More

    ಸುರಿಬೈಲು ಶಾಲೆಯಲ್ಲಿ ನಳನಳಿಸುವ ತರಕಾರಿ

    ವಿಜಯವಾಣಿ ಸುದ್ದಿಜಾಲ ವಿಟ್ಲ
    ಕರೊನಾ ಮಧ್ಯೆಯೂ ಕೊಳ್ನಾಡು ಗ್ರಾಮದ ಸುರಿಬೈಲು ಉನ್ನತಿಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಅಂಗಳದ ಒಂದು ಬದಿಯಲ್ಲಿ ತರಕಾರಿ ತೋಟ ನಿರ್ಮಿಸಿ, 25ಕ್ಕಿಂತಲೂ ಅಧಿಕ ಬಗೆಯ ತರಕಾರಿ ಬೆಳೆದು ಸಾಧನೆ ಮಾಡಲಾಗಿದೆ.

    ಪ್ರತಿ ಬಾರಿಯೂ ವಿದ್ಯಾರ್ಥಿಗಳು ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರ ಸಹಕಾರದಲ್ಲಿ ತರಕಾರಿ, ಅನನಾಸು, ಅಡಕೆ, ಬಾಳೆ ತೋಟಗಳನ್ನು ಪೋಷಣೆ ಮಾಡುತ್ತಿದ್ದರು. ಕರೊನಾ ಹಿನ್ನೆಲೆ ಈ ಬಾರಿ ವಿದ್ಯಾರ್ಥಿಗಳು ಮನೆಯಲ್ಲಿಯೇ ಬಾಕಿಯಾಗಿದ್ದಾರೆ. ಆದರೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ.ಅಬೂಬಕ್ಕರ್ ಹಾಗೂ ಮುಖ್ಯಶಿಕ್ಷಕ ಗೋಪಾಲ ಎಸ್. ನೇತೃತ್ವದಲ್ಲಿ ಸಮಿತಿ ಸದಸ್ಯರು, ಶಿಕ್ಷಕರು, ಸ್ಥಳೀಯರ ಸಹಕಾರದಲ್ಲಿ 25ಕ್ಕಿಂತಲೂ ಅಧಿಕ ತರಕಾರಿಗಳನ್ನು ಬೆಳೆಸಲಾಗಿದೆ. ಜೂನ್ ತಿಂಗಳಿನಲ್ಲಿ ವಿವಿಧ ಬಗೆಯ ತರಕಾರಿ ಬೀಜಗಳನ್ನು ಬಿತ್ತಿದ್ದರು. ಈಗ ಫಲ ನೀಡಿದೆ.
    25 ಸೆಂಟ್ಸ್ ಜಾಗದಲ್ಲಿ ಅಲಸಂಡೆ, ಕೆಂಪುಬೆಂಡೆ, ಬಿಳಿಬೆಂಡೆ, ಸೋರೆಕಾಯಿ, ಪಡುವಲಕಾಯಿ, ಕುಂಬಳೆಕಾಯಿ, ಚೀನಿಕಾಯಿ, ಅರಿವೆ, ಮರಗೆಣಸು, ಸಿಹಿಗೆಣಸು, ಸೌತೆಕಾಯಿ, ಮುಳ್ಳುಸೌತೆ, ಹಾಗಲಕಾಯಿ, ಶುಂಠಿ, ಅರಸಿನ, ಬಾಳೆ, ಅನನಾಸ್, ಟೊಮ್ಯಾಟೊ ಮೊದಲಾದ ತರಕಾರಿಗಳನ್ನು ತೋಟದಲ್ಲಿ ಬೆಳೆಯಲಾಗಿದೆ. ಹಿಂದೆ ಇದನ್ನು ಬಿಸಿಯೂಟಕ್ಕೆ ಉಪಯೋಗ ಮಾಡಲಾಗುತ್ತಿತ್ತು. ಆದರೆ ಈಗ ಮಕ್ಕಳು ಇಲ್ಲದ ಕಾರಣ ಪಕ್ಕದ ಅಂಗಡಿಯಲ್ಲಿ ಮುಂಗಡ ಇರಿಸಲಾಗಿದೆ. ಶಾಲೆ ಪ್ರಾರಂಭವಾದ ಬಳಿಕ ಅಲ್ಲಿಂದ ಬೇರೆ ತರಕಾರಿ ಖರೀದಿಸಿ, ಬಿಸಿಯೂಟಕ್ಕೆ ಬಳಸುವ ಯೋಜನೆ ಹಾಕಲಾಗಿದೆ. ಶಾಲೆಯ 1.5 ಎಕರೆ ಜಾಗದಲ್ಲಿ ಅಡಕೆ ತೋಟದಲ್ಲಿ 1.80 ಲಕ್ಷ ರೂ. ಆದಾಯ ಬರುತ್ತಿದೆ.

    ಶಾಲೆಗೆ ರಜೆ ಇರುವುದರಿಂದ ಬೆಳೆದ ತರಕಾರಿಗಳು ಹಾಳಾಗಬಾರದೆಂಬ ಕಾರಣಕ್ಕೆ ಸ್ಥಳೀಯ ಅಂಗಡಿಗಳಲ್ಲಿ ಡಿಪಾಸಿಟ್ ಇಡಲಾಗುತ್ತಿದೆ. ಶಾಲೆ ಪ್ರಾರಂಭವಾದ ಬಳಿಕ ಬೇರೆ ತರಕಾರಿಯನ್ನು ಅಂಗಡಿಯಿಂದ ಪಡೆದು ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತದೆ.
    ಎಸ್.ಎಂ.ಅಬೂಬಕ್ಕರ್ ಎಸ್‌ಡಿಎಂಸಿ ಅಧ್ಯಕ್ಷ

    ಎಸ್‌ಡಿಎಂಸಿ ಸದಸ್ಯರು, ಊರಿನ ಜನರು ಈ ಶಾಲೆಯನ್ನು ವಿದ್ಯಾ ದೇಗುಲದಂತೆ ಪ್ರೀತಿಸುತ್ತಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ಶಾಲೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಮಕ್ಕಳಿಗೆ ಪರಿಸರ ಮತ್ತು ಕೃಷಿಯನ್ನು ಪ್ರೀತಿಸಲು ಕಲಿಸುವ ಉದ್ದೇಶದಿಂದ ತರಕಾರಿ, ತೋಟಗಳನ್ನು ಪೋಷಣೆ ಮಾಡಲಾಗುತ್ತಿದೆ.
    ಗೋಪಾಲ ಎಸ್. ಮುಖ್ಯಶಿಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts