More

    ರೈತರ ಬೇಡಿಕೆ ಈಡೇರಿಸುವ ಪಕ್ಷಕ್ಕೆ ಬೆಂಬಲ – ಕುರುಬೂರು ಶಾಂತಕುಮಾರ

    ವಿಜಯಪುರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಂಬಂಧಿಸಿದಂತೆ ಪ್ರಣಾಳಿಕೆ ಸಿದ್ಧಪಡಿಸಲಾಗಿದ್ದು, ಯಾವ ಪಕ್ಷ ಈ ಪ್ರಣಾಳಿಕೆಗೆ ಬದ್ಧವಾಗಿರಲಿದೆಯೋ ಆ ಪಕ್ಷಕ್ಕೆ ರೈತರ ಬೇಡಿಕೆ ಈಡೇರಿಸುವ ಬೆಂಬಲ ಸೂಚಿಸಲಾಗುವುದು ಎಂದು ರೈತ ಸಂಘಟನೆಗಳ ಒಕ್ಕೂಟದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 75 ವರ್ಷಗಳಿಂದ ರಾಜಕೀಯ ಪಕ್ಷಗಳು ರೈತರಿಗೆ ಸುಳ್ಳು ಭರವಸೆ ನೀಡುತ್ತಾ ಮೋಸ ಮಾಡಿವೆ. ಇದೀಗ ಮತ್ತದೇ ಸುಳ್ಳು ಭರವಸೆ ಮುಂದುವರಿಸಿವೆ. ಹೀಗಾಗಿ ಸಂಘದಿಂದ 10 ಅಂಶಗಳುಳ್ಳ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಈ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಮೇ 2ರಂದು ಬೆಂಗಳೂರಿನಲ್ಲಿ ಅಂತಿಮ ಸಭೆ ನಡೆಯಲಿದೆ. ಅಷ್ಟರೊಳಗೆ ಯಾವ ಪಕ್ಷ ಪ್ರಣಾಳಿಕೆಯ ಅಂಶಗಳನ್ನು ಈಡೇರಿಸಲು ಬದ್ಧತೆ ತೋರುವುದೋ ಆ ಪಕ್ಷಕ್ಕೆ ಬೆಂಬಲ ಸೂಚಿಸಲು ತೀರ್ಮಾನಿಸಲಾಗಿದೆ ಎಂದರು.

    ಪ್ರಣಾಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಪಕ್ಷಗಳೊಂದಿಗೆ ಚರ್ಚಿಸಲಾಗಿದೆ. ಯಾರೂ ಸ್ಪಷ್ಟ ಭರವಸೆ ನೀಡಿಲ್ಲ. ಹೀಗಾಗಿ ‘ರೈತರ ನಡಿಗೆ ಜಾಗೃತಿ ಕಡೆಗೆ ಅಭಿಯಾನ’ ಆರಂಭಿಸಿದ್ದೇವೆ. ರೈತರು ಜಾತಿ, ಧರ್ಮ ಆಧಾರಿತವಾಗಿ ಗುರುತಿಸಿಕೊಳ್ಳದೇ ರೈತರ ಹಿತಕ್ಕಾಗಿ ದುಡಿಯುವ ಪಕ್ಷಗಳಿಗೆ ಬೆಂಬಲಿಸಬೇಕೆಂಬುದೇ ಅಭಿಯಾನದ ಉದ್ದೇಶ. ಕೆಲವು ಪಕ್ಷಗಳು ಕೆಲವು ರೈತ ಸಂಘಟನೆಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿವೆ. ಚುನಾವಣೆ ಬಂದಾಗ ಗಿಮಿಕ್ ಮಾಡುವ ನಾಯಕರಿಂದ ಎಚ್ಚರಿಕೆಯಿಂದ ಇರಲು ಮನವಿ ಮಾಡಲಾಗುತ್ತಿದೆ ಎಂದರು.

    ಪ್ರಣಾಳಿಕೆಯಲ್ಲಿ ಏನಿದೆ?

    ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವ ಶಾಸನ ಜಾರಿ, ಡಾ. ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು, ಸರ್ಕಾರಿ ನೌಕರರಿಗೆ, ಜನಪ್ರತಿನಿಧಿಗಳಿಗೆ ನೀಡುವಂತೆ ರೈತರಿಗೂ ಪ್ರತಿ ತಿಂಗಳು ಸಂಬಳ ರೂಪದಲ್ಲಿ ಜೀವನ ಭದ್ರತೆ ಒದಗಿಸಬೇಕು. ಪ್ರಾಣಿಗಳ ಹಾವಳಿ ಹಾಗೂ ದಾಳಿಯಿಂದ ರೈತನ ಬದುಕು ಹಾಳಾಗುತ್ತಿದೆ. ಆದಕಾರಣ ಹಗಲು ವೇಳೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ 12 ಗಂಟೆ ನಿರಂತರ ವಿದ್ಯುತ್ ನೀಡುವ ಭರವಸೆ ಬೇಕು. ದೇಶದ ಉದ್ಯಮಿಗಳಿಗೆ 10 ಲಕ್ಷ ಕೋಟಿ ರೂ. ಸಾಲ ಮನ್ನಾಮಾಡಿದ ರೀತಿಯಲ್ಲಿಯೇ ಅತಿವೃಷ್ಟಿ ಹಾನಿ, ಕರೋನ ಸಂಕಷ್ಟದಿಂದ ತತ್ತರಿಸಿರುವ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು, ಕೃಷಿ ಸಾಲ ನೀತಿ ಬದಲಾಗಬೇಕು, ದೇಶದ 135 ಕೋಟಿ ಜನರಿಗೆ ಆಹಾರ ಉತ್ಪಾದನೆ ಮಾಡುವ ರೈತನಿಗೆ ಬಡ್ಡಿ ರಹಿತವಾಗಿ ಕೃಷಿ ಸಾಲ ಒದಗಿಸಬೇಕು. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಪರಿಗಣನೆ ಕೈ ಬಿಡುವುದಾಗಿ ಭರವಸೆ ನೀಡಬೇಕು ಹೀಗೆ ಇನ್ನೂ ಅನೇಕ ಅಂಶಗಳಿದ್ದು ಅವುಗಳ ಈಡೇರಿಕೆಗೆ ಬದ್ಧತೆ ತೋರುವ ಪಕ್ಷಕ್ಕೆ ನಮ್ಮ ಬೆಂಬಲ ಎಂದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ಗುಂದಗಿ, ಜಿಲ್ಲಾ ಸಂಚಾಲಕ ಮಹಾಂತೇಶ ಕೆರೂಟಗಿ, ಕಲಬುರಗಿ ಜಿಲ್ಲಾಧ್ಯಕ್ಷ ರಮೇಶ ಹೂಗಾರ, ಬಾಗಲಕೋಟೆ ಜಿಲ್ಲಾ ಮುಖಂಡ ರೇವಣ್ಣಯ್ಯ ಹಿರೇಮಠ, ಶಿವಲೀಲಾ ಲಿಗಾಡಿ, ಮಂಜುನಾಥ ಅಂಬಳೆ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts