More

    ‘ಭಾನುವಾರ ಮಾರುಕಟ್ಟೆ’ ನನೆಗುದಿಗೆ

    ಬೆಳಗಾವಿ: ರೈತರ ನಿರಾಸಕ್ತಿ, ಗ್ರಾಹಕರ ಕೊರತೆ ಇನ್ನಿತರ ಕಾರಣಗಳಿಂದಾಗಿ ಸರ್ಕಾರದ ಪ್ರಮುಖ ‘ಭಾನುವಾರದ ಮಾರುಕಟ್ಟೆ’ ಯೋಜನೆ ನನೆಗುದಿಗೆ ಬಿದ್ದಿದೆ. ರೈತರು ಬೆಳೆದ ತರಕಾರಿ, ಹಣ್ಣುಗಳು ಮತ್ತು ಅವರು ತಯಾರಿಸಿದ ಉಪ ಉತ್ಪನ್ನಗಳಿಗೆ ನೇರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2015-16ನೇ ಸಾಲಿನ ಬಜೆಟ್‌ನಲ್ಲಿ ಭಾನುವಾರದ ಮಾರುಕಟ್ಟೆ ಯೋಜನೆ ಘೋಷಿಸಿತ್ತು. ಯೋಜನೆಯಡಿ ತಲಾ 1 ಕೋಟಿ ರೂ. ಅನುದಾನ ನೀಡಿತ್ತು.

    ಕೆಲವು ಕಡೆ ಸ್ಥಳದ ಅಭಾವ ಮತ್ತು ಹಣಕಾಸಿನ ಕೊರತೆ ಮತ್ತಿತರ ಕಾರಣಗಳಿಂದ ಭಾನುವಾರದ ಮಾರುಕಟ್ಟೆಗಳು ಆರಂಭಗೊಂಡಿಲ್ಲ.
    ರಾಜ್ಯದಲ್ಲಿ ಅತೀ ಹೆಚ್ಚು ವ್ಯಾಪಾರ-ವಹಿವಾಟು ಹೊಂದಿರುವ ಮತ್ತು ನೆರೆಯ ರಾಜ್ಯದ ಸಂಪರ್ಕ ಹೊಂದಿರುವ ಬೆಳಗಾವಿ, ಮೈಸೂರು, ಹುಬ್ಬಳ್ಳಿ,
    ಉಡುಪಿ, ಕಲಬುರಗಿ, ಬಳ್ಳಾರಿ, ದಾವಣಗೆರೆ ಎಪಿಎಂಸಿಗಳ ಪ್ರಾಂಗಣಗಳಲ್ಲಿ ‘ಭಾನುವಾರದ ಮಾರುಕಟ್ಟೆ’ ಗಳನ್ನು ನಿರ್ಮಿಸಲಾಗಿತ್ತು. ಆರಂಭದಲ್ಲಿ ಮಾರುಕಟ್ಟೆ ಕುಂಟುಂತ ಸಾಗಿತು. ಬಳಿಕ ರೈತರು ಮತ್ತು ಗ್ರಾಹಕರು ಬಾರದಿರುವ ಕಾರಣ ಭಾನುವಾರದ ಮಾರುಕಟ್ಟೆ ಅಸ್ತಿತ್ವ ಕಳೆದುಕೊಂಡು ಬಂದ್ ಆಗಿದ್ದವು.

    ರಾಜ್ಯದಲ್ಲಿ ಸುಮಾರು 3.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೊತ್ತಂಬರಿ, ಪುಂಡಿಪಲ್ಲೆ, ಮೆಂತೆ, ಬೀನ್ಸ್, ಕ್ಯಾಬೀಜ್, ಹೂ ಕೋಸು, ಹಸಿ ಮೆಣಸಿನಕಾಯಿ, ಬೆಂಡೆ, ಬದನೆ, ಅವರೆ ಇನ್ನಿತರ ತರಕಾರಿ ಹಾಗೂ ಹಣ್ಣಿನ ಪದಾರ್ಥಗಳನ್ನು ಬೆಳೆಯಲಾಗುತ್ತಿದೆ. ನಿತ್ಯ ನೂರಾರು ಟನ್ ತರಕಾರಿ, ಹಣ್ಣಿನ ಪದಾರ್ಥಗಳು ನೆರೆಯ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಿಗೆ ಹಾಗೂ ರೈಲ್ವೆ ಮೂಲಕ ದೆಹಲಿಗೆ ಸರಬರಾಜು ಆಗುತ್ತಿದೆ.

    ತರಕಾರಿ, ಹಣ್ಣು ಬೆಳೆಯುವ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಸೂಕ್ತವಾದ ಬೆಲೆ ಸಿಗದೆ ಮಧ್ಯವರ್ತಿಗಳು ನಿಗದಿಪಡಿಸುವ ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದರು. ಇದರಿಂದ ಮಧ್ಯವರ್ತಿಗಳಿಗೆ ಲಾಭವಾಗುತ್ತಿವೆ ವಿನಃ ರೈತರು ಮತ್ತು ಗ್ರಾಹಕರಿಗೆ ಲಾಭವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ರಜೆ ಇರುವ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ನೌಕರರ ಅನುಕೂಲಕ್ಕಾಗಿ ಸರ್ಕಾರವು ನಗರ ಪ್ರದೇಶಗಳಲ್ಲಿ ಭಾನುವಾರದ ಮಾರುಕಟ್ಟೆ ನಿರ್ಮಿಸಿತ್ತು. ಆದರೆ, ಗ್ರಾಹಕರ ಕೊರತೆ, ರೈತರ ನಿರಾಸಕ್ತಿಯಿಂದ ಮಾರುಕಟ್ಟೆ ಬಂದ್ ಆಗಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.

    ಮಾರುಕಟ್ಟೆಯಲ್ಲಿ ಏನೇನು ಮಾರಾಟ ಮಾಡಬಹುದಿತ್ತು?: ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ತರಕಾರಿ, ಹಣ್ಣು-ಹಂಪಲು ಹಾಗೂ ಅವರು ತಯಾರಿಸುವ ಜೋಳದ ರೊಟ್ಟಿ, ತುಪ್ಪ, ಬೆಣ್ಣೆ, ಉಪ್ಪಿನಕಾಯಿ, ಹಪ್ಪಳ, ವಿವಿಧ ಬಗೆಯ ಚಟ್ನಿ, ಉಪ ಉತ್ಪನ್ನಗಳನ್ನು ಭಾನುವಾರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅವಕಾಶವಿತ್ತು. ಇಲ್ಲಿ ಮಧ್ಯವರ್ತಿಗಳ ಪ್ರವೇಶಕ್ಕೆ ಆಸ್ಪದ ಇರಲಿಲ್ಲ. ಆದರೆ, ಗ್ರಾಹಕರು ಮಾರುಕಟ್ಟೆಗೆ ಬರುತ್ತಿರಲಿಲ್ಲ ಇದರಿಂದ ನಷ್ಟವಾಗುತ್ತಿತ್ತು ಎಂದು ತರಕಾರಿ ಬೆಳೆಗಾರರಾದ ಮುತ್ತಪ್ಪ ಎಸ್.ನಾಯಕ, ಮಾರುತಿ ಎಸ್.ನಿಂಗಗೋಳ ಬೇಸರ ವ್ಯಕ್ತಪಡಿಸಿದ್ದಾರೆ.

    ರೈತರು ಮತ್ತು ಗ್ರಾಹಕರಿಗೆ ನೇರ ಸಂಕಲ್ಪ ಕಲ್ಪಿಸುವ ಭಾನುವಾರದ ಮಾರುಕಟ್ಟೆ ಉತ್ತಮ ಯೋಜನೆಯಾಗಿತ್ತು. ಇಲ್ಲಿ ಮಧ್ಯವರ್ತಿಗಳನ್ನು ದೂರ ಇಡಲಾಗಿತ್ತು. ಆದರೆ, ಗ್ರಾಹಕರು ಬಾರದಿರುವ ಹಿನ್ನೆಲೆಯಲ್ಲಿ ರೈತರು ಮಾರುಕಟ್ಟೆಗೆ ಬರಲು ನಿರಾಸಕ್ತಿ ತೋರಿಸಿದರು. ಎಪಿಎಂಸಿಗಳ ಆವರಣ ಬದಲಾಗಿ ನಗರ ಪ್ರದೇಶಗಳ ಮಧ್ಯಭಾಗದಲ್ಲಿ ಅಥವಾ ಅಧಿಕ ಪ್ರಮಾಣದಲ್ಲಿ ಜನರು ಓಡಾಡುವ ಪ್ರದೇಶದಲ್ಲಿ ಭಾನುವಾರದ ಮಾರುಕಟ್ಟೆ ಆರಂಭಿಸಿದರೆ ಯೋಜನೆ ಯಶಸ್ವಿಯಾಗುತಿತ್ತು. ಆದರೆ, ನಗರ ಸ್ಥಳೀಯ ಸಂಸ್ಥೆಗಳು ಜಾಗ ನೀಡಲಿಲ್ಲ.
    | ಡಾ.ಕೆ.ಕೋಡಿಗೌಡ ಎಪಿಎಂಸಿ ಕಾರ್ಯದರ್ಶಿ ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts