More

  ಬೆಳಗಾವಿ: ಸ್ವಾಮಿ ವಿವೇಕಾನಂದರ ಆದರ್ಶ ಅನುಸರಿಸಿ

  ಬೆಳಗಾವಿ: ಸ್ವಾಮಿ ವಿವೇಕಾನಂದರು ಭಾರತದ ಮಹಾನ್ ಸುಪುತ್ರರು. ಅವರಿಂದ ನಮ್ಮ ರಾಷ್ಟ್ರದ ಕೀರ್ತಿ ಹೆಚ್ಚಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ.

  ನಗರದ ಕುಮಾರ ಗಂಧರ್ವ ಸಭಾಭವನದಲ್ಲಿ ಸ್ವಾಮಿ ವಿವೇಕಾನಂದ ವಾಣಿಜ್ಯ ವಿದ್ಯಾ ಸಂಸ್ಥೆ, ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 158ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿವೇಕಾನಂದರು ಭಾರತದ ಸಂಸ್ಕೃತಿ, ಪರಂಪರೆಯನ್ನು ಜಗತ್ತಿಗೆ ಸಾರಿ ನಮ್ಮ ದೇಶಕ್ಕೆ ಗೌರವ, ಸ್ವಾಭಿಮಾನ ತಂದುಕೊಟ್ಟಿದ್ದಾರೆ. ಇಂದಿನ ಯುವ ಪೀಳಿಗೆ ವಿವೇಕಾನಂದರ ಆದರ್ಶ ಅನುಸರಿಸಬೇಕು ಎಂದರು.

  ಕೆಎಲ್‌ಇ ಆಸ್ಪತ್ರೆಯ ಡಾ. ಎಂ.ವಿ. ಜಾಲಿ ಮಾತನಾಡಿ, ಪಾಲಕರು ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸಬೇಕು. ವಿವೇಕಾನಂದರ ತತ್ತ್ವಾದರ್ಶಗಳನ್ನು ತಿಳಿ ಹೇಳಬೇಕು ಎಂದು ಸಲಹೆ ನೀಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ ಮಾತನಾಡಿ, ಯುವಕರು ವಿವೇಕಾನಂದರಂತೆ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ರಸ್ತೆ ನಿಯಮಗಳನ್ನು ಚಾಚುತಪ್ಪದೇ ಪಾಲಿಸಬೇಕು ಎಂದರು.
  ವೇದಿಕೆಯಲ್ಲಿ ಎಲ್ಲ ಸಮುದಾಯಗಳ ವಿದ್ಯಾರ್ಥಿಗಳೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರು, ನಾವೆಲ್ಲರೂ ಒಂದೇ ಎಂಬ ಸಂದೇಶ ರವಾನಿಸಿದರು. ವಿವೇಕಾನಂದರ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಚಿತ್ರಕಲೆ, ಭಕ್ತಿಗೀತೆ, ಸಮೂಹ ಭಕ್ತಿಗೀತೆ, ಪ್ರಬಂಧ, ಭಾಷಣ, ಯೋಗಾಸನ, ಭಗವದ್ಗೀತಾ ಪಠಣ, ಸಮಾನ್ಯಜ್ಞಾನ, ಭರತನಾಟ್ಯ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಸುರೇಶ ಅಂಗಡಿ ಹಾಗೂ ಗಣ್ಯರು ಬಹುಮಾನ ವಿತರಿಸಿದರು.

  ಡಾ. ಶ್ರೀಧರ ಹುಕ್ಕೇರಿ ಸ್ವಾಗತಿಸಿದರು. ಪ್ರೊ. ಮಹಾದೇವ ಉಮದಿ, ಉದ್ಯಮಿ ಸುನೀಲ ಸಾಮರೆಕರ, ಎಲ್‌ಐಸಿ ಅಧಿಕಾರಿ ಪ್ರಕಾಶ ಜಾಧವ, ಸ್ವಾಮಿ ವಿವೇಕಾನಂದ ವಾಣಿಜ್ಯ ವಿದ್ಯಾ ಸಂಸ್ಥೆ ಪ್ರಾಚಾರ್ಯ ಗೋಪಾಲ ಕಮತೆ ವೇದಿಕೆಯಲ್ಲಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts