More

    ಪ್ರಧಾನಿ ಪ್ರಯಾಣ ದಾಖಲೆ ಸುರಕ್ಷತೆಗೆ ಸುಪ್ರೀಂ ಸೂಚನೆ: ಭದ್ರತಾ ಲೋಪ ಕುರಿತು ಸಿಜೆಐ ರಮಣ ನೇತೃತ್ವದ ಪೀಠ ವಿಚಾರಣೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬುಧವಾರ ಪಂಜಾಬ್​ನ ಫಿರೋಜ್​ಪುರಕ್ಕೆ ತೆರಳುತ್ತಿದ್ದ ವೇಳೆ ಉಂಟಾದ ಭದ್ರತಾ ಲೋಪದ ಹಿನ್ನೆಲೆಯಲ್ಲಿ ಅವರ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿಡುವಂತೆ ಪಂಜಾಬ್-ಹರಿಯಾಣ ಹೈಕೋರ್ಟ್​ನ ರಿಜಿಸ್ಟ್ರಾರ್ ಜನರಲ್​ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಪಂಜಾಬ್ ಪೊಲೀಸ್ ಮತ್ತು ಪ್ರಧಾನಿಗೆ ಭದ್ರತೆ ಒದಗಿಸುವ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್​ಪಿಜಿ) ಅಧಿಕಾರಿಗಳು ರಿಜಿಸ್ಟ್ರಾರ್ ಜನರಲ್​ಗೆ ಅಗತ್ಯ ಸಹಕಾರ ನೀಡುವಂತೆಯೂ ಸೂಚನೆ ನೀಡಿರುವ ಸುಪ್ರೀಂಕೋರ್ಟ್, ಅವರ ಜತೆಗೆ ಸಮನ್ವಯಕ್ಕಾಗಿ ಚಂಡೀಗಢ ಪೊಲೀಸ್ ಮಹಾನಿರ್ದೇಶಕ ಮತ್ತು ರಾಷ್ಟ್ರೀಯ ತನಿಖಾ ದಳದ (ಎನ್​ಐಎ) ಅಧಿಕಾರಿಯೊಬ್ಬರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದೆ.

    ಸೋಮವಾರಕ್ಕೆ ಮುಂದಿನ ವಿಚಾರಣೆಯನ್ನು ನಿಗದಿ ಮಾಡಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ, ಘಟನೆಯ ಬಗ್ಗೆ ತನಿಖೆ ನಡೆಸಲು ರಚನೆಯಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ತನಿಖಾ ಸಮಿತಿಗಳು ಸೋಮವಾರದವರೆಗೆ ಕಾರ್ಯನಿರ್ವಹಿಸಬಾರದು ಎಂದೂ ತಿಳಿಸಿದೆ. ಈ ಮಧ್ಯೆ, ಪ್ರಧಾನಿ ಭದ್ರತಾ ಲೋಪ ಗಡಿಯಾಚೆಗಿನ ಭಯೋತ್ಪಾದನೆಯ ವಿಚಾರ ಎಂದು ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್​ಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಕಣ್ಗಾವಲಿನಲ್ಲಿ ತನಿಖೆಯಾಗಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿ ಮೇಲೆ ವಿಚಾರಣೆ ನಡೆಯುತ್ತಿದ್ದು, ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಡಿಜಿಪಿ ಅವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮಣಿಂದರ್ ಸಿಂಗ್, ಗಂಭೀರ ಪ್ರಕರಣಗಳ ಬಗ್ಗೆ ಶಿಸ್ತಿನ ಮತ್ತು ವೃತ್ತಿಪರ ತನಿಖೆ ನಡೆಯಬೇಕಿದೆ. ಇಂಥಾ ಪ್ರಕರಣಗಳ ತನಿಖೆ ಹೇಗೆ ನಡೆಯಬೇಕು ಎಂಬುದಕ್ಕೆ ನ್ಯಾಯಾಲಯ ಮಾರ್ಗಸೂಚಿ ರೂಪಿಸಬೇಕು ಎಂದು ಒತ್ತಾಯಿಸಿದರು.

    ಸಿಖ್ ಫಾರ್ ಜಸ್ಟಿಸ್: ಗಡಿಯಾಚೆಗಿನ ಭಯೋತ್ಪಾದನೆಗೆ ಸಂಬಂಧಿಸಿದ ವಿಚಾರವಿದು ಎಂದು ಕೋರ್ಟ್ ಗಮನಸೆಳೆದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಿಖ್ ಫಾರ್ ಜಸ್ಟಿಸ್ ಎಂಬ ಸಂಘಟನೆ ಪ್ರತಿಭಟನಾಕಾರರಿಗೆ ಗಂಭೀರ ಕೃತ್ಯ ಎಸಗಲು ಕರೆ ನೀಡಿತ್ತು. ಈ ಪ್ರಕರಣವನ್ನು ಸುಮ್ಮನೆ ಬಿಡಲು ಸಾಧ್ಯವೇ ಇಲ್ಲ. ದೇಶದ ಪ್ರಧಾನಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರವಾಗುವಂತೆ ಮಾಡಲಾಗಿದೆ. ಎಲ್ಲಾ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆಯಾಗುವಂತೆ ನೋಡಿಕೊಳ್ಳಬೇಕು. ತಪ್ಪಿತಸ್ಥರಿಗೆ ಸುಪ್ರೀಂಕೋರ್ಟ್ ಕಠಿಣ ಸಂದೇಶ ರವಾನೆ ಮಾಡಬೇಕಿದೆ ಎಂದರು.

    ನಮ್ಮ ದೇಶದ ಗಡಿಭಾಗದಲ್ಲಿ ಭದ್ರತೆಗೆ ಸಂಬಂಧಿಸಿ ಭಾರಿ ಲೋಪವಾಗಿದೆ. ಪ್ರಧಾನಮಂತ್ರಿ ಅದರ ಬಗ್ಗೆ ಎಂದಾದರೂ ಮಾತನಾಡಿದ್ದಾರಾ?

    | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ

    ಘಟನೆ ಪೂರ್ವಯೋಜಿತ?: ಫ್ಲೈ ಓವರ್ ಮೇಲೆ ಪ್ರಧಾನಿ ಕಾನ್ವಾಯ್ ತಡೆಯುವ ದೃಶ್ಯವಿರುವ ಅನಿಮೇಟೆಡ್ ವಿಡಿಯೋ ಯೂಟೂಬ್​ಗೆ 2020ರ ಡಿಸೆಂಬರ್ 3ರಂದು ಅಪ್ಲೋಡ್ ಆಗಿತ್ತು. ಅದೇ ಮಾದರಿಯಲ್ಲಿ 2022ರ ಜನವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಅವರ ಕಾನ್ವಾಯ್ ಅನ್ನು ಫ್ಲೈ ಓವರ್ ಮೇಲೆ ತಡೆಯಲಾಗಿದೆ. ಭದ್ರತಾ ವ್ಯವಸ್ಥೆಯಲ್ಲಿ ಲೋಪ ಆಗಿರುವುದು ಅಕಸ್ಮಾತ್ ಆಗಿ ಅಲ್ಲ. ಇದರ ಹಿಂದೆ ಬಹುದೊಡ್ಡ ಪಿತೂರಿ ಇದೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

    ಕಾಪ್ಟರ್ ಎಲ್ಲ ಹವಾಮಾನಕ್ಕೂ ಸೈ: ಪ್ರಧಾನಮಂತ್ರಿ ಅವರು ಬಳಸುವ ಹೆಲಿಕಾಪ್ಟರ್ ಎಲ್ಲ ಹವಾಮಾನದಲ್ಲೂ ಬಳಕೆಗೆ ಯೋಗ್ಯವಾಗಿದೆ. ಆದರೆ ಜನವರಿ 5ರಂದು ಭಟಿಂಡಾದಿಂದ ಪಿರೋಜ್​ಪುರ ಹೋಗಲು ಆ ಕಾಪ್ಟರ್ ಬಳಸದಿರಲು ನಿರ್ಧರಿಸಲಾಗಿತ್ತು. ಪ್ರತಿಕೂಲ ಹವಾಮಾನ ಇತ್ತು ಮತ್ತು ಗುಡ್ಡಗಾಡು ಪ್ರದೇಶವೂ ಆಗಿರಲಿಲ್ಲ. ಹೀಗಿದ್ದರೂ ಕಾಪ್ಟರ್ ಬಳಸದಂತೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೂರು ದಿನ ಮುಂಚಿತವಾಗಿ ಎಚ್ಚರಿಕೆ: ಪಂಜಾಬ್ ರಾಜ್ಯ ಸರ್ಕಾರಕ್ಕೆ ಮೂರು ದಿನ ಮುಂಚಿತವಾಗಿ ಇಂತಹ ರಸ್ತೆ ತಡೆ ಮತ್ತು ಪ್ರಧಾನಿಯವರಿಗೆ ಬೆದರಿಕೆ ಇರುವ ವಿಚಾರವನ್ನು ಗುಪ್ತಚರ ದಳದ ಟಿಪ್ಪಣಿ ಎಚ್ಚರಿಸಿತ್ತು. ಇಂಡಿಯನ್ ಮುಜಾಹಿದ್ದೀನ್, ಎಲ್​ಇಟಿ, ಹಿಜ್ಬುಲ್ ಮುಜಾಹಿದ್ದೀನ್, ತೆಹ್ರೀಕ್ ತಾಲೀಬಾನ್ ಇ ಪಾಕಿಸ್ತಾನ್, ಎಡಪಂಥೀಯರ ತೀವ್ರವಾದಿಗಳು, ಅಳಿದುಳಿದ ಎಲ್​ಟಿಟಿಇಗಳಿಂದ ಪ್ರಧಾನಮಂತ್ರಿಯವರಿಗೆ ಬೆದರಿಕೆ ಇದೆ. ವಿಶೇಷವಾಗಿ ಪಾಕಿಸ್ತಾನದಲ್ಲಿರುವ ವಾಧ್ವಾ ಸಿಂಗ್ ಬಬ್ಬರ್, ಪರಂಜಿತ್ ಸಿಂಗ್ ಪಂಜಾವರ್, ರಣಜಿತ್ ಸಿಂಗ್ ನೀತಾ, ಲಖ್​ಬೀರ್ ಸಿಂಗ್ ರೋಡ್ ಪಂಜಾಬ್​ನಲ್ಲಿ ಉಗ್ರಗಾಮಿ ಚಟುವಟಿಕೆಗೆ ಪುನಶ್ಚೇತನ ಕೊಡಲು ಪ್ರಯತ್ನಿಸುತ್ತಿರುವುದರ ಕಡೆಗೆ ಟಿಪ್ಪಣಿ ಬೆಳಕು ಚೆಲ್ಲಿತ್ತು.

    • ಪ್ರಧಾನಿ ಮೋದಿಯವರ ಯೋಗಕ್ಷೇಮ ಮತ್ತು ದೀರ್ಘಾಯುಸ್ಸಿಗಾಗಿ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಮುಂಬೈನ ಹಾಜಿ ಅಲಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು.

    ಬಿಜೆಪಿ ಜಿಂದಾಬಾದ್ ವಿಡಿಯೋ: ಫ್ಲೈಓವರ್ ಮೇಲೆ ಪ್ರಧಾನಿ ಕಾನ್ವಾಯ್ ನಿಂತಿದ್ದಾಗ ಅಲ್ಲಿ ಬಿಜೆಪಿ ಧ್ವಜ ಹಿಡಿದವರು, ಕತ್ತಿನ ಮೇಲೆ ಬಿಜೆಪಿ ಶಾಲು ಹಾಕಿಕೊಂಡವರು ‘ಬಿಜೆಪಿ ಜಿಂದಾಬಾದ್ ’ ಕೂಗುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ನಾಯಕರು ಶೇರ್ ಮಾಡಿದ್ದು, ಭದ್ರತಾ ಲೋಪ ಆಗಿರುವುದು ಇಲ್ಲಿ ಎಂದು ಟೀಕಿಸಿದ್ದಾರೆ.

    ಸಮನ್ವಯದ ಕೊರತೆ: ವಿವಿಐಪಿ ಭದ್ರತಾ ವ್ಯವಸ್ಥೆಯಲ್ಲಿ ವಿವಿಧ ಏಜೆನ್ಸಿಗಳಿವೆ. ಅವುಗಳ ನಡುವಿನ ಸಮನ್ವಯದ ಕೊರತೆಗೆ ಪಂಜಾಬ್ ಪ್ರಕರಣ ಅತ್ಯುತ್ತಮ ಉದಾಹರಣೆ ಎಂದು ಎನ್​ಎಸ್​ಜಿಯ ಮಾಜಿ ಡೈರೆಕ್ಟರ್ ಜನರಲ್ ಸುದೀಪ್ ಲಖ್ಟಾಕಿಯಾ ಅಭಿಪ್ರಾಯ ಪಟ್ಟಿದ್ದಾರೆ.

    ಗಂಡನನ್ನು ಕೊಲ್ಲಿಸಿ ಅಪಘಾತ ಎಂದು ಬಿಂಬಿಸಿದ್ದ ಪತ್ನಿ; ಕೊಲೆಗೈದ ಪ್ರಿಯಕರನ ಸಹಿತ ಸಿಕ್ಕಿಬಿದ್ದಳು; ಒಟ್ಟು ಮೂವರ ಬಂಧನ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts