗೆ ಗಡುವು ನೀಡಿದ್ದರೂ, ಬಿಸಿಸಿಐ ಏಪ್ರಿಲ್​ 28 ಅಥವಾ 29ರಂದೇ ತಂಡವನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ. ಅಂದರೆ ಐಪಿಎಲ್​ 17ನೇ ಆವೃತ್ತಿಯ ಮೊದಲ 46-47 ಪಂದ್ಯಗಳ ನಿರ್ವಹಣೆಯ ಆಧಾರದಲ್ಲಿ ವಿಶ್ವಕಪ್​ ತಂಡದ ಆಯ್ಕೆ ನಡೆಯಲಿದೆ. ಈ ಪೈಕಿ ನಾಯಕನ ಸಹಿತ ಬ್ಯಾಟಿಂಗ್​-ಬೌಲಿಂಗ್​ ವಿಭಾಗದ ಬಹುತೇಕ ಆಟಗಾರರ ಆಯ್ಕೆ ಈಗಾಗಲೆ ಅಂತಿಮವಾಗಿದ್ದರೂ, ವಿಕೆಟ್​ ಕೀಪರ್​ ಆಯ್ಕೆ ಮಾತ್ರ ಇನ್ನೂ ಸಾಕಷ್ಟು ಕುತೂಹಲಕಾರಿಯಾಗಿಯೇ ಉಳಿದಿದೆ. ಸದ್ಯಕ್ಕೆ ಐವರು ಆಟಗಾರರು ಭಾರತ ತಂಡದ ವಿಕೆಟ್​ ಕೀಪರ್​ ಸ್ಥಾನದ ರೇಸ್​ನಲ್ಲಿ ಪೈಪೋಟಿಯಲ್ಲಿದ್ದು, ಅವರ ಆಯ್ಕೆ ಸಾಧ್ಯತೆಯ ಸಂಪ್ತ ಲೆಕ್ಕಾಚಾರ ಇಲ್ಲಿದೆ.

    *ರಿಷಭ್​ ಪಂತ್​
    ಭೀಕರ ಕಾರು ಅಪಘಾತದಿಂದ ಚೇತರಿಸಿಕೊಂಡು ಐಪಿಎಲ್​ನಲ್ಲಿ ಯಶಸ್ವಿ ಪುನರಾಗಮನ ಕಂಡಿರುವ ರಿಷಭ್​ ಪಂತ್​ ಇದೇ ಆಧಾರದಲ್ಲಿ ಟೀಮ್​ ಇಂಡಿಯಾಗೂ ಪ್ರವೇಶ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಟೆಸ್ಟ್​-ಏಕದಿನಕ್ಕೆ ಹೋಲಿಸಿದರೆ, ಟಿ20ಯಲ್ಲಿ ಪಂತ್​ ನಿರ್ವಹಣೆ ಅಷ್ಟೇನೂ ತೃಪ್ತಿಕರ ಎನಿಸಿರಲಿಲ್ಲ. 2022ರ ಟಿ20 ವಿಶ್ವಕಪ್​ನಲ್ಲೂ ಅವರು ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಆಗಿರಲಿಲ್ಲ. ಆದರೆ ಹಾಲಿ ಐಪಿಎಲ್​ನಲ್ಲಿ ಗುಜರಾತ್​ ವಿರುದ್ಧದ ಭರ್ಜರಿ ನಿರ್ವಹಣೆಯ ಬಳಿಕ ಕೀಪರ್​ ಸ್ಥಾನಕ್ಕೆ ಅವರೇ ಫೇವರಿಟ್​ ಆಗಿ ಹೊರಹೊಮ್ಮಿದ್ದಾರೆ.
    ಹಾಲಿ ಐಪಿಎಲ್​ ನಿರ್ವಹಣೆ: ಪಂದ್ಯ: 9, ರನ್​: 342, ಅರ್ಧಶತಕ: 3, ಕ್ಯಾಚ್​/ಸ್ಟಂಪಿಂಗ್​: 10/3.

    *ಕೆಎಲ್​ ರಾಹುಲ್​
    ಕನ್ನಡಿಗ ಕೆಎಲ್​ ರಾಹುಲ್​ 2021&2022ರ ಟಿ20 ವಿಶ್ವಕಪ್​ಗಳಲ್ಲಿ ಆಡಿದ್ದರೂ, ಆಗ ತಂಡದ ವಿಕೆಟ್​ ಕೀಪರ್​ ಆಗಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ 2022ರ ವಿಶ್ವಕಪ್​ ನಂತರದಲ್ಲಿ ಅವರು ಭಾರತ ಪರ ಟಿ20 ಪಂದ್ಯವನ್ನೇ ಆಡಿಲ್ಲ. ಇದರ ಹೊರತಾಗಿಯೂ 2023ರ ಏಕದಿನ ವಿಶ್ವಕಪ್​ನಲ್ಲಿ ವಿಕೆಟ್​ ಕೀಪರ್​ ಆಗಿ ಸಾಧಿಸಿದ ಯಶಸ್ಸಿನಿಂದಾಗಿ ಅವರು, ಐಪಿಎಲ್​ನಲ್ಲೂ ಲಖನೌ ಪರ ವಿಕೆಟ್​ ಕೀಪರ್​ ಆಗಿ ಆಡುವ ಮೂಲಕ ಟಿ20 ವಿಶ್ವಕಪ್​ ರೇಸ್​ನಲ್ಲಿದ್ದಾರೆ. ಆರಂಭಿಕ-ಮಧ್ಯಮ ಕ್ರಮಾಂಕದ ಬ್ಯಾಟರ್​ ಆಗಿ ಆಡುವ ಸಾಮರ್ಥ್ಯವಿದೆ. ಆದರೆ ಸಾಧಾರಣ ಸ್ಟ್ರೈಕ್​ರೇಟ್​ ಹಿನ್ನಡೆ ಎನಿಸಿದೆ.
    *ಹಾಲಿ ಐಪಿಎಲ್​ ನಿರ್ವಹಣೆ: ಪಂದ್ಯ: 8, ರನ್​: 302, ಅರ್ಧಶತಕ: 2, ಕ್ಯಾಚ್​/ಸ್ಟಂಪಿಂಗ್​: 9/2.

    *ಸಂಜು ಸ್ಯಾಮ್ಸನ್​
    ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ನಾಯಕ-ಬ್ಯಾಟರ್​-ಕೀಪರ್​ ಆಗಿ ಯಶಸ್ಸು ಕಂಡಿರುವುದು ಸಂಜು ಸ್ಯಾಮ್ಸನ್​ ಆಯ್ಕೆಗೂ ಬಲ ತುಂಬಿದೆ. ಆದರೆ ಈ ಹಿಂದೆ ಭಾರತ ಪರ ಕೆಲ ಟಿ20 ಪಂದ್ಯ ಆಡಿದ್ದರೂ, ಆ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಹೀಗಾಗಿ ಐಪಿಎಲ್​ ನಿರ್ವಹಣೆ ಆಧಾರದಲ್ಲೇ ಅವರನ್ನು ಆರಿಸಲಾಗುವುದೇ ಎಂಬುದು ಖಚಿತವಿಲ್ಲ.
    ಹಾಲಿ ಐಪಿಎಲ್​ ನಿರ್ವಹಣೆ: ಪಂದ್ಯ: 8, ರನ್​: 192, ಅರ್ಧಶತಕ: 1, ಕ್ಯಾಚ್​/ಸ್ಟಂಪಿಂಗ್​: 6/0.

    *ಇಶಾನ್​ ಕಿಶನ್​
    ಕಳೆದ ಚುಟುಕು ಕ್ರಿಕೆಟ್​ ವಿಶ್ವಕಪ್​ ನಂತರದಲ್ಲಿ ಭಾರತ ಪರ ಸರ್ವಾಧಿಕ 13 ಟಿ20 ಪಂದ್ಯವಾಡಿರುವ ವಿಕೆಟ್​ ಕೀಪರ್​ ಇಶಾನ್​ ಕಿಶನ್​. ಅದರಲ್ಲಿ ಉತ್ತಮ ನಿರ್ವಹಣೆಯನ್ನೂ ತೋರಿದ್ದರು. ಆದರೆ ಇತ್ತೀಚೆಗೆ ರಣಜಿ ಟ್ರೋಫಿಯಲ್ಲಿ ಆಡದೆ ದೇಶೀಯ ಕ್ರಿಕೆಟ್​ ಕಡೆಗಣಿಸುವ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿರುವ ಕಿಶನ್​ರನ್ನು ಆಯ್ಕೆಗೆ ಪರಿಗಣಿಸಲಾಗುವುದೇ ಎಂಬ ಪ್ರಶ್ನೆ ಇದೆ. ಐಪಿಎಲ್​ನಲ್ಲೂ ಅವರ ನಿರ್ವಹಣೆ ಅಸ್ಥಿರವಾಗಿದೆ.
    *ಹಾಲಿ ಐಪಿಎಲ್​ ನಿರ್ವಹಣೆ: ಪಂದ್ಯ: 8, ರನ್​: 254, ಅರ್ಧಶತಕ: 2, ಕ್ಯಾಚ್​/ಸ್ಟಂಪಿಂಗ್​: 8/3.

    *ದಿನೇಶ್​ ಕಾರ್ತಿಕ್​
    ಅನುಭವಿ ಆಟಗಾರ ದಿನೇಶ್​ ಕಾರ್ತಿಕ್​ 2022ರಂತೆ ಈ ಬಾರಿ ಮತ್ತೆ ಟಿ20 ವಿಶ್ವಕಪ್​ ವರ್ಷದಲ್ಲಿ ಐಪಿಎಲ್​ನಲ್ಲಿ ಗಮನಸೆಳೆಯುತ್ತಿದ್ದಾರೆ. ಕಳೆದ ಟಿ20 ವಿಶ್ವಕಪ್​ನಲ್ಲಿ ಫಿನಿಷರ್​ ಪಾತ್ರದೊಂದಿಗೆ ಅವರೇ ಮೊದಲ ಆಯ್ಕೆಯ ಕೀಪರ್​ ಆಗಿದ್ದರು. ಈ ಸಲವೂ ಆರ್​ಸಿಬಿ ವೈಫಲ್ಯದ ನಡುವೆ 38 ವರ್ಷದ ಕಾರ್ತಿಕ್​ ಗರ್ಜಿಸುತ್ತಿದ್ದಾರೆ. ಆದರೆ ಆಯ್ಕೆಗಾರರು ಈ ಬಾರಿ ಮತ್ತೆ ಭವಿಷ್ಯದತ್ತ ಗಮನಹರಿಸುವ ಬದಲಾಗಿ, ಅನುಭವಕ್ಕೆ ಮಣೆ ಹಾಕುವರೇ ಎಂಬ ಕುತೂಹಲವಿದೆ.
    ಹಾಲಿ ಐಪಿಎಲ್​ ನಿರ್ವಹಣೆ: ಪಂದ್ಯ: 8, ರನ್​: 251, ಅರ್ಧಶತಕ: 2, ಕ್ಯಾಚ್​/ಸ್ಟಂಪಿಂಗ್​: 1/0.

    ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ಗೆ ಇಂದು 51ನೇ ಜನ್ಮದಿನದ ಸಂಭ್ರಮ; ಇಲ್ಲಿವೆ ಅವರ 51 ದಾಖಲೆಗಳ ಮೆಲುಕು…

    IPL 2024: ಸಂದೀಪ್​-ಯಶಸ್ವಿ ಸಾಹಸ; ಮುಂಬೈ ಎದುರು ರಾಜಸ್ಥಾನ ರಾಯಲ್ಸ್​​ಗೆ ಸುಲಭ ಜಯ, ಪ್ಲೇಆಫ್​ಗೆ ಸನಿಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts