More

    ಟೀಮ್ ಇಂಡಿಯಾ ಐತಿಹಾಸಿಕ ಸಾಧನೆ, ಜೋಶಿಗೂ ಸಲ್ಲಲಿ ಅಭಿನಂದನೆ

    ಬೆಂಗಳೂರು: ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಭಾರತ ಕ್ರಿಕೆಟ್ ತಂಡದ ಸಾಧನೆ ಸರ್ವತ್ರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಕೆಚ್ಚೆದೆಯ ಆಟವಾಡಿ ಬಾರ್ಡರ್- ಗಾವಸ್ಕರ್ ಟ್ರೋಫಿಯೊಂದಿಗೆ ತವರಿಗೆ ಮರಳಿರುವ ಟೀಮ್ ಇಂಡಿಯಾ ಕ್ರಿಕೆಟಿಗರನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ತಂಡಕ್ಕೆ ಮಾರ್ಗದರ್ಶನ ಮಾಡಿದ ಕೋಚ್ ರವಿಶಾಸ್ತ್ರಿ, ಗಾಯಾಳು ಸಮಸ್ಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಸಹಾಯಕ ಸಿಬ್ಬಂದಿ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸರಣಿಯಲ್ಲಿ ವೀರಾವೇಶದ ಆಟವಾಡಿ ಕಾಂಗರೂಗಳಿಗೆ ನೀರು ಕುಡಿಸಿದ ಯುವ ಆಟಗಾರರನ್ನು 19 ಹಾಗೂ 21 ವಯೋಮಿತಿ ಹಂತದಲ್ಲೇ ಗುರುತಿಸಿ ಪ್ರಸಕ್ತ ಯಶಸ್ಸಿಗೆ ಕಾರಣಕರ್ತರಾದ ರಾಹುಲ್ ದ್ರಾವಿಡ್ ಕೊಡುಗೆಯನ್ನೂ ಸ್ಮರಿಸಲಾಗುತ್ತಿದೆ. ಆದರೆ, ಈ ಎಲ್ಲ ಆಟಗಾರರನ್ನು ನಿರ್ದಿಷ್ಟವಾಗಿ ಗುರುತಿಸಿ, ತಂಡಕ್ಕೆ ಆಯ್ಕೆ ಮಾಡಿ ಆಸ್ಟ್ರೇಲಿಯಾದಲ್ಲಿನ ಮಹಾಯಶಸ್ಸಿಗೆ ಮೂಲಕಾರಣರಾಗಿಯೂ ನೇಪಥ್ಯದಲ್ಲೇ ಉಳಿದ ಆಯ್ಕೆಗಾರರನ್ನು ಮಾತ್ರ ಎಲ್ಲರೂ ಮರೆತೇ ಬಿಟ್ಟಿರುವುದು ವಿಪರ್ಯಾಸ.

    ಹೌದು, ಯಾವುದೇ ಪ್ರವಾಸ ಅಥವಾ ಸರಣಿಯಲ್ಲಿ ತಂಡ ವಿಲವಾದಾಗ ಅಥವಾ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಲು ಸಾಧ್ಯವಾಗದೇ ಹೋದಾಗ ಮೊದಲು ಟೀಕೆಗೆ ತುತ್ತಾಗುವುದು ಆಯ್ಕೆಗಾರರು. ಆದರೆ, ಆಸೀಸ್ ಪ್ರವಾಸದಲ್ಲಿ ಪೃಥ್ವಿ ಶಾ ಹೊರತುಪಡಿಸಿದರೆ, ಪ್ರತಿಯೊಬ್ಬ ಆಟಗಾರರೂ ತಮ್ಮ ಆಯ್ಕೆ ಸಮರ್ಥಿಸುವಂತೆ ಪ್ರದರ್ಶನ ನೀಡಿದರು. ಪ್ರಮುಖ ಆಟಗಾರರು ಗಾಯಗೊಂಡಾಗ ನೆಟ್ ಬೌಲರ್ ರೂಪದಲ್ಲಿ ತಂಡದಲ್ಲಿದ್ದವರೂ ತಾವೇನು ಕಮ್ಮಿ ಎನ್ನುವಂತೆ ಪ್ರದರ್ಶನ ನೀಡಿದರು. ಕನ್ನಡಿಗ ಸುನೀಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿಯ ಪ್ರತಿಯೊಂದು ಆಯ್ಕೆಯೂ ಪರಿಪೂರ್ಣವಾಗಿ ತಂಡದ ಕೈಹಿಡಿದಿದ್ದು ವಿಶೇಷ. ಇದಕ್ಕಾಗಿ ಆಯ್ಕೆಗಾರರನ್ನು ಅಭಿನಂದಿಸಲೇಬೇಕು.

    * ಸವಾಲಾದ ಕರೊನಾ, ನಿಂತ ಕ್ರಿಕೆಟ್ ಚಟುವಟಿಕೆ..!
    ಗದಗದ ಸುನೀಲ್ ಜೋಶಿ, ಕಳೆದ ಮಾರ್ಚ್ ತಿಂಗಳಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾದ ಬೆನ್ನಲ್ಲೇ ಕರೊನಾ ಕಂಟಕದಿಂದಾಗಿ ಕ್ರಿಕೆಟ್ ಚಟುವಟಿಕೆಗಳೇ ಬಂದ್ ಆಯಿತು. ಹೀಗಾಗಿ ಆಸೀಸ್ ಪ್ರವಾಸಕ್ಕೆ ತಂಡ ಆಯ್ಕೆ ಮಾಡುವುದಕ್ಕೆ ಐಪಿಎಲ್ ಪ್ರದರ್ಶನ ಬಿಟ್ಟರೆ ಬೇರೆ ಮಾನದಂಡಗಳೇ ಇರಲಿಲ್ಲ. ಹೀಗಿದ್ದರೂ, ಸಹ ಆಯ್ಕೆಗಾರರೊಂದಿಗೆ ಆನ್‌ಲೈನ್‌ನಲ್ಲಿ ನಿರಂತರವಾಗಿ ಸಂಪರ್ಕದಲ್ಲಿದ್ದ ಸುನಿಲ್ ಜೋಶಿ ಪ್ರತಿಯೊಬ್ಬ ಆಟಗಾರರ ಸಾಮರ್ಥ್ಯ, ತಜ್ಞತೆ, ವಿದೇಶಿ ಪಿಚ್‌ಗಳಲ್ಲಿ ಅವರ ಕೌಶಲ ಸಾಧ್ಯತೆ ಅಂದಾಜಿಸಿ ನೀಲಿನಕ್ಷೆ ಸಿದ್ಧಪಡಿಸಿಕೊಂಡಿದ್ದರು.

    ಇದನ್ನೂ ಓದಿ: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ, ಎಂಟರಘಟ್ಟಕ್ಕೇರಿದ ಪಿವಿ ಸಿಂಧು, ಸಮೀರ್ ವರ್ಮ, 

    * ಕೈ ಹಿಡಿದ ನೆಟ್ ಬೌಲರ್ಸ್‌
    ಮೂರು ತಿಂಗಳ ಸುದೀರ್ಘ ಆಸ್ಟ್ರೇಲಿಯಾ ಪ್ರವಾಸಕ್ಕೆ ಸುನೀಲ್ ಜೋಶಿ ನೇತೃತ್ವದ ಆಯ್ಕೆ ಸಮಿತಿ ನಾಲ್ವರು ನೆಟ್‌ಬೌಲರ್‌ಗಳನ್ನು ಆಯ್ಕೆ ಮಾಡಿತ್ತು. ಈ ಪೈಕಿ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಪರ ಭರ್ಜರಿ ನಿರ್ವಹಣೆ ತೋರಿದ್ದ ಯಾರ್ಕರ್ ಸ್ಪೆಷಲಿಸ್ಟ್ ಟಿ. ನಟರಾಜನ್ ಆಯ್ಕೆಯೇ ಹೆಚ್ಚು ಗಮನ ಸೆಳೆಯಿತು. ಆಸೀಸ್ ಪ್ರವಾಸ ಸಾಗುತ್ತಿದ್ದಂತೆ ಭಾರತ ತಂಡದ ಗಾಯಾಳು ಪಟ್ಟಿಯೂ ಬೆಳೆಯುತ್ತಾ ಸಾಗಿತು. ನಿಗದಿತ ಸರಣಿ ಆಡಲು ತೆರಳಿದ್ದ ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್ ಟೆಸ್ಟ್ ಸರಣಿವರೆಗೂ ತಂಡದಲ್ಲೇ ಉಳಿದರು. ವೈಯಕ್ತಿಕವಾಗಿ ಪೃಥ್ವಿ ಷಾ ವೈಲ್ಯ ಅನುಭವಿಸಿದ್ದು ಬಿಟ್ಟರೆ, ಉಳಿದಂತೆ ಆಯ್ಕೆ ಸಮಿತಿ ಮಣೆ ಹಾಕಿದ ಬಹುತೇಕ ಆಟಗಾರರು ನಂಬಿಕೆ ಉಳಿಸಿಕೊಂಡರು. ಇನ್ನು ಆಯ್ಕೆಗಾರರು ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದ ರವೀಂದ್ರ ಜಡೇಜಾ, ರಿಷಬ್ ಪಂತ್ ಮ್ಯಾಚ್‌ವಿನ್ನರ್‌ಗಳೇ ಆದರು.

    * ಒಂದೇ ಸರಣಿಗೆ ಆಯ್ಕೆ!
    50 ವರ್ಷದ ಸುನೀಲ್ ಜೋಶಿ, ಕೇವಲ 9 ತಿಂಗಳಷ್ಟೇ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಕರೊನಾದಿಂದ ಕ್ರಿಕೆಟ್ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡ ಕಾರಣ ಮುಖ್ಯ ಆಯ್ಕೆಗಾರರಾಗಿ ಕನಿಷ್ಠ ಒಂದು ಪ್ರವಾಸ ಮಾಡುವುದಕ್ಕೂ ಅವಕಾಶ ಸಿಗಲಿಲ್ಲ. ಸದ್ಯ ಜೋಶಿ ಅವರಿಗಿಂತ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಚೇತನ್ ಶರ್ಮ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದಾರೆ. ಆಯ್ಕೆ ಸಮಿತಿಯಲ್ಲಿ ಜೋಶಿ ದಕ್ಷಿಣ ವಲಯದ ಪ್ರತಿನಿಧಿಯಾಗಿದ್ದಾರೆ.

    ಇದನ್ನೂ ಓದಿ: VIDEO: ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿ ತವರಿಗೆ ಮರಳಿದ ಅಜಿಂಕ್ಯ ರಹಾನೆಗೆ ಅದ್ದೂರಿ ಸ್ವಾಗತ..,

    * ಜೋಶಿ ಸೇವೆ ಮರೆತ ಬಿಸಿಸಿಐ?
    ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಜಯಿಸಿದ ಬೆನ್ನಲ್ಲೇ ಭಾರತ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 5 ಕೋಟಿ ರೂಪಾಯಿ ಬಹುಮಾನ ಮೊತ್ತ ಘೋಷಿಸಿತು. ಆದರೆ, ಐತಿಹಾಸಿಕ ಸಾಧನೆಗಾಗಿ ಬಲಿಷ್ಠ ತಂಡ ಕಳುಹಿಸಿಕೊಟ್ಟಿದ್ದ ಆಯ್ಕೆ ಸಮಿತಿಯನ್ನೇ ಮರೆಬಿಟ್ಟಿತು. ಪ್ರತಿಷ್ಠಿತ ಸರಣಿ, ಟೂರ್ನಿ ಗೆದ್ದಾಗ ತಂಡದ ಜತೆಗೆ ಆಯ್ಕೆ ಸಮಿತಿಗೂ ಬಹುಮಾನ ಘೋಷಿಸುವುದು ಹಿಂದಿನ ವಾಡಿಕೆಯಾಗಿದ್ದರೂ ಸುನೀಲ್ ಜೋಶಿ ನೇತೃತ್ವದ ಆಯ್ಕೆಗಾರರ ಬಳಗದಲ್ಲಿದ್ದ ಹರ್ವಿಂದರ್, ಜತಿನ್ ಪರಾಂಜಪೆ, ಸರಣ್‌ದೀಪ್ ಸಿಂಗ್, ದೇವಾಂಗ್ ಗಾಂಧಿಗೆ ಕನಿಷ್ಠ ಅಭಿನಂದನೆಯೂ ಸಂಬಂಧಪಟ್ಟವರಿಂದ ಸಂದಾಯವಾಗಿಲ್ಲ. ಆಸ್ಟ್ರೇಲಿಯಾದಲ್ಲಿ ತ್ರಿವರ್ಣ ಹಾರಾಡಲು ಕಾರಣರಾದ ಕಾರಣರಾದ ಅವರಿಗೂ ಅಭಿನಂದಿಸೋಣ.

    ರಾಬಿನ್ ಉತ್ತಪ್ಪ ಮುಂದಿನ ಐಪಿಎಲ್‌ನಲ್ಲಿ ಆಡುತ್ತಿರುವ ತಂಡ ಯಾವುದು ಗೊತ್ತೇ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts