More

    ಮಂಗ್ಳೂರು ಕೆವಿಕೆಗೂ ಬಂತು ಸ್ವರ್ಣಧಾರ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಕುಕ್ಕುಟ ಪ್ರಿಯರ ಬಹುನಿರೀಕ್ಷೆಯ ಕೋಳಿ ತಳಿ ಸ್ವರ್ಣಧಾರ ಮರಿಗಳು ಲಾಕ್‌ಡೌನ್ ಬಳಿಕ ಮಂಗಳೂರು ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ)ಕ್ಕೆ ಪ್ರಥಮ ಬಾರಿಗೆ ತಲುಪಿವೆ. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಿಂದ ಈ ಮರಿಗಳು ಪೂರೈಕೆ ಆಗುತ್ತವೆ.

    ವರ್ಷಕ್ಕೆ 180-200 ಮೊಟ್ಟೆ ಹಾಗೂ ನಾಟಿ ಕೋಳಿಯ ಸ್ವಾದಿಷ್ಟ ಮಾಂಸದ ರುಚಿ ಹೊಂದಿರುವ ಸ್ವರ್ಣಧಾರ ರಾಜ್ಯಾದ್ಯಂತ ಜನಪ್ರಿಯವಾಗಿರುವ ಕಾಲದಲ್ಲೇ ಕರೊನಾ ಲಾಕ್‌ಡೌನ್ ಕಾರಣದಿಂದ ಮಂಗಳೂರು ಭಾಗಕ್ಕೆ ಸ್ವರ್ಣಧಾರ ಕೋಳಿಮರಿಗಳ ಪೂರೈಕೆ ಪೂರ್ಣ ನಿಂತುಹೋಗಿತ್ತು.

    ಮಂಗಳೂರು ಭಾಗವೊಂದರಲ್ಲೇ ಕೆವಿಕೆಯಲ್ಲಿ 40 ಸಾವಿರಕ್ಕೂ ಅಧಿಕ ಕೋಳಿ ಮರಿಗಳಿಗೆ ಜನರು ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಈಗ ಲಾಕ್‌ಡೌನ್ ಬಳಿಕ ಕೆವಿಕೆಗೆ ಮೊದಲ ಸುತ್ತಿನಲ್ಲಿ ಬಂದಿರುವುದು 1000 ಮರಿಗಳು ಮಾತ್ರ. ಕೆವಿಕೆ ತಲುಪಿರುವ ಮರಿಗಳು ಪ್ರತ್ಯೇಕ ಕೋಳಿ ಮನೆಗಳಲ್ಲಿ ತಜ್ಞರ ಉಪಚಾರದಲ್ಲಿದ್ದು, ಪ್ರಮುಖ ಮೂರು ವ್ಯಾಕ್ಸಿನ್‌ಗಳು ಪೂರ್ಣಗೊಂಡ ಬಳಿಕ ಮಾರ್ಚ್ 20ರಿಂದ ಮಾರಾಟವಾಗಲಿವೆ.

    ಸ್ವರ್ಣಧಾರ ಯಾಕೆ?: ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಕುಕ್ಕುಟ ವಿಭಾಗದ ವಿಜ್ಞಾನಿಗಳು ಜನಪ್ರಿಯ ಗಿರಿರಾಜ ತಳಿಯನ್ನು ಅಭಿವೃದ್ಧಿಪಡಿಸಿ 2005 ರಲ್ಲಿ ಅಧಿಕ ಮೊಟ್ಟೆ ಇಡುವ ಮತ್ತು ರುಚಿಕರ ಮಾಂಸವನ್ನು ನೀಡುವ ಸ್ವರ್ಣಧಾರ ತಳಿ ಕೋಳಿಯನ್ನು ಬಿಡುಗಡೆ ಮಾಡಿದ್ದಾರೆ. ಪುಕ್ಕ, ಬಣ್ಣ, ರೂಪ ಮತ್ತು ಸ್ವಭಾವದಲ್ಲಿ ನಾಟಿ ಕೋಳಿಯನ್ನೇ ಹೋಲುವ ಈ ತಳಿಯ ಕೋಳಿಗಳು ಸರಾಸರಿ ಎರಡು ದಿನಕ್ಕೊಮ್ಮೆ ಮೊಟ್ಟೆ ಇಡಬಲ್ಲವು. ವಾರ್ಷಿಕ ಒಂದು ನಾಟಿ ಕೋಳಿ 60- 70 ಮೊಟ್ಟೆ ಇಟ್ಟರೆ, ಗಿರಿರಾಜ 145- 150 ಮೊಟ್ಟೆ ಇಡುತ್ತದೆ. ಆದರೆ ಸ್ವರ್ಣಧಾರ 180- 200 ತನಕ ಮೊಟ್ಟೆ ಇಡುತ್ತದೆ. ಮೊಟ್ಟೆ ಗಾತ್ರದಲ್ಲೂ ನಾಟಿ ಕೋಳಿಗಿಂತ 10 ಗ್ರಾಂ ಅಧಿಕ ತೂಗುತ್ತದೆ. ಸ್ವರ್ಣಧಾರ ಕೋಳಿಗೆ ಯಾವುದೇ ಆಧುನಿಕ ವಸತಿ ವ್ಯವಸ್ಥೆ, ಸಮತೋಲನ ಆಹಾರ ಆವಶ್ಯಕತೆ ಇಲ್ಲ. ಹಿತ್ತಿಲಿನಲ್ಲಿ ಅಡ್ಡಾಡಿ ಅವುಗಳು ತಮಗೆ ಬೇಕಾದ ಆಹಾರವನ್ನು ಸಂಪಾದಿಸಬಲ್ಲವು.

    ತರಬೇತಿ ಕೊರತೆ: ಲಾಕ್‌ಡೌನ್ ಬಳಿಕ ಸಂಭವಿಸಿದ ಒಟ್ಟು ಸ್ಥಿತ್ಯಂತರಗಳ ಪರಿಣಾಮ ಕೃಷಿಗೆ ಪೂರಕ ಉದ್ಯಮಗಳ ಬಗ್ಗೆ ಹೆಚ್ಚಿನ ಜನರು ಒಲವು ತೋರಿಸುತ್ತಿದ್ದರಾದರೂ ಸರ್ಕಾರಿ ವ್ಯವಸ್ಥೆಗಳಲ್ಲಿ ಸೂಕ್ತ ತರಬೇತಿ ವ್ಯವಸ್ಥೆಗಳ ಕೊರತೆಯಿದೆ. ಉದಾಹರಣೆಗೆ ಅನ್‌ಲಾಕ್ ಆರಂಭ ಬಳಿಕ ಕುಕ್ಕುಟ ಉದ್ಯಮದ ಕುರಿತು ಜಿಲ್ಲೆಯಲ್ಲೇ ತರಬೇತಿ ನಡೆದಿಲ್ಲ. ರಾಜ್ಯಮಟ್ಟದಲ್ಲಿ ಕೆಲ ಆನ್‌ಲೈನ್ ತರಬೇತಿಗಳು ನಡೆದಿವೆಯಾದರೂ ಅವು ಸಾಮಾನ್ಯ ರೈತರನ್ನು ತಲುಪಿಲ್ಲ. ಮಂಗಳೂರು ಕೆವಿಕೆಯಲ್ಲಿ ಪಶುವೈದ್ಯಕೀಯ ವಿಜ್ಞಾನ ವಿಭಾಗದ ವಿಜ್ಞಾನಿ ಹುದ್ದೆ ಒಂದು ವರ್ಷದಿಂದ ಖಾಲಿ ಇದೆ. ಗುತ್ತಿಗೆ ಆಧಾರದಲ್ಲಿ ದುಡಿಯಲು ಯಾರೂ ಮುಂದೆ ಬರುತ್ತಿಲ್ಲ.

    ಸ್ವರ್ಣಧಾರ ಕೋಳಿ ಮರಿಗಳಿಗೆ ದಕ್ಷಿಣ ಕನ್ನಡದಲ್ಲಿ ಅತ್ಯಧಿಕ ಬೇಡಿಕೆ ಇದೆ. ಸೂಕ್ತ ವ್ಯಾಕ್ಸಿನೇಶನ್ ನಡೆಸಿದ ಕೋಳಿ ಮರಿಗಳನ್ನು ಮೊದಲೇ ನೋಂದಣಿ ಮಾಡಿಕೊಂಡವರಿಗೆ ಸೀನಿಯಾರಿಟಿ ಆಧರಿಸಿ ಶನಿವಾರದಿಂದ ವಿತರಿಸಲಾಗುವುದು. ಕೋಳಿ ಮರಿಗಳನ್ನು ಪಡೆಯುವವರಿಂದ ಪ್ರಾತಿನಿಧಿಕ ದರ ಪಡೆಯಲಾಗುವುದು.

    ಡಾ.ಟಿ.ಜೆ.ರಮೇಶ್
    ಮುಖ್ಯಸ್ಥರು, ಕೆವಿಕೆ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts