More

    ದ್ವೇಷಭಾಷಣಕ್ಕೆ ಕ್ರಮ: ಸ್ವಯಂಪ್ರೇರಿತ ಕೇಸ್​ಗೆ ಸುಪ್ರೀಂ ನಿರ್ದೇಶನ

    ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ದ್ವೇಷಪೂರಿತ ಭಾಷಣಗಳ ಬಗ್ಗೆ ಸುಪ್ರೀಂಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದ್ದು, ಈ ಸಂಬಂಧ ಸ್ವಯಂಪ್ರೇರಿತ ಕ್ರಮಕ್ಕೆ ಸೂಚಿಸಿದೆ. ಇದು 21ನೇ ಶತಮಾನ. ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ? ಧಾರ್ವಿುಕವಾಗಿ ತಟಸ್ಥವಾಗಬೇಕಿರುವ ದೇಶದಲ್ಲಿ ದ್ವೇಷಭಾಷಣಗಳಂತಹ ಚಟುವಟಿಕೆಗಳು ಆಘಾತಕಾರಿ. ಈ ಸಂಬಂಧ ಔಪಚಾರಿಕ ದೂರು ದಾಖಲಿಸುವವರೆಗೆ ಕಾಯದೆ ಅಂತಹ ಪ್ರಕರಣಗಳಲ್ಲಿ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ದೇಶದ ಜಾತ್ಯತೀತ ಸ್ವರೂಪವನ್ನು ಕಾಪಾಡಲು ಇಂತಹ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ದ್ವೇಷದ ಭಾಷಣ ಮಾಡುವ ರಾಜಕೀಯ ನಾಯಕರ ವಿರುದ್ಧ ಕ್ರಮ ಕೋರಿ ಶಹೀನ್ ಅಬ್ದುಲ್ಲಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೆ.ಎಂ. ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ವಿಭಾಗೀಯ ಪೀಠವು, 51ನೇ ವಿಧಿಯು ವೈಜ್ಞಾನಿಕ ಮನೋಭಾವದ ಬಗ್ಗೆ ಮಾತನಾಡುತ್ತದೆ. ಆದರೆ, ಧರ್ಮದ ಹೆಸರಿನಲ್ಲಿ ದ್ವೇಷಭಾಷಣ ಮಾಡಲಾ ಗುತ್ತಿದೆ. ಇದು ನಿಜಕ್ಕೂ ದುರಂತ ಎಂದು ಹೇಳಿತು. ಈ ಸಂಬಂಧ ಕ್ರಮಕ್ಕೆ ವಿಳಂಬವಾದಲ್ಲಿ ನ್ಯಾಯಾಂಗ ನಿಂದನೆ ಎದುರಿಸಬೇಕಾಗಬಹುದು ಎಂದೂ ಎಚ್ಚರಿಸಿತು. ದ್ವೇಷ ಅಪರಾಧ ಮತ್ತು ಭಾಷಣ ನಿರ್ಬಂಧಿಸಲು ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯುಎಪಿಎ) ಮತ್ತು ಇತರೆ ಕಠಿಣ ಕಾನೂನು ಜಾರಿಗೆ ಅರ್ಜಿದಾರರು ಕೋರಿದ್ದರು.

    ಕಠಿಣ ಕ್ರಮಕ್ಕೆ ಸೂಚನೆ: ಯಾವುದೇ ಧರ್ಮಕ್ಕೆ ಸೇರಿದವರಾದರೂ ದ್ವೇಷಪೂರಿತ ಭಾಷಣ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದ್ದು, ಅಂತಹ ಪ್ರಕರಣಗಳಲ್ಲಿ ಇದುವರೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ದೆಹಲಿ, ಉತ್ತರಪ್ರದೇಶ ಮತ್ತು ಉತ್ತರಾಖಂಡ ಪೊಲೀಸ್ ಮುಖ್ಯಸ್ಥರನ್ನು ಪ್ರಶ್ನಿಸಿದೆ.

    ದ್ವೇಷಭಾಷಣ ಮಾಡುವವರು ಅಥವಾ ದ್ವೇಷ ಅಪರಾಧಗಳಿಗೆ ಕುಮ್ಮಕ್ಕು ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದ ಅರ್ಜಿದಾರರ ಪರ ಹಿರಿಯ ವಕೀಲ ಕಪಿಲ್ ಸಿಬಲ್, ದೆಹಲಿಯಲ್ಲಿ ಬಿಜೆಪಿ ಸಂಸದ ಪರ್ವೆಶ್ ಶರ್ಮಾ ವರ್ವ ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದರು.

    ಈಶಾನ್ಯ ದೆಹಲಿಯಲ್ಲಿ ಹಿಂದೂ ಯುವಕನ ಹತ್ಯೆ ಪ್ರತಿಭಟಿಸಲು ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ವರ್ವ ‘ಅವರನ್ನು ನೀವು ಎಲ್ಲಿ ನೋಡಿದರೂ ಅವರನ್ನು ಸರಿಪಡಿಸಲು ಇರುವ ಒಂದೇ ಮಾರ್ಗ ಸಂಪೂರ್ಣ ಬಹಿಷ್ಕಾರ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೇ?’ ಎಂದು ಹೇಳಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ವರ್ವ ‘ನಾನು ಯಾವುದೇ ನಿರ್ದಿಷ್ಟ ಸಮುದಾಯವನ್ನು ಹೆಸರಿಸಿಲ್ಲ. ಹಿಂದೂಗಳ ಹತ್ಯೆಯಲ್ಲಿ ಭಾಗಿಯಾಗುವವರನ್ನು ಬಹಿಷ್ಕರಿಸುವ ಅಗತ್ಯವಿದೆ’ ಎಂದಷ್ಟೇ ಹೇಳಿದ್ದೆ ಎಂದಿದ್ದರು.

    ‘ಅಪ್ಪು ಸರ್ ಕ್ಷಮೆ ಇರಲಿ’ ಎಂದ ರಿಷಬ್​ ಶೆಟ್ಟಿ; ದೂರದೂರಿನಿಂದಲೇ ಹೀಗೆನ್ನಲು ಕಾರಣ..

    ‘ಕಾಂತಾರ’ದಿಂದ ಮತ್ತೊಂದು ದಾಖಲೆ: ಇದುವರೆಗೂ ಕನ್ನಡ ಸಿನಿಮಾ ಬಿಡುಗಡೆ ಆಗದ ಪಟ್ಟಣದಲ್ಲಿ ಪ್ರದರ್ಶನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts