More

    ಕೋವಿಡ್​ ಲಸಿಕೆ ಕಡ್ಡಾಯವಲ್ಲ ಎಂದ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೀಡಿತು ಮತ್ತೊಂದು ಮಹತ್ವದ ಸೂಚನೆ!

    ನವದೆಹಲಿ: ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲೇಬೇಕು ಎಂದು ಯಾರಿಗೂ ಒತ್ತಾಯಿಸುವಂತಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್, ಲಸಿಕೆ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ​ ಮತ್ತೊಂದು ಮಹತ್ವದ ನಿರ್ದೇಶನವನ್ನೂ ನೀಡಿದೆ.

    ನ್ಯಾಯಮೂರ್ತಿಗಳಾದ ಎಲ್​. ನಾಗೇಶ್ವರ ರಾವ್ ಮತ್ತು ಬಿ.ಆರ್​. ಗವಾಯಿ ಅವರಿದ್ದ ಪೀಠ ಇಂದು ಈ ನಿರ್ದೇಶನವನ್ನು ನೀಡಿದೆ. ನ್ಯಾಷನಲ್​ ಟೆಕ್ನಿಕಲ್ ಅಡ್ವೈಸರಿ ಗ್ರೂಪ್​ ಆನ್ ಇಮ್ಯುನೈಸೇಷನ್​ನ ಮಾಜಿ ಸದಸ್ಯ ಜಾಕೊಬ್​ ಪುಲಿಯೆಲ್ ಎಂಬವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ಸುಪ್ರೀಂಕೋರ್ಟ್ ಈ ನಿರ್ದೇಶನ ನೀಡಿದೆ.

    ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳ ಕುರಿತ ಕ್ಲಿನಿಕಲ್ ಟ್ರಯಲ್​ಗಳ ಅಂಕಿ-ಅಂಶ ಹಾಗೂ ಕೆಲವು ರಾಜ್ಯಗಳು ಲಸಿಕೆ ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಜಾಕೊಬ್ ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಈ ವಿಚಾರವಾಗಿ ಇಂದು ಪೀಠ ಕೆಲವು ನಿರ್ದೇಶನಗಳನ್ನು ನೀಡಿದೆ.

    ದೈಹಿಕ ಸಮಗ್ರತೆ ಮತ್ತು ಸ್ವಾಯತ್ತತೆ ಸಾಂವಿಧಾನಿಕ ಹಕ್ಕು. ಹೀಗಾಗಿ ಯಾವುದೇ ವ್ಯಕ್ತಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯ ಮಾಡುವ ಹಾಗಿಲ್ಲ. ಅದರಲ್ಲೂ ಸರ್ಕಾರದ ಸದ್ಯದ ಕೋವಿಡ್-19 ಪಾಲಿಸಿ ನಿರಂಕುಶವಾದುದಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

    ಅಷ್ಟೇ ಅಲ್ಲದೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಇನ್ನೊಂದು ನಿರ್ದೇಶನವನ್ನೂ ನೀಡಿದೆ. ಕೋವಿಡ್-19 ಲಸಿಕೀಕರಣದ ವ್ಯತಿರಿಕ್ತ ಪರಿಣಾಮಗಳ ಮಾಹಿತಿಯನ್ನೂ ಸಾರ್ವಜನಿಕರಿಗೆ ತೆರೆದಿಡಬೇಕು ಎಂದು ಅದು ಸೂಚನೆ ನೀಡಿದೆ.

    ಲಸಿಕೆ ಪಡೆದವರಿಗಿಂತ ಲಸಿಕೆ ಪಡೆಯದವರು ಬೇಗ ಸೋಂಕನ್ನು ಹರಡುತ್ತಾರೆ ಎನ್ನುವ ಕುರಿತು ಸರ್ಕಾರ ಯಾವುದೇ ದಾಖಲೆಯನ್ನು ಸ್ಥಾಪಿಸಿಲ್ಲ. ಅಲ್ಲದೆ ಲಸಿಕೆ ಪಡೆಯದವರಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ಬಂಧ ಹಾಕಬಾರದು ಎಂದು ಹೇಳಿರುವ ಪೀಠ, ಕೋವಿಡ್​-19 ಲಸಿಕೆಯಿಂದಾಗುವ ವ್ಯತಿರಿಕ್ತ ಪರಿಣಾಮಗಳ ಮಾಹಿತಿಯನ್ನು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ತೆರೆದಿಡಬೇಕು ಎಂದೂ ಹೇಳಿದೆ. ಈ ಕುರಿತ ಪೂರ್ತಿ ತೀರ್ಪನ್ನು ಶೀಘ್ರದಲ್ಲೇ ಅಪ್​ಲೋಡ್ ಮಾಡುವುದಾಗಿ ಪೀಠ ತಿಳಿಸಿದೆ.

    ಕೋವಿಡ್​ ಲಸಿಕೆ ಹಾಕಿಸಿಕೊಳ್ಳುವಂತೆ ಯಾರಿಗೂ ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts