More

    ಚಿತ್ರನಟ ಸುರೇಂದ್ರ ಬಂಟ್ವಾಳ್ ಹತ್ಯೆ, ಭಂಡಾರಿಬೆಟ್ಟಿನ ಮನೆಯಲ್ಲಿಯೇ ಕೃತ್ಯ

    ಬಂಟ್ವಾಳ: ಚಿತ್ರನಟ, ಛಾಯಾಗ್ರಾಹಕ, ರೌಡಿ ಶೀಟರ್ ಸುರೇಂದ್ರ ಬಂಟ್ವಾಳ್ ಯಾನೆ ಸುರೇಂದ್ರ ಭಂಡಾರಿ(39) ಅವರನ್ನು ಬಂಟ್ವಾಳದ ಭಂ ಡಾರಿಬೆಟ್ಟಿನ ಖಾಸಗಿ ವಸತಿ ಸಂಕೀರ್ಣದಲ್ಲಿರುವ ಅವರ ಮನೆಯಲ್ಲಿಯೇ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.

    ಚೂರಿಯಿಂದ ತಿವಿದು ಹತ್ಯೆ ಮಾಡಿ ಬಳಿಕ ಮನೆ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದ್ದು ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಮಂಗಳೂರು ಹಾಗೂ ಬಂಟ್ವಾಳದ ಭಂಡಾರಿಬೆಟ್ಟಿನ ಫ್ಲ್ಯಾಟಿನಲ್ಲಿ ವಾಸವಾಗಿರುತ್ತಿದ್ದ ಸುರೇಂದ್ರ ಬಂಟ್ವಾಳ್ ಮಂಗಳವಾರ ರಾತ್ರಿ ಬಂಟ್ವಾಳದಲ್ಲಿ ಉಳಿದುಕೊಂಡಿದ್ದರು. ನಿತ್ಯ ಸಂಗಡಿಗರೊಂದಿಗೆ ಫೋನ್ ಸಂಪರ್ಕದಲ್ಲಿರುತ್ತಿದ್ದ ಅವರು ಬುಧವಾರ ಬೆಳಗ್ಗಿನಿಂದ ಸಂಗಡಿಗರ ದೂರವಾಣಿ ಕರೆ ಸ್ವೀಕರಿಸುತ್ತಿರಲಿಲ್ಲ.

    ಪ್ರತಿದಿನ ಅವರ ಜತೆಯೇ ಇರುತ್ತಿದ್ದ ಸತೀಶ್ ಎಂಬಾತನ ಮೊಬೈಲ್‌ಗೆ ಸ್ನೇಹಿತರು ನಿರಂತರ ಕರೆ ಮಾಡಿದಾಗಲೂ ಮೊಬೈಲ್ ಸ್ವಿಚ್‌ಆಫ್ ಬರುತ್ತಿತ್ತು. ಇದರಿಂದ ಸಂಶಯಗೊಂಡ ಸ್ನೇಹಿತರು ಅವರ ವಸತಿ ಸಂಕೀರ್ಣದ ಬಳಿ ಬಂದಾಗ ಕಾರು ಪಾರ್ಕಿಂಗ್ ಏರಿಯಾದಲ್ಲೇ ಇದ್ದರೂ, ಮನೆಗೆ ಬೀಗ ಹಾಕಲಾಗಿತ್ತು. ಸಂಶಯಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ಸೋಫಾದ ಮೇಲೆ ರಕ್ತಸಿಕ್ತ ಮೃತದೇಹ ಕಂಡು ಬಂದಿದೆ.

    ಆರೋಪಿಗಳಿಗಾಗಿ ಶೋಧ: ಹರಿತವಾದ ಆಯುಧದಿಂದ ತಲೆ ಸಹಿತ ದೇಹದ ಇತರ ಭಾಗಗಳಿಗೆ ಇರಿಯಲಾಗಿದೆ. ಮಂಗಳವಾರ ರಾತ್ರಿಯಿಂದ ಬುಧವಾರ ಮಧ್ಯಾಹ್ನದೊಳಗಾಗಿ ಹತ್ಯೆ ನಡೆದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಫ್ಲ್ಯಾಟ್‌ಗೆ ಅಳವಡಿಸಿರುವ ಸಿಸಿ ಕ್ಯಾಮರಾ ಫೂಟೇಜನ್ನು ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಿಗಾಗಿ ಶೋಧ ಆರಂಭಿಸಿದ್ದಾರೆ.

    ಫೋಟೋಗ್ರಾಫಿಯಿಂದ ರೌಡಿಶೀಟರ್‌ವರೆಗೆ…
    ಬಂಟ್ವಾಳದಲ್ಲಿ ಫೋಟೋಗ್ರಾಫರ್ ವೃತ್ತಿ ನಡೆಸುತ್ತಿದ್ದ ಸುರೇಂದ್ರ ಬಂಟ್ವಾಳ್ ಸೃಜನಾತ್ಮಕ ಫೋಟೊಗ್ರಾಫರ್ ಆಗಿದ್ದು ವಿಶಿಷ್ಟ ರೀತಿಯ ಫೋಟೋಗಳನ್ನು ಪತ್ರಿಕೆಗಳಿಗೂ ಕಳುಹಿಸಿಕೊಡುತ್ತಿದ್ದರು. ಬಳಿಕ ಹಿಂದುಪರ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಸಂಘಟನೆಯೊಂದರ ಗೋರಕ್ಷ ಪ್ರಮುಖ ಆಗಿ ಜವಾಬ್ದಾರಿ ನಿರ್ವಹಿಸಿ, ಅಕ್ರಮ ಗೋಸಾಗಾಟ ತಡೆ ಕಾರ್ಯದಲ್ಲಿ ತೊಡಗಿಸಿಕೊಂಡು ಬೆಂಬಲಿಗರ ಪಡೆ ಕಟ್ಟಿಕೊಂಡಿದ್ದರು. ಈ ಮೂಲಕ ಸ್ಥಳೀಯವಾಗಿ ಚಿರಪರಿಚಿತರಾಗಿದ್ದ ಸುರೇಂದ್ರ ಬಂಟ್ವಾಳ್ ವಿರುದ್ಧ ಹಲ್ಲೆ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನುವ ಆರೋಪದಡಿ ಬಂಟ್ವಾಳ ಠಾಣೆಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. ಆಂತರಿಕ ಜಗಳದಿಂದಾಗಿ ಹಿಂದು ಸಂಘಟನೆ ಹಾಗೂ ಬಿಜೆಪಿಯಿಂದ ಉಚ್ಚಾಟಿಸಲ್ಪಟ್ಟಿದ್ದ ಸುರೇಂದ್ರ ಬಂಟ್ವಾಳ್ ಬಳಿಕ ಕಾಂಗ್ರೆಸ್ ಸೇರಿದ್ದರೂ ಪಕ್ಷದ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.

    ಚಿತ್ರನಟರಾಗಿ ಜನಪ್ರಿಯತೆ: ಸುರೇಂದ್ರ ಬಂಟ್ವಾಳ್ ಅವಿವಾಹಿತರಾಗಿದ್ದರು. ಅವರಿಗೆ ತಾಯಿ, ನಾಲ್ವರು ಸಹೋದರರು ಹಾಗೂ ಓರ್ವ ಸಹೋದರಿ ಇದ್ದಾರೆ. ಸುರೇಂದ್ರ ಬಂಟ್ವಾಳ್‌ಗೆ ಚಲನಚಿತ್ರಗಳಲ್ಲೂ ಅವಕಾಶವೂ ಸಿಕ್ಕಿತ್ತು. ಚಾಲಿಪೋಲಿಲು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮತ್ತೊಂದು ತುಳು ಚಿತ್ರದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಸವರ್ಣದೀರ್ಘ ಸಂಧಿ ಎನ್ನುವ ಕನ್ನಡ ಚಿತ್ರದಲ್ಲೂ ಅಭಿನಯಿಸಿದ್ದರು. ಸಾಕಷ್ಟು ಬೆಂಬಲಿಗರು ಇದ್ದರೂ ಅಷ್ಟೇ ಪ್ರಮಾಣದ ವಿರೋಧಿಗಳೂ ಇದ್ದರು. ಹಣಕಾಸಿನ ವ್ಯವಹಾರ ಇವರಿಗೆ ವೈರಿಗಳನ್ನು ಹೆಚ್ಚಿಸಿದ್ದವು. ಎರಡು ವರ್ಷದ ಹಿಂದೆ ಬಂಟ್ವಾಳದ ಬಡ್ಡಕಟ್ಟೆಯ ಹೊಟೇಲ್ ಮುಂಭಾಗ ಬಿಜೆಪಿ ಕಾರ್ಯಕರ್ತನಿಗೆ ತಲವಾರು ಝಳಪಿಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಜೈಲು ಸೇರಿ, ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು.

    ಹಂತಕರ ಪತ್ತೆಗೆ ತಂಡ: ಹಂತಕರ ಪತ್ತೆಗೆ ಪೊಲೀಸರು ವಿವಿಧ ತಂಡಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಶೀಘ್ರ ಆರೋಪಿಗಳನ್ನು ಹಿಡಿಯುವ ವಿಶ್ವಾಸವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. ಘಟನೆ ರಾತ್ರಿ ನಡೆದಿರಬಹುದು ಎಂದು ಮೇಲ್ನೋಟಕ್ಕೆ ತಿಳಿದುಬಂದಿದ್ದು, ಸಾಕ್ಷಿ ಸಂಗ್ರಹ ನಡೆಯುತ್ತಿದೆ. ಅವರು ಎಲ್ಲೆಲ್ಲಿ ವ್ಯವಹಾರ ಮಾಡುತ್ತಿದ್ದರೆಂಬುದನ್ನು ಪರಿಶೀಲಿಸುತ್ತಿದ್ದೇವೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಕೊಲೆ ನಡೆದ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಡಿವೈಎಸ್ಪಿ ವೆಲಂಟೈನ್ ಡಿಸೋಜ, ಸಿಐ ನಾಗರಾಜ್, ಎಸೈಗಳಾದ ನಂದಕುಮಾರ್, ಪ್ರಸನ್ನ ಅವರಿಗೆ ವಿವಿಧ ಸೂಚನೆಗಳನ್ನು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts