More

     ಸೋಲಿನ ಸರಪಳಿ ಕಳಚುವುದೇ ಸ್ಮಿತ್ ಪಡೆ 

    ದುಬೈ: ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್-13ರ ತನ್ನ 7ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ರಾಜಸ್ಥಾನ ರಾಯಲ್ಸ್ ತಂಡದ ಪಾಲಿಗೆ ಮಹತ್ವ ಪಡೆದಿದೆ. ವಿಶ್ವ ಶ್ರೇಷ್ಠ ಆಲ್ರೌಂಡರ್ ಬೆನ್ ಸ್ಟೋಕ್ಸ್ ವಾಪಸಾಗಿದ್ದು ರಾಯಲ್ಸ್ ತಂಡದ ಬಲ ಹೆಚ್ಚಿಸಿದೆ. ಮತ್ತೊಂದೆಡೆ, ಟೂರ್ನಿಯಲ್ಲಿ ಇದುವರೆಗೂ ಸೋಲು-ಗೆಲುವನ್ನು ಸಮಾನವಾಗಿ ಕಂಡಿರುವ ಸನ್‌ರೈಸರ್ಸ್‌ ತಂಡ ಅಂಕಪಟ್ಟಿಯಲ್ಲಿ ಮೇಲೇರುವ ತವಕದಲ್ಲಿದೆ.

    * ರಾಯಲ್ಸ್‌ಗೆ ಸ್ಟೋಕ್ಸ್ ಬಲ
    ಟೂರ್ನಿಯಲ್ಲಿ ಇದುವರೆಗೂ ಆಡಿರುವ 6 ಪಂದ್ಯಗಳ ಪೈಕಿ ಕೇವಲ 2 ಪಂದ್ಯಗಳಲ್ಲಿ ಜಯ ದಾಖಲಿಸಿ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ರಾಯಲ್ಸ್ ತಂಡ ಗೆಲುವಿನ ಒತ್ತಡದಲ್ಲಿದೆ. ಫೇವರಿಟ್ ನೆಲದ ಶಾರ್ಜಾದಲ್ಲೇ ಸೋಲು ಕಂಡಿರುವ ಸ್ಟೀವನ್ ಸ್ಮಿತ್ ಪಡೆಗೆ ಗೆಲುವು ಅನಿವಾರ್ಯವಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ತಂದೆಯನ್ನು ನೋಡುವ ಸಲುವಾಗಿ ನ್ಯೂಜಿಲೆಂಡ್‌ಗೆ ತೆರಳಿದ್ದ ಬೆನ್‌ಸ್ಟೋಕ್ಸ್, ಕಳೆದ ವಾರವಷ್ಟೇ ಯುಎಇಗೆ ಬಂದಿಳಿದರು. ಇದೀಗ 6 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಕ್ತಾಯಗೊಳಿಸಿರುವ ಸ್ಟೋಕ್ಸ್, ಭಾನುವಾರ ತಂಡ ಕೂಡಿಕೊಳ್ಳಲಿದ್ದಾರೆ. ಇದರೊಂದಿಗೆ ರಾಯಲ್ಸ್ ತಂಡಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗಗಳಲ್ಲಿ ಶಕ್ತಿ ಬಂದಂತಾಗಿದೆ. ಕಳೆದ ವರ್ಷ ಇಂಗ್ಲೆಂಡ್ ತಂಡ ವಿಶ್ವಕಪ್ ಜಯಿಸುವಲ್ಲಿ ಸ್ಟೋಕ್ಸ್ ಪ್ರಮುಖ ಪಾತ್ರವಹಿಸಿದ್ದರು. ನಾಯಕ ಸ್ಟೀವನ್ ಸ್ಮಿತ್, ಜೋಶ್ ಬಟ್ಲರ್ ಅಸ್ಥಿರ ನಿರ್ವಹಣೆ ತಂಡವನ್ನು ಕಾಡುತ್ತಿದ್ದರೆ, ಸತತ ನಾಲ್ಕು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ವಿಫಲರಾಗಿದ್ದಾರೆ. ರಾಹುಲ್ ತೆವಾಟಿಯಾ ಡೆಲ್ಲಿ ಎದುರು ಕ್ಷಣದಲ್ಲಿ ಡೆಲ್ಲಿ ಎದುರು ಹೋರಾಡಿದ್ದು ಹೊರತುಪಡಿಸಿದರೆ, ಇತರ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ನಿರ್ವಹಣೆ ಬರುತ್ತಿಲ್ಲ. ಆರ್ಚರ್‌ಗೆ ಇತರ ಬೌಲರ್‌ಗಳಿಂದ ಅಗತ್ಯ ಸಾಥ್ ಸಿಗುತ್ತಿಲ್ಲ.

    * ಆತ್ಮವಿಶ್ವಾಸದಲ್ಲಿ ಸನ್‌ರೈಸರ್ಸ್‌
    ಲೀಗ್‌ನಲ್ಲಿ ಇದುವರೆಗೂ ಸೋಲು-ಗೆಲುವುಗಳನ್ನು ಸಮಾನವಾಗಿ ಕಂಡಿರುವ ಸನ್‌ರೈಸರ್ಸ್‌ ತಂಡ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಎದುರು ಭರ್ಜರಿ ಜಯ ದಾಖಲಿಸಿದ್ದ ಸನ್‌ರೈಸರ್ಸ್‌ಗೆ ಆರಂಭಿಕರೇ ದೊಡ್ಡ ಶಕ್ತಿಯಾಗಿದ್ದಾರೆ. ಬೆನ್ ಸ್ಟೋಕ್ಸ್, ನಾಯಕ ಡೇವಿಡ್ ವಾರ್ನರ್ ಜೋಡಿ ಆರಂಭಿಕ ಹಂತದಲ್ಲಿ ರನ್‌ಹೊಳೆಯನ್ನೇ ಹರಿಸಿದರೂ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದ ಭೀತಿ ತಂಡವನ್ನು ಕಾಡುತ್ತಿದೆ. ಟೂರ್ನಿ ಆರಂಭದಲ್ಲೇ ಅನುಭವಿ ಮಿಚೆಲ್ ಮಾರ್ಷ್ ಸೇವೆಯನ್ನು ಕಳೆದುಕೊಂಡ ಸನ್‌ರೈಸರ್ಸ್‌, ಇದೀಗ ಭುವನೇಶ್ವರ್ ಕುಮಾರ್ ಕೂಡ ಗಾಯಕ್ಕೆ ತುತ್ತಾಗಿದ್ದಾರೆ. ಭುವಿ ಅನುಪಸ್ಥಿತಿಯಲ್ಲೂ ಟಿ.ನಟರಾಜನ್, ರಶೀದ್ ಖಾನ್, ಖಲೀಲ್ ಅಹಮದ್ ಒಳಗೊಂಡ ಬೌಲಿಂಗ್ ಪಡೆ ತಂಡಕ್ಕೆ ಆಸರೆಯಾಗಿದ್ದಾರೆ.

    ಟೀಮ್ ನ್ಯೂಸ್:
    ರಾಜಸ್ಥಾನ ರಾಯಲ್ಸ್: ಬೆನ್ ಸ್ಟೋಕ್ಸ್ ಲಭ್ಯತೆಯಿಂದಾಗಿ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಆಂಡ್ರ್ಯೋ ಟೈ ಹೊರಗುಳಿಯಲಿದ್ದಾರೆ. ಉಳಿದಂತೆ, ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ.
    ಸಂಭಾವ್ಯ ತಂಡ: ಜೋಶ್ ಬಟ್ಲರ್ (ವಿಕೀ), ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಸ್ಟೀವನ್ ಸ್ಮಿತ್ (ನಾಯಕ), ಬೆನ್ ಸ್ಟೋಕ್ಸ್, ಮಹಿಪಾಲ್ ಲೊಮ್ರೊರ್, ರಾಹುಲ್ ತೆವಾಟಿಯಾ, ಜ್ರೋಾ ಆರ್ಚರ್, ಶ್ರೇಯಸ್ ಗೋಪಾಲ್, ವರುಣ್ ಆರನ್, ಕಾರ್ತಿಕ್ ತ್ಯಾಗಿ.

    ಕಳೆದ ಪಂದ್ಯ: ಡೆಲ್ಲಿ ಕ್ಯಾಪಿಟಲ್ಸ್ ಎದುರು 46 ರನ್ ಸೋಲು.

    ಸನ್‌ರೈಸರ್ಸ್‌ ಹೈದರಾಬಾದ್: ಹಿಂದಿನ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿರುವ ಸನ್‌ರೈಸರ್ಸ್‌ ತಂಡದಲ್ಲಿ ಅದೇ ತಂಡ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.
    ಸಂಭಾವ್ಯ ತಂಡ: ಡೇವಿಡ್ ವಾರ್ನರ್ (ನಾಯಕ), ಜಾನಿ ಬೇರ್‌ಸ್ಟೋ (ವಿಕೀ), ಮನೀಷ್ ಪಾಂಡೆ, ಪ್ರಿಯಂ ಗಾರ್ಗ್, ಕೇನ್ ವಿಲಿಯಮ್ಸನ್, ಅಬ್ದುಲ್ ಸಮದ್, ಅಭಿಷೇಕ್ ಶರ್ಮ, ರಶೀದ್ ಖಾನ್, ಸಿದ್ದಾರ್ಥ್ ಕೌಲ್, ಟಿ.ನಟರಾಜನ್, ಸಂದೀಪ್ ಶರ್ಮ.

    ಕಳೆದ ಪಂದ್ಯ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 69 ರನ್ ಜಯ.

    ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
    ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
    ಮುಖಾಮುಖಿ: 11, ಸನ್‌ರೈಸರ್ಸ್‌: 6, ರಾಜಸ್ಥಾನ ರಾಯಲ್ಸ್: 5

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts