More

    ದುಷ್ಕರ್ಮಿಗಳಿಗೆ ‘ಸ್ವಪ್ನಾ’ ಚಿನ್ನದ ಗಟ್ಟಿ; ರಾಜತಾಂತ್ರಿಕ ಮಾರ್ಗದ ಮೂಲಕ ಅಕ್ರಮ ಸಾಗಣೆ

    ರಾಘವ ಶರ್ಮ ನಿಡ್ಲೆ ನವದೆಹಲಿ

    ಕೇರಳದಲ್ಲಿ ಚಿನ್ನದ ಕಳ್ಳ ಸಾಗಣೆ ದಂಧೆ ಪ್ರಕರಣ ಭಾರಿ ಕೋಲಾಹಲ ಎಬ್ಬಿಸಿದೆ. ಕರೊನಾ ಮಹಾಮಾರಿ ನಡುವೆ ಸಿಎಂ ಪಿಣರಾಯಿ ವಿಜಯನ್ ಮೇಲೆ ಸ್ಮಗ್ಲರ್​ಗಳ ಜತೆ ಒಡನಾಟ ಬೆಳೆಸಿದ ಆರೋಪ ಮೈಗಂಟಿಕೊಂಡಿದೆ. ಕಳ್ಳ ದಂಧೆಯ ಪ್ರಮುಖ ಪಾತ್ರಧಾರಿ ಸ್ವಪ್ನಾ ಸುರೇಶ್​ಗೆ ಉಚ್ಚಾಟಿತ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ಬೆಂಗಾವಲಾಗಿ ನಿಂತಿದ್ದರ ಬಗ್ಗೆ ಎನ್​ಐಎ ತನಿಖೆ ಶುರುವಾಗಿದೆ. ಕೇರಳದ ರಾಜಕಾರಣಿಗಳು, ಸರ್ಕಾರದ ಉನ್ನತಾಧಿಕಾರಿಗಳ ಬೆಂಬಲ ಇಲ್ಲದಿದ್ದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ರಾಜತಾಂತ್ರಿಕ ಮಾರ್ಗದ ಮೂಲಕ ಅಕ್ರಮ ಚಿನ್ನ ಸಾಗಣಿಕೆ ದಂಧೆ ನಡೆಸಲು ಸ್ವಪ್ನಾಗೆ ಸಾಧ್ಯವಾಗುತ್ತಿತ್ತೇ ಎಂಬ ಪ್ರಶ್ನೆಯೂ ಮೂಡಿದೆ.

    ಪ್ರಕರಣ ಏನು?: ಜುಲೈ 5ರಂದು ಕೇರಳದ ತಿರುವನಂತರಪುರಂ ವಿಮಾನ ನಿಲ್ದಾಣದಲ್ಲಿ ಕಸ್ಟಮ್್ಸ ಅಧಿಕಾರಿಗಳು 15 ಕೋಟಿ ರೂ. ಮೌಲ್ಯದ 30 ಕೆ.ಜಿ. ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು. ತಿರುವನಂತಪುರಂ ಯುಎಇ ಕಾನ್ಸುಲೇಟ್ ಕಚೇರಿ ವಿಳಾಸ ಹೊಂದಿದ್ದ ಪಾರ್ಸೆಲ್ ಯುಎಇಯ ರಾಜತಾಂತ್ರಿಕ ಮಾರ್ಗದ ಮೂಲಕ ಕಳುಹಿಸಿಕೊಡಲಾಗಿತ್ತು. ಮತ್ತೊಬ್ಬ ಆರೋಪಿ ಸರಿತ್ ಕುಮಾರ್ ಪಾರ್ಸೆಲ್ ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಆಗ ಕಸ್ಟಮ್್ಸ ಅಧಿಕಾರಿಗಳು ಮತ್ತು ಪೊಲೀಸರು ಆತನನ್ನು ಬಂಧಿಸಿದ್ದರು. ಯುಎಇ ಕಾನ್ಸುಲೇಟ್ ಸಿಬ್ಬಂದಿ ಎಂಬ ನಕಲಿ ಗುರುತಿನ ಕಾರ್ಡ್ ಆತನ ಬಳಿ ಇತ್ತು. ಈ ಹಿಂದೆಯೂ ಇಂಥದ್ದೇ ಪಾರ್ಸೆಲ್ ಸ್ವೀಕರಿಸಲೆಂದೇ ಸರಿತ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ.

    ಹಿಂದೇನು ಮಾಡುತ್ತಿದ್ದಳು?: ಸ್ವಪ್ನಾಳ ಅಕ್ರಮ ದಂಧೆಗೆ ಇತಿಹಾಸವೇ ಇದೆ. 2013ರಲ್ಲಿ ಏರ್ ಇಂಡಿಯಾ ಸಟ್ಸ್ ಎಂಬ ವಿಮಾನ ನಿಲ್ದಾಣಗಳಲ್ಲಿ ಸೇವೆ ಒದಗಿಸುವ ಸಂಸ್ಥೆಗೆ ಮಾನವ ಸಂಪನ್ಮೂಲ ಕಾರ್ಯನಿರ್ವಾಹಕಿ (ಎಚ್​ಆರ್ ಎಕ್ಸಿಕ್ಯೂಟಿವ್) ಆಗಿ ಸೇರಿದ್ದ ಸ್ವಪ್ನಾ, ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರ ಮೇಲೆ ಲೈಂಗಿಕ ಶೋಷಣೆಯ ಸುಳ್ಳು ಕೇಸು ದಾಖಲಿಸಲು ಪಿತೂರಿ ಮಾಡಿದ್ದರು. ತಮ್ಮ ಸಂಸ್ಥೆಯ ಮತ್ತೊಬ್ಬ ಸಿಬ್ಬಂದಿ ಜತೆ ಸೇರಿ ಅಧಿಕಾರಿ ವಿರುದ್ಧ 17 ದೂರುಗಳನ್ನು ಸಿದ್ಧಪಡಿಸಿಕೊಂಡಿದ್ದಳು. ಆದರೆ, ಆಕೆ ವಿರುದ್ಧ ತನಿಖೆ ನಡೆಸಬೇಕೆಂದು ಅಧಿಕಾರಿ ಪೊಲೀಸರಲ್ಲಿ ದೂರು ನೀಡಿದ್ದರಿಂದ ಸ್ವಪ್ನಾಳನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಆದರೆ, ಸರ್ಕಾರದಲ್ಲಿನ ಆಕೆಯ ಹಿಡಿತ ಮತ್ತು ಪ್ರಭಾವದಿಂದಾಗಿ ತನಿಖೆ ಹಳ್ಳಹಿಡಿದಿತ್ತು.

    ಯುಎಇ ಕಾನ್ಸುಲೇಟ್​ಗೆ ನೇಮಕ: 2016ರಲ್ಲಿ ತಿರುವನಂತಪುರಂನಲ್ಲಿ ಯುಎಇ ಕಾನ್ಸುಲೇಟ್ ಜನರಲ್ ಕಚೇರಿ ತೆರೆಯಲಾಗಿತ್ತು. ಅರೇಬಿಕ್ ಭಾಷೆ ಮೇಲಿನ ಹಿಡಿತ ಹಾಗೂ ಪ್ರಭಾವದಿಂದಾಗಿ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ಕಾರ್ಯದರ್ಶಿಯಾಗಿ ಸ್ವಪ್ನಾ ನೇಮಕಗೊಂಡಳು. ಕೇರಳದ ಲಕ್ಷಾಂತರ ಮಂದಿ ಗಲ್ಪ್ ರಾಷ್ಟ್ರಗಳಲ್ಲಿ ನೌಕರಿ ಮಾಡುತ್ತಿರುವುದರಿಂದ ಕೇರಳ ಸರ್ಕಾರ ಹಾಗೂ ಯುಎಇ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದೆ. ಇದನ್ನೇ ತನ್ನ ಅನುಕೂಲಕ್ಕೆ ಬಳಸಿಕೊಂಡ ಸ್ವಪ್ನಾ, ಯುಎಇ ದೇಶಗಳ ರಾಜತಾಂತ್ರಿಕ ವಲಯದಲ್ಲಿ ಪ್ರಭಾವ ಹೆಚ್ಚಿಸಿಕೊಂಡಳು. ಕೇರಳ-ಯುಎಇ ನಡುವಿನ ಸಾಮಾಜಿಕ, ರಾಜಕೀಯ ಮತ್ತು ರಾಜತಾಂತ್ರಿಕ ವಲಯದಲ್ಲಿ ಆಗಾಗ್ಗೆ ಗುರುತಿಸಿಕೊಳ್ಳುತ್ತಿದ್ದ ಸ್ವಪ್ನಾ, ಅನೇಕ ಬಾರಿ ತನ್ನನ್ನು ತಾನು ರಾಜತಾಂತ್ರಿಕ ಅಧಿಕಾರಿ ಎಂದೇ ಬಿಂಬಿಸಿಕೊಂಡಿದ್ದಳು. 2017ರಲ್ಲಿ ಶಾರ್ಜಾದ ರಾಜ ಕೇರಳಕ್ಕೆ ಭೇಟಿ ನೀಡಿದ್ದ ವೇಳೆ, ರಾಜತಾಂತ್ರಿಕ ಮುಖ್ಯಸ್ಥರು ಹಾಗೂ ಕೇರಳ ಸಿಎಂ ಪಿಣರಾಯಿ ಸಭೆ ನಡೆದಿತ್ತು. ಉಭಯ ಮುಖಂಡರ ಭೇಟಿ ಕಾರ್ಯಕ್ರಮ ತಾನೇ ನಿರ್ವಹಿಸುತ್ತಿದ್ದೇನೆ ಎಂಬಂತೆ ತನ್ನನ್ನು ಬಿಂಬಿಸಿಕೊಂಡಿದ್ದಳು. ಯುಎಇ-ಕೇರಳ ಸರ್ಕಾರ ಫೈವ್ ಸ್ಟಾರ್ ಹೊಟೇಲ್​ನಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಸ್ವಪ್ನಾ ಸದಾ ಕಾಣಿಸಿಕೊಳ್ಳುತ್ತಿದ್ದಳು. ಕಾನ್ಸುಲೇಟ್ ಕಚೇರಿ ಕೆಲಸವನ್ನು ಯುಎಇ ಉದ್ಯಮಪತಿಗಳೊಂದಿಗೆ ಸಂಪರ್ಕ ಬೆಳೆಸಲು ಬಹಳ ಚೆನ್ನಾಗಿಯೇ ಬಳಸಿಕೊಂಡಿದ್ದ ಸ್ವಪ್ನಾ, ಕಳೆದ ವರ್ಷ ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿಕ್ಕಿ ಹಾಕಿಕೊಂಡು ಕೆಲಸ ಕಳೆದುಕೊಂಡಿದ್ದಳು. ಹಾಗಂತ ಸರ್ಕಾರದಲ್ಲಿ ಆಕೆಯ ಪ್ರಭಾವ ತಗ್ಗಿರಲಿಲ್ಲ. ಐಎಎಸ್ ಅಧಿಕಾರಿ ಶಿವಶಂಕರ್ ಜತೆ ಸಂಪರ್ಕ ಸಾಧಿಸಿ ಕೆಎಸ್​ಐಟಿಐಎಲ್​ನಲ್ಲಿ ಪ್ರಭಾವಿ ಹುದ್ದೆಯನ್ನೇ ಗಿಟ್ಟಿಸಿಕೊಂಡಳು.

    ಗೊತ್ತಾಗಿದ್ದು ಹೇಗೆ?: ಸುಲಿಗೆ ಕೃತ್ಯಗಳಿಗೆ ನೆರವಾಗುವಂತೆ ತಮ್ಮ ಮೇಲೆ ಗ್ಯಾಂಗ್​ಸ್ಟರ್​ಗಳು ಒತ್ತಡ ಹೇರುತ್ತಿದ್ದಾರೆಂದು ಕೇರಳದ ನಟಿ ಶಮ್ನಾ ಕಾಸಿಂ ಪೊಲೀಸರಿಗೆ ದೂರು ನೀಡಿದ್ದರು. ಶಂಕಿತ ಗ್ಯಾಂಗ್​ಸ್ಟರ್​ಗಳನ್ನು ವಿಚಾರಣೆಗೊಳಪಡಿಸಿದ್ದ ವೇಳೆ, ಆರೋಪಿಯೊಬ್ಬ ‘ಡೀಲ್ ಮಹಿಳೆ’ಯೊಬ್ಬಳ ಬಗ್ಗೆ ಹೇಳಿಕೊಂಡಿದ್ದ ಮತ್ತು ಆಕೆ ರಾಜತಾಂತ್ರಿಕ ಅಧಿಕಾರಿ, ಕೇರಳ ಸರ್ಕಾರದಲ್ಲೂ ಪ್ರಭಾವಿ ಎಂದೂ ತಿಳಿಸಿದ್ದ. ಗಂಭೀರ ಪ್ರಕರಣಗಳಿಂದ ಹೊರಬರಲು ಆಕೆಯೇ ನೆರವಾಗುತ್ತಾಳೆ ಎಂಬುದೂ ಪೊಲೀಸರಿಗೆ ತಿಳಿದುಬಂದಿತ್ತು. ಇದು ಸ್ವಪ್ನಾ ಮೇಲಿನ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಈ ಮಾಹಿತಿಯನ್ನು ಪೊಲೀಸರು ಕಸ್ಟಮ್್ಸ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದರು. ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದ ಚಿನ್ನದ ಗಟ್ಟಿಗಳನ್ನು ದುಬೈ ಕೈಗಾರಿಕೋದ್ಯಮಿ ಫಾಸಿಲ್ ಎಂಬಾತ ಸ್ವಪ್ನಾಗೆ ಕಳುಹಿಸಿದ್ದು ಎನ್ನಲಾಗುತ್ತಿದೆ.

    ರಾಜತಾಂತ್ರಿಕ ವಿನಾಯಿತಿ: ಸಾಮಾನ್ಯವಾಗಿ ರಾಜತಾಂತ್ರಿಕ ಸರಕುಗಳಿಗೆ ಕಸ್ಟಮ್ಸ್​ ತಪಾಸಣೆಯಿಂದ ವಿನಾಯಿತಿ ಇದೆ ಮತ್ತು ಸಾಧ್ಯವಾದಷ್ಟು ಬೇಗ ಅವುಗಳನ್ನು ತೆರವುಗೊಳಿಸಬೇಕು ಎಂಬ ನಿಯಮವಿದೆ. ಸ್ವಪ್ನಾ ರಾಜತಾಂತ್ರಿಕ ವಲಯ ಹಾಗೂ ಕೇರಳ ಸರ್ಕಾರದಲ್ಲಿ ಪ್ರಭಾವಿಯಾಗಿದ್ದರಿಂದ ಆಕೆಗೆ ಅಕ್ರಮ ಮಾರ್ಗಗಳನ್ನು ಕಂಡುಕೊಳ್ಳುವುದು ಸುಲಭವಾಗಿತ್ತು. ಯುಎಇಯಿಂದ ಜುಲೈ 5ರಂದು ಬಂದಿದ್ದ ಸರಕಿನಲ್ಲಿ ಬಾತ್​ರೂಮ್ ಫಿಟ್ಟಿಂಗ್ಸ್, ನೂಡಲ್ಸ್, ಬಿಸ್ಕತ್ತು, ಕರ್ಜೂರಗಳನ್ನು ಶಾರ್ಜಾ ಮೂಲದ ಅಲ್ ಜತಾರ್ ಸ್ಪೈಸಸ್ ಎಂಬ ಸಂಸ್ಥೆಯಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ತೋರಿಸಲಾಗಿತ್ತು. ಆದರೆ, ಪತ್ತೆಯಾಗಿದ್ದು ಚಿನ್ನದ ಗಟ್ಟಿ.

    ಸ್ವಪ್ನಾ ಮನೆಯಲ್ಲಿ ಶಿವಶಂಕರ್: ಕಸ್ಟಮ್ಸ್​ ಅಧಿಕಾರಿಗಳ ದಾಳಿ ಬಗ್ಗೆ ಪೂರ್ವ ಮಾಹಿತಿ ಹೊಂದಿದ್ದ ಸ್ವಪ್ನಾ, 2018ರಿಂದ ಉಳಿದುಕೊಂಡಿದ್ದ ತಿರುವನಂತಪುರಂನ ಮುದವನ್ ಮುಕಲ್​ನ ಮನೆಯಿಂದ ನಾಪತ್ತೆಯಾಗಿದ್ದರು. ಸ್ಥಳೀಯರು ಹೇಳುವಂತೆ, ಐಎಎಸ್ ಅಧಿಕಾರಿ ಶಿವಶಂಕರ್ ಈ ಮನೆಯ ನಿತ್ಯದ ಅತಿಥಿ. ಯುಎಇ ಕಾನ್ಸುಲೇಟ್​ನಲ್ಲಿ ಕೆಲಸದಲ್ಲಿದ್ದಾಗಲೂ ಸ್ವಪ್ನಾ ಮನೆಗೆ ಬರುತ್ತಿದ್ದರಂತೆ. ಅಂದರೆ, ಶಿವಶಂಕರ್-ಸ್ವಪ್ನಾ ಸಂಪರ್ಕ ಮೊದಲಿನಿಂದಲೂ ಇತ್ತು ಮತ್ತು ಅಕ್ರಮಗಳ ಬಗ್ಗೆ ಶಿವಶಂಕರ್​ಗೂ ಗೊತ್ತಿತ್ತು ಎಂದಾಯಿತು.

    ಯಾರೀಕೆ ಸ್ವಪ್ನಾ ಸುರೇಶ್?: ಕೇರಳ ಸರ್ಕಾರದ ಇನ್​ಫಾಮೇಷನ್ ಟೆಕ್ನಾಲಜಿ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಕೆಎಸ್​ಐಟಿಐಎಲ್) ಸಂಸ್ಥೆಯಲ್ಲಿ ಬಿಜಿನೆಸ್ ಡೆವಲಪ್​ವೆುಂಟ್ ಮ್ಯಾನೇಜರ್ ಆಗಿದ್ದ ಸ್ವಪ್ನಾ, ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಹಾಗೂ ಈ ಸಂಸ್ಥೆಯ ಮುಖ್ಯಸ್ಥರೂ ಆಗಿದ್ದ ಎಂ. ಶಿವಶಂಕರ್​ಗೆ ಅತ್ಯಂತ ಆಪ್ತೆ. ಶಿವಶಂಕರ್ ನೆರವಿನಿಂದಲೇ ಆಕೆ ಈ ಕೆಲಸ ಗಿಟ್ಟಿಸಿಕೊಂಡಿದ್ದಳು. ಶಿವಶಂಕರ್ ಈ ಹಿಂದೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದರು ಎಂಬುದೂ ಉಲ್ಲೇಖಾರ್ಹ. ಸ್ವಪ್ನಾ ಪದವಿ ಅಥವಾ ಉನ್ನತ ಶಿಕ್ಷಣ ಪಡೆದೇ ಇಲ್ಲ ಎಂದು ವಿದೇಶದಲ್ಲಿ ನೆಲೆಸಿರುವ ಆಕೆಯ ಸಹೋದರ ಹೇಳಿದ ಮೇಲಂತೂ ಆಕೆ ನಕಲಿ ಪದವಿ ದಾಖಲೆ ಸೃಷ್ಟಿಸಿಕೊಂಡಿದ್ದಳು ಎಂಬುದು ಗೊತ್ತಾಗಿದೆ. ಹಾಗಾದರೆ, ಇವ್ಯಾವುವೂ ಸರ್ಕಾರ ಮತ್ತು ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ ಎಂಬುದು ಪ್ರಶ್ನೆ.

    ಸ್ವಪ್ನಾ ಅಲ್ಲ ಮಮ್ತಾಜ್?: ಸ್ವಪ್ನಾ ಸುರೇಶ್ ಹುಟ್ಟಿ ಬೆಳೆದಿದ್ದು ದುಬೈನಲ್ಲಿ. ಆಕೆಯ ತಂದೆ ಅಲ್ಲಿ ಬಾರ್​ವೊಂದನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಆಕೆ ಅನ್ಯಧರ್ವಿುಯಳು, ಮೂಲ ಹೆಸರು ಮಮ್ತಾಜ್ ಇಸ್ಮಾಯಿಲ್ ಎಂದೂ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಕೇರಳ ಸರ್ಕಾರ ಅಥವಾ ರಾಷ್ಟ್ರೀಯ ತನಿಖಾ ದಳದಿಂದ ಯಾವುದೇ ಮಾಹಿತಿ ಬಂದಿಲ್ಲ. ಯುಎಇ ಕಾನ್ಸುಲೇಟ್​ನ ರಾಜತಾಂತ್ರಿಕ ಕಾರ್ಯಕ್ರಮಗಳಲ್ಲಿ ಆಕೆ ಮುಸ್ಲಿಂ ಮಹಿಳೆ ದಿರಿಸಿನೊಂದಿಗೆ ಕಾಣಿಸಿಕೊಳ್ಳುತ್ತಿದ್ದರಿಂದ, ಅನ್ಯ ಧರ್ಮಕ್ಕೆ ಸೇರಿದವಳೆಂದು ರ್ಚಚಿಸಲಾಗುತ್ತಿದೆ. ಆದರೆ, ತನ್ನ ‘ಕೆಲಸ’ಕ್ಕೆ ಅನುಕೂಲವಾಗಲು ಹಾಗೂ ‘ಸಂಬಂಧ’ಪಟ್ಟವರನ್ನು ಸೆಳೆಯುವ ಉದ್ದೇಶದಿಂದಲೇ ಆಕೆ ಈ ರೀತಿಯ ದಿರಿಸನ್ನು ತೊಡುತ್ತಿದ್ದಳು ಎನ್ನಲಾಗಿದೆ.

    ದೇಶಕ್ಕೆ ಅಪಾಯಕಾರಿ: ಕಳ್ಳ ಸಾಗಣೆಗೆ ರಾಜತಾಂತ್ರಿಕ ಮಾರ್ಗ ಬಳಕೆ ಆಗುತ್ತಿರುವುದು ದೇಶದ ಹಿತಾಸಕ್ತಿ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆ. ಯುಎಇ ರಾಯಭಾರ ಕಚೇರಿ ಮತ್ತು ಯುಎಇ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಈ ಬಗ್ಗೆ ವಿವರಣೆ ನೀಡಬೇಕಾಗುತ್ತದೆ. ನಾವು ಈ ಪ್ಯಾಕೇಜನ್ನು ಕಳುಹಿಸಿ ಎಂದು ಯಾರಿಂದಲೂ ಕೇಳಿರಲಿಲ್ಲ ಮತ್ತು ಇದು ನಕಲಿ ವಿಳಾಸದ ಹೆಸರಲ್ಲಿ ಬಂದಿದೆ ಎಂದು ದೂತವಾಸ ಕಚೇರಿ ಹೇಳಿದೆ. ಹೀಗಾಗಿ, ಯುಎಇ ದೂತವಾಸ ಕಚೇರಿ ಸಿಬ್ಬಂದಿ ಯಾರಾದರೂ ಇದರಲ್ಲಿ ಭಾಗಿಯಾಗಿದ್ದಾರಾ ಮತ್ತು ಕೇರಳದಲ್ಲಿ ಅವರೊಂದಿಗೆ ಯಾರೆಲ್ಲ ಸಂಪರ್ಕದಲ್ಲಿದ್ದರು ಎಂಬ ಬಗ್ಗೆ ಯುಎಇ ಕಸ್ಟಮ್ಸ್​/ಫೆಡರಲ್ ಅಥವಾ ದುಬೈ ಪೊಲೀಸರು ವಿಸ್ತೃತ ತನಿಖೆ ನಡೆಸಬೇಕಿದೆ. ಈ ಅಕ್ರಮ ಹಣ ಐಸಿಸ್ ಉಗ್ರವಾದಿ ಸಂಘಟನೆಗೆ ಪೂರೈಕೆಯಾಗುತ್ತಿತ್ತು ಎಂಬ ಅನುಮಾನ ರಾಷ್ಟ್ರೀಯ ತನಿಖಾ ದಳದ್ದು.

    ಕಾಸರಗೋಡು-ಮಂಗಳೂರಲ್ಲೂ ಎನ್​ಐಎ ತನಿಖೆ ಸಾಧ್ಯತೆ: ಕೇರಳ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಚಿನ್ನ ಕಳ್ಳ ಸಾಗಾಟ ಪ್ರಕರಣದ ಎನ್​ಐಎ ತನಿಖೆ ಕಾಸರಗೋಡು-ಮಂಗಳೂರು ಪ್ರದೇಶಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ. ಚಿನ್ನ ಸಾಗಾಟ ಜಾಲದ ಆರೋಪಿಗಳ ವಿಚಾರಣೆ ವೇಳೆ, ಇತರ ರಾಜ್ಯಗಳಿಗೂ ಚಿನ್ನ ಸಾಗಾಟ ಮಾಹಿತಿ ಲಭಿಸಿದೆ. ಉಗ್ರ ಸಂಘಟನೆಗಳ ಚಟುವಟಿಕೆಗಳಿಗೆ ಈ ಚಿನ್ನ ಬಳಸಲಾಗುತ್ತಿತ್ತು ಎಂಬ ಮಾಹಿತಿಯೂ ತನಿಖಾಧಿಕಾರಿಗಳಿಗೆ ಲಭಿಸಿದೆ. ಮೂರನೇ ಆರೋಪಿ ಫಾಸಿಲ್ ಫರೀದ್ ಈ ಮೊದಲು ಹಲವು ಬಾರಿ ಕೇರಳಕ್ಕೆ ಚಿನ್ನ ಸಾಗಿಸಿದ್ದು ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಯುಎಇ ಜತೆ ರಾಜತಾಂತ್ರಿಕ ಮಾತುಕತೆ ನಡೆಯುವ ಸೂಚನೆ ಲಭಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts