More

    ಜಲವೇದನೆ ಅರಣ್ಯರೋದನೆ! 9 ಜಿಲ್ಲೆಗಳಲ್ಲಿ 40 ಡಿಗ್ರಿ ದಾಟಿದ ಬಿಸಿಲು, ಉಷ್ಣಾಘಾತಕ್ಕೆ ಎರಡು ಆನೆಗಳು ಬಲಿ

    ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಏರಿಕೆ ಆಗುತ್ತಿರುವ ತಾಪಮಾನಕ್ಕೆ ಜನಜೀವನ ಸಂಪೂರ್ಣ ತತ್ತರಿಸುತ್ತಿದ್ದು, ಜನರ ಜತೆಗೆ ಮೂಕ ಪ್ರಾಣಿಗಳು ಸಹ ಬಿರು ಬಿಸಿಲು ತಾಳಲಾರದೆ ಸಾವನ್ನಪು್ಪತ್ತಿರುವ ಪ್ರಕರಣ ಹೆಚ್ಚುತ್ತಿದೆ. ಈ ನಡುವೆ ನೀರಿನ ಹಾಹಾಕಾರ, ಬಿಸಿಲಿನ ಅಬ್ಬರದ ನಡುವೆ ಬೇಸಿಗೆ ಸಂಬಂಧಿ ಕಾಯಿಲೆಗಳು ಉಲ್ಬಣಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಏಪ್ರಿಲ್ ಆರಂಭದಲ್ಲೇ ರಾಜ್ಯದ 9 ಜಿಲ್ಲೆಗಳ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿರುವುದು ಆತಂಕ ಮೂಡಿಸಿದೆ.

    ಅರ್ಧ ರಾಜ್ಯ ಕೆಂಡ: ಕರ್ನಾಟಕದ 9 ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಭಾನುವಾರ ಯಾದಗಿರಿಯಲ್ಲಿ 44.6 ಅತಿ ಹೆಚ್ಚು ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಬಳ್ಳಾರಿ 43.7, ಕಲಬುರಗಿ 43.1, ತುಮಕೂರು 42, ರಾಯಚೂರು 41.8, ಬಾಗಲಕೋಟೆ 41.5, ಕೊಪ್ಪಳ 41.3, ವಿಜಯಪುರ 41 ಹಾಗೂ ಗದಗ 40.6 ಡಿ.ಸೆ.ಉಷ್ಣಾಂಶ ದಾಖಲಾಗಿದೆ.

    40ರ ಆಸುಪಾಸು: ಬೆಳಗಾವಿ, ಧಾರವಾಡ, ಬೀದರ್, ದಾವಣಗೆರೆ ಜಿಲ್ಲೆಗಳಲ್ಲಿ 40ರ ಅಸುಪಾಸಿನಲ್ಲಿ ಉಷ್ಣಾಂಶ ಏರಿಕೆಯಾಗಿದೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಲ್ಲೂ ಉಷ್ಣಾಂಶ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಮಂಡ್ಯ 39, ಚಾಮರಾಜನಗರ 38.9, ಕೋಲಾರ 38.3,ಚಿಕ್ಕಬಳ್ಳಾಪುರ 37.8, ಬೆಂ.ಗ್ರಾಮಾಂತರ 37.8, ಮೈಸೂರು 37.7, ಬೆಂಗಳೂರು 37.6, ರಾಮನಗರ 37.3 ಡಿ.ಸೆ.ದಾಖಲಾಗಿದೆ. ಗರಿಷ್ಠ ತಾಪಮಾನ ಇನ್ನೂ 3-4 ಡಿ.ಸೆ. ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.

    ಬೆಂಗಳೂರಲ್ಲಿ 15 ವರ್ಷದ ದಾಖಲೆ: ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ದಾಖಲೆ ಉಷ್ಣಾಂಶ ಕಂಡುಬರುತ್ತಿದೆ. ಏಪ್ರಿಲ್​ನಲ್ಲಿ ಐದಾರು ಬಾರಿ 37ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಭಾನುವಾರ 37.6 ಡಿ.ಸೆ.ದಾಖಲಾಗಿದ್ದು, ಇದು 15 ವರ್ಷ ಬಳಿಕ ಏಪ್ರಿಲ್​ನಲ್ಲಿ ಅತಿ ಹೆಚ್ಚು ಉಷ್ಣಾಂಶ. ನಗರದಲ್ಲಿ ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 3.6 ಡಿ.ಸೆ.ಹೆಚ್ಚಳವಾಗಿದೆ. ಕಳೆದ ವರ್ಷ ಈಶಾನ್ಯ ಮಾನ್ಸೂನ್ ಕುಂಠಿತವಾಗಿದ್ದ ಪರಿಣಾಮ ಇನ್ನಷ್ಟು ಉಷ್ಣಾಂಶ ಏರಿಕೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

    ರಾಜ್ಯಕ್ಕೆ ಬಿಸಿಲ ಬರೆ

    * ಬರದ ಜತೆಗೆ ಬಿಸಿಲಿನಿಂದ ಜನ ಹೈರಾಣು

    * ಬಹುತೇಕ ಜಿಲ್ಲೆಗಳಲ್ಲಿ ಬತ್ತಿದ ಜಲಮೂಲ

    * ಕುಡಿಯುವ ನೀರು ಹೊಂದಿಸುವ ಸವಾಲು

    * ಅಳಿದುಳಿದ ನೀರಿನಿಂದ ಕಾಲರಾ ಆತಂಕ

    * ರಾಜಧಾನಿ ಬೆಂಗಳೂರಿಗೆ ಕಾಲಿಟ್ಟ ಮಾರಿ

    * ಅರ್ಧಕ್ಕರ್ಧ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ

    * ಜನರ ಜತೆಗೆ ಜಾನುವಾರು, ಜಲಚರ ತತ್ತರ

    ಬೆಂಗಳೂರಿನಲ್ಲಿ ವಾರದ ಉಷ್ಣಾಂಶ ವಿವರ

    ದಿನಾಂಕ ತಾಪಮಾನ

    ಏ.1    36.5

    ಏ.2     37.3

    ಏ.3     36.6

    ಏ.4    37.6

    ಏ.5    37.6

    ಏ.6    37.8

    ಏ.7    37.8

    ಕೊಡಗು ಜಿಲ್ಲೆಯಲ್ಲಿ ವರ್ಷಧಾರೆ
    ಕೊಡಗು ಜಿಲ್ಲೆಯ ನಾಪೋಕ್ಲು ಸುತ್ತಮುತ್ತಲ ಗ್ರಾಮಗಳಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ಬಲ್ಲಮಾವಟಿ 90 ಸೆಂ.ಮೀ., ದೊಡ್ಡ ಪುಲಿಕೋಟು 86 ಸೆಂ.ಮೀ., ಕೂರುಳಿ, ಎಮ್ಮೆಮಾಡು, ಕಾರ್ಗಂದ ಗ್ರಾಮದಲ್ಲಿ 35 ಸೆಂ.ಮೀ. ಮಳೆಯಾಗಿದೆ. ಭಾಗಮಂಡಲ, ಚೇರಂಬಾಣೆ ವ್ಯಾಪ್ತಿಯಲ್ಲಿ ಸುರಿದ ಮೊದಲ ಮಳೆಗೆ ರೈತರ ಮೊಗದಲ್ಲಿ ಸಂತಸ ತರಿಸಿದೆ. ಕರಾವಳಿ ಜಿಲ್ಲೆ ಗಳಲ್ಲಿ ಮುಂದಿನ ಒಂದೆರಡು ದಿನ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

    ಜೀವಬಿಡುತ್ತಿವೆ ಮೂಕ ಜೀವಿಗಳು
    ಮನುಷ್ಯರ ಜತೆಗೆ ಮೂಕ ಜೀವಗಳು ಉಸಿರು ಚೆಲ್ಲುತ್ತಿವೆ. ಬಿಸಿಲಿನ ಅಪಾರ ದಣಿವು ಹಾಗೂ ನೀರಿನ ಕೊರತೆಯಿಂದಾಗಿ ವನ್ಯ ಮೃಗಗಳು, ಜಾನುವಾರುಗಳು ಬಲಿಯಾಗುತ್ತಿವೆ. ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಯಲವನಾಥ ಬಳಿ 35 ವರ್ಷದ ಒಂದು ಮಖ್ನಾ ಆನೆ ಹಾಗೂ ಬೆಟ್ಟಹಳ್ಳಿ ಸನಿಹದ ಕಾಡಲ್ಲಿ 15 ವರ್ಷದ ಗಂಡಾನೆ ಸಾವನ್ನಪ್ಪಿವೆ. ಮಖ್ನಾ ಆನೆ ಅನಾರೋಗ್ಯದಿಂದ ನಿತ್ರಾಣಗೊಂಡು, ಆಹಾರ ನೀರು ಸೇವಿಸದೆ ಸಾವನ್ನಪ್ಪಿದರೆ, ಗಂಡಾನೆ ಅಸಿಡಿಟಿ ಹಾಗೂ ನೀರಿನಂಶ ಇರುವ ಆಹಾರದ ಕೊರತೆಯಿಂದ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಬಿಸಿಲ ತಾಪ ತಾಳಲಾರದೆ ಆನೆಗಳು ಮೃತಪಟ್ಟಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ.

    ನೀರು ದೊರೆಯುತ್ತಿಲ್ಲ: ರಾಮನಗರ ಜಿಲ್ಲೆ ಸುತ್ತಲಿನ ಅರಣ್ಯಗಳಲ್ಲಿ ತಾಪಮಾನ ಹೆಚ್ಚಳದಿಂದಾಗಿ ಸಣ್ಣಪುಟ್ಟ ಕೆರೆ, ಹೊಂಡಗಳ ನೀರು ಖಾಲಿಯಾಗುತ್ತಿದೆ. ಆನೆಗಳಿಗೆ ಶುದ್ಧ ನೀರು ಅಗತ್ಯ ಇರುವುದರಿಂದ ನಾಡಿನತ್ತ ಮುಖ ಮಾಡುತ್ತಿವೆ.

    ಜಲಚರಗಳಿಗೂ ಗಂಡಾಂತರ: ಪಾವಗಡ ತಾಲೂಕಿನ ಕಸಬಾ ಹೋಬಳಿಯ ಕನ್ನಮೇಡಿ ಗ್ರಾಮದ ಕೆರೆ ಬತ್ತಲಾರಂಭಿಸಿದ್ದು, ಬಿಸಿಲಿನ ಝುಳಕ್ಕೆ ಕೆರೆಯ ನೀರು ದಿನೇದಿನೆ ಕಡಿಮೆಯಾಗಿ ಲಕ್ಷಾಂತರ ಮೀನುಗಳು ಮೃತಪಟ್ಟಿವೆ. 108 ಎಕರೆ ವಿಸ್ತೀರ್ಣದ ಕನ್ನಮೇಡಿ ಕೆರೆ ತುಂಬಿದರೆ ಜನ ಜಾನುವಾರು, ಜಲಚರಗಳಿಗೆ ಜೀವ ಜಲವಾಗಿರುತ್ತಿತ್ತು. ಆದರೆ ಈ ಬಾರಿ ಮಳೆ ಅಭಾವದಿಂದ ಕೆರೆ ತುಂಬಿಲ್ಲ. ಈಗ ಅತಿಯಾದ ಬಿಸಿಲಿನ ತಾಪಕ್ಕೆ ಕೆರೆಯಲ್ಲಿರುವ ನೀರು ಬತ್ತಿ ಹೋಗುತ್ತಿದ್ದು, ಅಳಿದುಳಿದ ನೀರಲ್ಲಿ ಲಕ್ಷಾಂತರ ಮೀನುಗಳು ಬಿಸಿಲ ತಾಪಕ್ಕೆ ಉಸಿರುಗಟ್ಟಿ ಸಾಯುತ್ತಿವೆ.

    ಅತಿಯಾದ ಮಾವಿನ ಕಾಯಿ ತಿಂದು ಉಂಟಾದ ಅಸಿಡಿಟಿಗೆ ಆನೆ ಮೃತಪಟ್ಟಿದೆ. ನೀರಿನ ಕೊರತೆ ಹಾಗೂ ಕಾಡಿನಲ್ಲಿ ನಾರಿನ ಅಂಶವುಳ್ಳ ಆಹಾರ ಲಭ್ಯತೆ ಇಲ್ಲದೇ ಇರುವುದೂ ಆನೆ ಸಾವಿಗೆ ಕಾರಣವಾಗಿರಬಹುದು.

    | ರಾಮಕೃಷ್ಣಪ್ಪ, ಡಿಸಿಎಫ್, ರಾಮನಗರ ಪ್ರಾದೇಶಿಕ ಅರಣ್ಯ

    ನಟ ದರ್ಶನ್​ ಎಚ್ಚರಿಕೆ ವಹಿಸದಿದ್ರೆ ಕಾದಿದೆ ಅಪಾಯ! ಸುತ್ತಲೂ ನಡೆಯುತ್ತಿರುವ ಘಟನೆಗಳೇ ಇದರ ಸುಳಿವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts