More

    ಕಾಂಗ್ರೆಸ್​ನವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ದುರದೃಷ್ಟಕರ: ಶ್ರೀನಿವಾಸ್ ​ಪ್ರಸಾದ್​

    ಚಾಮರಾಜನಗರ: ಮಜಾ ಮಾಡುವುದಕ್ಕಾಗಿಯೇ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಬಯಕೆ ಹೊರಹಾಕಿದ್ದಾರೆ ಎಂದು ಸಂಸದ ಶ್ರೀನಿವಾಸ್​ ಪ್ರಸಾದ್​ ವ್ಯಂಗ್ಯವಾಡಿದ್ದಾರೆ.

    ಚಾಮರಾಜನಗರದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಪರ ಪ್ರಚಾರ ಕಾರ್ಯ ಕೈಗೊಂಡ ವೇಳೆ ಮಾತನಾಡಿದ ಅವರು ಕಾಂಗ್ರೆಸ್​-ಜೆಡಿಎಸ್​ ವಿರುದ್ಧ ಹರಿಹಾಯ್ದಿದ್ದಾರೆ.

    ಸೋಲುವ ಭೀತಿ

    ಉಪಕಾರ ಸ್ಮರಣೆ ಇಲ್ಲದ ವ್ಯಕ್ತಿ ಸಿದ್ದರಾಮಯ್ಯ ಮಜಾ ಮಾಡುವುದಕ್ಕಾಗಿಯೇ ಮತ್ತೆ ಮುಖ್ಯಮಂತ್ರಿ ಆಗುವ ಬಯಕೆ ಹೊರಹಾಕಿದ್ದಾರೆ. ಕಳೆದ ಭಾರಿ ಮುಖ್ಯಮಂತ್ರಿ ಆಗಿದ್ದುಕೊಂಡು ಎರಡು ಕ್ಷೇತ್ರದಲ್ಲಿ ಯಾಕೆ ಸ್ಪರ್ಧಿಸಿದ್ದರು ಎಂದು ಪ್ರಶ್ನಿಸಿದ್ದಾರೆ.

    ಈ ಭಾರಿಯೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಅಂದುಕೊಂಡಿರುವ ಸಿದ್ದರಾಮಯ್ಯ ಕಳೆದ ಸತಿ ಸೋಲಿನ ಭೀತಿಯಿಂದ ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಸ್ಪರ್ಧಿಸಿದ್ದರು. ಅವರ ಸಂಪುಟದಲ್ಲಿ ಇದ್ದ 13-14 ಮಂದಿ ಸಚಿವರು ಸೋತರು ಎಂದು ವ್ಯಂಗ್ಯವಾಡಿದ್ದಾರೆ.

    VSP Somanna

    ಉಪಕಾರ ಸ್ಮರಣೆ ಇಲ್ಲದವರು

    ಸಿದ್ದರಾಮಯ್ಯಗೆ ನಾನು ರಾಜಕೀಯದ ಆರಂಭದಿಂದ ಸಹಾಯ ಮಾಡುತ್ತ ಬಂದಿದ್ದೇನೆ. ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನನ್ನು ಒಂದು ಮಾತು ಕೇಳದೆ ವಜಾ ಮಾಡಿ ಮನಸಿಗೆ ತುಂಬಾ ನೋವು ಮಾಡಿದರು.

    ಉಪಕಾರ ಸ್ಮರಣೆ ಇಲ್ಲದ ವ್ಯಕ್ತಿ ಅವರು ಎಲ್ಲವನ್ನೂ ಜನ ತೀರ್ಮಾನ ಮಾಡುತ್ತಾರೆ. ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಅಭ್ಯರ್ಥಿ ಆದ ತಕ್ಷಣ ಆತ ಗಲಿಬಿಲಿಗೊಂಡಿದ್ಧಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ಇದನ್ನೂ ಓದಿ: ಜಗದೀಶ್​ ಶೆಟ್ಟರ್​ ಪರ ಸೋನಿಯಾ ಗಾಂಧಿ ಪ್ರಚಾರ; ಅಸಾದುದ್ದೀನ್​ ಓವೈಸಿ ಕಿಡಿ

    ಜನರು ಬಿಜೆಪಿಯನ್ನು ಗೆಲ್ಲಿಸಿದರು

    ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಚುಣಾವಣಾ ಪ್ರಚಾರದ ವೇಳೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಯುಪಿಎ ಸರ್ಕಾರದಲ್ಲಿನ ಅವ್ಯವಹಾರಗಳ ಕಾರಣ 2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಆದರು. ಕಾಂಗ್ರೆಸ್​ ಸರ್ಕಾರದ ಹಗರಣಗಳಿಂದಾಗಿ ಜನ ಬಿಜೆಪಿಯನ್ನು ಗೆಲ್ಲಿಸಿದರು.

    2009-14ರ ವರೆಗೂ ಪ್ರಧಾನಿಯಾಗಿದ್ದ ಮನಮೋಹನ್​ ಸಿಂಗ್​ ಅವರನ್ನು ಇವರು ಎಐಸಿಸಿ ಕಚೇರಿಯಲ್ಲಿ ಕುಳಿತುಕೊಂಡು ನಿಯಂತ್ರಿಸಿತ್ತಿದ್ದರು. ರಾಷ್ಟ್ರೀಯ ಪಕ್ಷ ಒಂದನ್ನು ಹಾಳು ಮಾಡಿದ ರಾಹುಲ್​ ಗಾಂಧಿ ಇಲ್ಲಿ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದ್ದಾರೆ.

    VSP Somanna (1)

    ಪಂಚರತ್ನ ಅಲ್ಲ ನವರತ್ನ

    ಮಾತನಾಡುವ ವೇಳೆ ಜೆಡಿಎಸ್​ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀನಿವಸ್​ ಪ್ರಸಾದ್​ ಅವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

    ಜೆಡಿಎಸ್​ನವರು ರಾಜ್ಯಾದ್ಯಂತ ತಿರುಗಿ ಪಂಚರತ್ನ ಯಾತ್ರೆ ನಡೆಸಿದ್ದಾರೆ. ಅದನ್ನು ಪಂಚರತ್ನ ಎನ್ನುವ ಬದಲು ನವರತ್ನ ಎನ್ನಬೇಕು ಏಕೆಂದರೆ ಅವರ ಪಕ್ಷ ಬಿಡುಗಡೆ ಮಾಡಿರುವ ಸ್ಟಾರ್​ ಪ್ರಚಾರಕರ ಪಟ್ಟಿಯಲ್ಲಿ ದೇವೇಗೌಡರ ಕುಟುಂಬದ 8 ಮಂದಿ ಇದ್ದಾರೆ ಮತ್ತು ಅವರ ಜೊತೆ ಒಂಬತ್ತನೇಯವರಾಗಿ ಅವರ ಅಧ್ಯಕ್ಷರು ಇಬ್ರಾಹಿಂ ಇದ್ದಾರೆ ಎಂದು ಕುಟುಕಿದ್ದಾರೆ.

    ಕೊನೆ ಭಾಷಣ

    ನಾನು ಈಗಾಗಲೇ ರಾಜಕೀಯದಲ್ಲಿ 49 ವರ್ಷಗಳಿಂದ ಸಕ್ರಿಯನಾಗಿದ್ದೇನೆ. ಚುನಾವಣೆಯಲ್ಲಿ ಇದು ನನ್ನ ಕೊನೆಯ ಭಾಷಣ ಮುಂದಿನ ವರ್ಷ ನಾನು ರಾಜಕೀಯ ಪ್ರವೇಶಿಸಿ 50 ವರ್ಷಗಳಾಗುತ್ತವೆ ಮತ್ತು ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ.

    ಸೋಮಣ್ಣ ಜನಪರ ಕಾಳಜಿ ಇರುವಂತಹ ವ್ಯಕ್ತಿ ಈಗಾಗಲೇ ಅವರು ವಸತಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ವರುಣಾ ಹಾಗು ಚಾಮರಾಜನಗರ ಕ್ಷೇತ್ರಗಳಿಗೆ ಪಕ್ಷ ಅವರಿಗೆ ಟಿಕೆಟ್​ ನೀಡಿದೆ ಎಲ್ಲರೂ ಅವರನ್ನು ಬೆಂಬಲಿಸಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts