More

    ಕಬ್ಬು ಬೆಳೆಗಾರರಿಗೆ ಸಿಹಿ; ಹೊಸ ತಳಿ ಶೋಧ, ಎಕರೆಗೆ 55-60 ಟನ್ ಇಳುವರಿ…

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ರಾಜ್ಯದ ಕಬ್ಬು ಬೆಳೆಗಾರರಿಗೆ ಬೆಳಗಾವಿಯ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸಿಹಿ ಸುದ್ದಿ ನೀಡಿದೆ. ಹೆಚ್ಚಿನ ಆದಾಯ ತಂದುಕೊಡಬಲ್ಲ, ಹೆಚ್ಚು ಸಕ್ಕರೆ ಅಂಶ ಹೊಂದಿರುವ ‘ಸಿಒ-18024’ ಎಂಬ ಹೊಸ ಕಬ್ಬಿನ ತಳಿಯನ್ನು ಸಂಸ್ಥೆ ಅಭಿವೃದ್ಧಿಪಡಿಸಿದೆ. ತಮಿಳುನಾಡಿನ ಕೊಯಮತ್ತೂರಿನ ಕಬ್ಬು ಸಂವರ್ಧನೆ ಸಂಸ್ಥೆಯ ಸಹಯೋಗದಲ್ಲಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ವಿಜ್ಞಾನಿಗಳು 2015ರಿಂದಲೇ ತೊಡಗಿಕೊಂಡಿದ್ದು, ಸಿಒ-18024 ಎಂಬ ತಳಿ ಸಂಶೋಧನೆ ಮಾಡಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಬೆಳೆಯಲಾಗುತ್ತಿದೆ. ಈ ತಳಿಯಿಂದ ಪ್ರತಿ ಎಕರೆಗೆ ಕನಿಷ್ಠ 55 ರಿಂದ 60 ಟನ್ ಇಳುವರಿ ಬರುತ್ತದೆ. ರೈತರು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚು ಆದಾಯವನ್ನೂ ತರಲಿದೆ. ಅತಿವೃಷ್ಟಿ, ಅನಾವೃಷ್ಟಿ , ಕೈ ಸೇರದ ಬಿಲ್ ಮುಂತಾದ ಸಮಸ್ಯೆಗಳಿಂದ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಇದು ವರದಾನವಾಗಲಿದೆ.

    ವೈಪರೀತ್ಯ ಎದುರಿಸುವ ಶಕ್ತಿ: ಬೆಳಗಾವಿ ಮತ್ತು ಹುಕ್ಕೇರಿ ತಾಲೂಕಿನ ಕೃಷಿ ಸಂಶೋಧನಾ ಕೇಂದ್ರದಲ್ಲಿ ಈ ತಳಿಯನ್ನು ಪ್ರಾಯೋಗಿಕವಾಗಿ ಬೆಳೆಯಲಾಗಿದ್ದು, ನಿರೀಕ್ಷಿತ ಫಲಿತಾಂಶ ಸಿಕ್ಕಿದೆ. ಹೊಸ ತಳಿಯ ಬೀಜವನ್ನು ಸಕ್ಕರೆ ಕಾರ್ಖಾನೆಗಳ ಮೂಲಕ ಮತ್ತು ರೈತರಿಗೆ ನೇರವಾಗಿ ನೀಡಲಾಗುತ್ತಿದೆ. ಹೊಸ ತಳಿ ಈವರೆಗಿನ ತಳಿಗಳಿಗಿಂತ ಭಿನ್ನವಾಗಿದ್ದು, ಹವಾಮಾನ ವೈಪರೀತ್ಯ ಎದುರಿಸಿ ಬೆಳೆಯುವ ಸಾಮರ್ಥ್ಯವನ್ನೂ ಹೊಂದಿದೆ.

    ಕಾರ್ಖಾನೆಗಳಿಗೂ ಲಾಭ: ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಸಂಸ್ಥೆಯ ಸಾತನೂರ ಕೃಷಿ ಸಂಶೋಧನಾ ಕೇಂದ್ರದ 3 ಎಕರೆ ಪ್ರದೇಶದಲ್ಲಿ ಸಿಒ-18024 ತಳಿಯ ಕಬ್ಬು ಬೆಳೆಯಲಾಗಿದೆ. 2021-22ನೇ ಸಾಲಿನ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳ ಮೂಲಕ ರೈತರಿಗೆ ಈ ತಳಿಯ ಬೀಜ ವಿತರಣೆ ಆಗಲಿದೆ. ದಕ್ಷಿಣ ಕರ್ನಾಟಕ ಭಾಗದ ವಾತಾವರಣಕ್ಕೆ ಅನುಗುಣವಾಗಿ ಈ ಬೀಜ ಅಭಿವೃದ್ಧಿಗೊಂಡಿದ್ದು, ರೈತರಿಗೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಲಾಭತರಲಿದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು ಮತ್ತು ಕಬ್ಬು ತಜ್ಞರು.

    ಸಿಒ-18024 ತಳಿಯ ಕಬ್ಬು ಬೆಳೆಯಲು ರೈತರಿಗೆ ಪ್ರಾಯೋಗಿಕವಾಗಿ ಬೀಜ ವಿತರಿಸಲಾಗಿದೆ. ಇದು ಬೆಳೆಗಾರರು, ಸಕ್ಕರೆ ಕಾರ್ಖಾನೆ ಗಳಿಗೆ ಲಾಭ ತರಲಿದೆ. ಮಂಡ್ಯದಲ್ಲಿ ವಾತಾವರಣಕ್ಕೆ ಅನುಗುಣವಾಗಿ ಬೀಜ ಅಭಿವೃದ್ಧಿಪಡಿಸಲಾಗಿದೆ.

    | ಆರ್.ಬಿ.ಖಾಂಡಗಾವೆ ನಿರ್ದೇಶಕ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ

    ವಿಶೇಷತೆ

    • ಪೂರ್ಣ ಬಲಿತರೂ ಹೂವು ಬಿಡುವುದಿಲ್ಲ
    • ಅಧಿಕ ಕುಳೆ ನೀಡುವ ಸಾಮರ್ಥ್ಯ ಹೊಂದಿದೆ
    • ಮಳೆ, ಗಾಳಿಗೆ ಬೀಳುವುದಿಲ್ಲ
    • ಕಟಾವು ತಡವಾದರೂ ಸತ್ವ ಕಾಯ್ದುಕೊಳ್ಳುತ್ತದೆ
    • ಎಕರೆಗೆ ಕನಿಷ್ಠ 55 ರಿಂದ 60 ಟನ್ ಇಳುವರಿ
    • 12 ತಿಂಗಳಿಗೆ ಕಟಾವಿಗೆ ಬರುತ್ತದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts