More

    ಬೇಸಿಗೆ ಮುನ್ನವೇ ನೀರಿನ ದಾಹ; ಹೊಸಪೇಟೆಯಲ್ಲಿ ಸಮರ್ಪಕ ಪೂರೈಕೆಯಾಗದ 24/7 ಯೋಜನೆ

    ವೀರೇಂದ್ರ ನಾಗಲದಿನ್ನಿ ಹೊಸಪೇಟೆ
    ತಾಲೂಕಿನಲ್ಲಿ ತುಂಗಭದ್ರಾ ಜಲಾಯಶವಿದ್ದರೂ ಹಲವು ಗ್ರಾಮಗಳಿಗೆ ಇನ್ನೂ ನದಿ ನೀರಿನ ಸಂಪರ್ಕವಿಲ್ಲ. ಭಾಗಶ ಗ್ರಾಮಗಳು ನದಿಯ ವಿವಿಧ ಕಾಲುವೆಗಳನ್ನು ಅವಲಂಬಿಸಿದ್ದರೆ ಉಳಿದ ಹಳ್ಳಿಗಳಿಗೆ ಕೊಳವೆ ಬಾವಿಯೇ ಆಸರೆಯಾಗಿವೆ. ಇನ್ನು ಬೇಸಿಗೆಯಲ್ಲಿ ಕಾಲುವೆಯಲ್ಲಿ ನೀರು ಸ್ಥಗಿತಗೊಳ್ಳುವುದು ಮತ್ತು ಬೋರ್‌ವೆಲ್‌ಗಳ ಬತ್ತುವಿಕೆಯಿಂದ ಹಲವೆಡೆ ಕುಡಿವ ನೀರಿನ ಸಮಸ್ಯೆ ಸಾಮಾನ್ಯವಾಗಿದೆ.

    ತಾಲೂಕಿನಲ್ಲಿ ಹೊಸಪೇಟೆ ನಗರಸಭೆ, ಕಮಲಾಪುರ ಪುರಸಭೆ ಹಾಗೂ ಮರಿಯಮ್ಮನಹಳ್ಳಿ ಪಂಪಂ, ಅಲ್ಲದೆ 14 ಗ್ರಾಪಂ ವ್ಯಾಪ್ತಿಯಲ್ಲಿ 52 ಜನವಸತಿ ಪ್ರದೇಶಗಳಿವೆ. ಈ ಪೈಕಿ ಗ್ರಾಮೀಣಕ್ಕಿಂತ ನಗರ-ಪಟ್ಟಣ ಪ್ರದೇಶದಲ್ಲಿ ನೀರಿನ ಸಮಸ್ಯೆ ತುಸು ಹೆಚ್ಚೇ ಇದೆ. ಅದರಲ್ಲೂ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲೇ ನೀರಿನ ಸಮಸ್ಯೆ ಕೋಪ ತರಿಸುವಷ್ಟಿದೆ.

    ಬೇಸಿಗೆ ಮುನ್ನವೇ ನೀರಿನ ದಾಹ; ಹೊಸಪೇಟೆಯಲ್ಲಿ ಸಮರ್ಪಕ ಪೂರೈಕೆಯಾಗದ 24/7 ಯೋಜನೆ
    ಹೊಸಪೇಟೆಯ ಮೇನ್ ಬಜಾರ್‌ನಲ್ಲಿ ಬೆಳಗಿನ ಜಾವದಲ್ಲೇ ವ್ಯಕ್ತಿಯೊಬ್ಬರು ಕುಡಿಯುವ ನೀರು ಹೊರುತ್ತಿರುವುದು.

    24/7 ಕುಡಿವ ನೀರಿನ ಯೋಜನೆಯಲ್ಲಿ ಹತ್ತಾರು ಲೋಪಗಳಿಂದಾಗಿ ನಗರದ ಹಲವೆಡೆ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಕೆಲ ಬಡಾವಣೆಗಳಲ್ಲಿ ಕಲುಷಿತ ನೀರು ಪೂರೈಕೆಯಾಗಿ, ಅನಾರೋಗ್ಯದಿಂದ ಜನರು ಆಸ್ಪತ್ರೆ ಸೇರಿದ್ದರೆ, ಒಬ್ಬ ಮಹಿಳೆ ಬಲಿಯಾದ ಘಟನೆ ನಗರಸಭೆಗೆ ಅಂಟಿದ ಕಳಂಕವೇ ಸರಿ. ಇದಾಗಿ ತಿಂಗಳುಗಳು ಕಳೆದರೂ ನಗರದಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹಾರ ಕಂಡಿಲ್ಲ. ಒಂಬತ್ತನೇ ವಾರ್ಡ್‌ನ ಸಿದ್ಧಲಿಂಗಪ್ಪ ಚೌಕಿಯಲ್ಲಿ ಇಂದಿಗೂ ಕಲುಷಿತ ನೀರು ಪೂರೈಕೆಯಾಗುತ್ತಿದ್ದರೆ, 26ನೇ ವಾರ್ಡ್ ಚಪ್ಪರದಹಳ್ಳಿಯಲ್ಲಿ ಎರಡು ತಿಂಗಳಿಂದ ಸರಬರಾಜು ಸ್ಥಗಿಗೊಂಡಿದೆ.

    ಪೈಪ್‌ಲೈನ್ ಸರಿಪಡಿಸಿದರೂ ನೀರು ಬಂದಿಲ್ಲ. ಇದು 24/7 ನಿರಂತರ ಕುಡಿವ ನೀರು ಯೋಜನೆ ವೈಫಲ್ಯಕ್ಕೆ ಸಾಕ್ಷಿ. 28ನೇ ವಾರ್ಡ್‌ನಲ್ಲಿ ಪೈಪ್‌ಲೈನ್ ಜೋಡಣೆ ಸಮಸ್ಯೆಯಿಂದಾಗಿ ಚರಂಡಿ ನೀರು ಪೂರೈಕೆಯಾಗುತ್ತಿದೆ. ನಗರಸಭೆ ಅಧ್ಯಕ್ಷೆ ಸುಂಕಮ್ಮ ಪ್ರತಿನಿಧಿಸುವ ನಾಲ್ಕನೇ ವಾರ್ಡ್‌ನಲ್ಲಿ ಗಾಂಧಿ ನಗರದ ಅರ್ಧ ಓಣಿಗೆ ನೀರು ಬಂದರೆ, ಇನ್ನುಳಿದ ಮನೆಗಳಿಗೆ ಬರುತ್ತಿಲ್ಲ. ಇನ್ನುಳಿದ ವಾರ್ಡ್‌ಗಳಲ್ಲಿ ಒಂದಿಲ್ಲೊಂದು ಕಾರಣಕ್ಕೆ ಪೂರೈಕೆ ಸಮರ್ಪಕವಾಗಿಲ್ಲ. ಈಗಾಲೇ ಬೇಸಿಗೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಏನೆಂಬುದು ಸ್ಥಳೀಯರ ಪ್ರಶ್ನೆ.

    ಬೇಸಿಗೆ ಮುನ್ನವೇ ನೀರಿನ ದಾಹ; ಹೊಸಪೇಟೆಯಲ್ಲಿ ಸಮರ್ಪಕ ಪೂರೈಕೆಯಾಗದ 24/7 ಯೋಜನೆ
    ಹೊಸಪೇಟೆಯ ನಾಲ್ಕನೇ ವಾರ್ಡ್‌ನ ಗಾಂಧಿ ನಗರದಲ್ಲಿ ಮಹಿಳೆಯರು ಖಾಲಿ ಕೊಡಗಳ ಪ್ರದರ್ಶಿಸಿರುವುದು.

    ಎರಡು ತಿಂಗಳು ಹಳ್ಳಿಗಳಲ್ಲಿ ಸಮಸ್ಯೆ
    ತಾಲೂಕಿನಲ್ಲಿ ಹಾದು ಹೋಗುವ ಎಚ್‌ಎಲ್‌ಸಿ, ಎಲ್‌ಎಲ್‌ಸಿ, ರಾಯ ಮತ್ತು ಬಸವ ಕಾಲುವೆಗಳು ಕಮಲಾಪುರ, ಮರಿಯಮ್ಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಜನರ ದಾಹ ತಣಿಸುತ್ತಿವೆ. ಈ ಪೈಕಿ ಮಲಪನಗುಡಿ ಬಳಿ ನೀರೆತ್ತಿ ಅದನ್ನು ಮಲಪನಗುಡಿ, ನಾಗೇನಹಳ್ಳಿ, ಕಾಳಗಟ್ಟ, ಬಸವನದುರ್ಗ, ಹಂಪಿ ಪವರ್ ಹೌಸ್‌ನಿಂದ ಕಮಲಾಪುರ, ಹಂಪಿ, ಕಡ್ಡಿರಾಂಪುರ ಮತ್ತು ಕೆನಾಲ್‌ನಿಂದ ನೇರವಾಗಿ ಬುಕ್ಕಸಾಗರಕ್ಕೆ ನೀರು ಪಡೆಯಲಾಗುತ್ತಿದೆ. ಪ್ರತಿವರ್ಷ ಏಪ್ರಿಲ್‌ನಿಂದ ಎರಡು ತಿಂಗಳು ಕಾಲುವೆಗೆ ನೀರು ಸ್ಥಗಿತಗೊಳಿಸುವುದರಿಂದ ಆಯಾ ಗ್ರಾಮಗಳಲ್ಲಿ ಸಮಸ್ಯೆಯಾಗುತ್ತಿದೆ. ಟ್ಯಾಂಕರ್‌ಗಳ ಮೂಲಕ ನೀರು ಒದಗಿಸಿದ ಉದಾಹರಣೆಗಳಿವೆ.

    15 ನಿಮಿಷ ಮಾತ್ರ ಪೂರೈಕೆ !
    ಕಮಲಾಪುರದಿಂದ ಭುವನಹಳ್ಳಿವರೆಗೆ ಜಾರಿಗೊಳಿಸಿರುವ ಬಹುಗ್ರಾಮ ಕುಡಿವ ನೀರಿನ ಯೋಜನೆ ಇದ್ದೂ ಇಲ್ಲದಂತಾಗಿದೆ. ಈ ಭಾಗದ ಪಿ.ಕೆ.ಹಳ್ಳಿ, ಗುಂಡ್ಲ ವದ್ದಿಗೇರಿ, ಬೈಲುವದ್ದಿಗೇರಿ, ಕಾಕುಬಾಳು, ಧರ್ಮಸಾಗರ ಮತ್ತು ಕೊಡಗಿನಹಾಳಕ್ಕೆ ಯೋಜನೆಯಡಿ ನೀರು ಪೂರೈಸಲಾಗುತ್ತಿದೆ. ಕಮಲಾಪುರ ಬಳಿಯ ಜಲ ಸಂಗ್ರಹಾಗಾರದ ಸಾಮರ್ಥ್ಯ ಕಡಿಮೆ ಇರುವುದರಿಂದ ಎಲ್ಲ ಗ್ರಾಮಗಳಿಗೆ ನೀರು ಸಮರ್ಪಕ ತಲುಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತಿ ಗ್ರಾಮಕ್ಕೆ 10-15 ನಿಮಿಷ ಮಾತ್ರ ನೀರು ಹರಿಸಲಾಗುತ್ತಿದೆ. ಪ್ರತಿ ಮನೆಗೆ ನಾಲ್ಕೈದು ಕೊಡ ಸಿಕ್ಕರೆ ಅದೇ ಪುಣ್ಯ. ಇನ್ನುಳಿದಂತೆ ಬೋರ್‌ವೆಲ್ ನೀರು ಒದಗಿಸಿದರೂ ಬೇಸಿಗೆಯಲ್ಲಿ ಕೊಳವೆ ಬಾವಿಗಳು ಬತ್ತುವುದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ನದಿ ಮೂಲದಿಂದ ನೀರಿನ ಸಂಪರ್ಕ ಕಲ್ಪಿಸಬೇಕು ಎನ್ನುತ್ತಾರೆ ಬೈಲುವದ್ದಿಗೇರಿ ಗ್ರಾಪಂ ಸದಸ್ಯ ದಿನೇಶ್.

    ಬೇಸಿಗೆ ಮುನ್ನವೇ ನೀರಿನ ದಾಹ; ಹೊಸಪೇಟೆಯಲ್ಲಿ ಸಮರ್ಪಕ ಪೂರೈಕೆಯಾಗದ 24/7 ಯೋಜನೆ
    ಹೊಸಪೇಟೆಯ ಒಂಬತ್ತನೇ ವಾರ್ಡ್ ಸಿದ್ಧಲಿಂಗಪ್ಪ ಚೌಕಿ ಪ್ರದೇಶದಲ್ಲಿ ಕಲುಷಿತ ನೀರನ್ನು ಮಹಿಳೆಯೊಬ್ಬರು ತೋರಿಸುತ್ತಿರುವುದು.

    ಬಳಕೆಯಾಗುತ್ತಿಲ್ಲ ಆರ್‌ಒ ಪ್ಲಾೃಂಟ್‌ಗಳು
    ಸೀತಾರಾಮ ತಾಂಡಾ ಗ್ರಾಪಂ ವ್ಯಾಪ್ತಿಯ ಸೀತಾರಾಮ ತಂಡ, ನೆಲ್ಲಾಪುರ, ಚಿನ್ನಾಪುರ ಗ್ರಾಮಗಳು ಬೋರ್‌ವೆಲ್‌ಗಳನ್ನೇ ಅವಲಂಬಿಸಿದೆ. ಸೀತಾರಾಮ ತಾಂಡದಲ್ಲಿ ಶುದ್ಧ ಕುಡಿವ ನೀರಿನ ಘಟಕವಿದ್ದರೂ ಶೇ.10 ಜನ ಮಾತ್ರ ಬಳಕೆ ಮಾಡುತ್ತಿದ್ದಾರೆ. ಉಳಿದಂತೆ ತಾಲೂಕಿನ ನಗರ-ಗ್ರಾಮೀಣ ಪ್ರದೇಶ ಸೇರಿ 71 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಿದ್ದರೂ ಅವುಗಳಲ್ಲಿ ಕೆಲವು ಕೆಟ್ಟು ನಿಂತಿದ್ದರೆ, ಇನ್ನೂ ಕೆಲವು ಆಗಾಗ್ಗೆ ಕೈಕೊಡುತ್ತಿವೆ.

    ಕಡ್ಡಿರಾಂಪುರ ತಾಂಡಕ್ಕೆ ಹಂಪಿ ಆಸರೆ
    ಮಲಪನಗುಡಿ ಗ್ರಾಪಂ ವ್ಯಾಪ್ತಿಯ ಕಡ್ಡಿರಾಂಪುರ ತಾಂಡಾದಲ್ಲಿ 400ಕ್ಕೂ ಹೆಚ್ಚು ಕುಟುಂಬಗಳಿದ್ದು, ಸಮರ್ಪಕ ಕುಡಿವ ನೀರಿನ ವ್ಯವಸ್ಥೆಯಿಲ್ಲ. ತಾಂಡಾದಲ್ಲಿ ಎರಡು ಕೊಳವೆ ಬಾವಿಗಳಿದ್ದರೂ ನಿರೀಕ್ಷಿತ ಮಟ್ಟದಲ್ಲಿ ನೀರು ಬರುತ್ತಿಲ್ಲ. ಮತ್ತೊಂದು ಬೋರ್‌ವೆಲ್ ಬತ್ತಿಹೋಗಿದೆ. ಈ ನಡುವೆ ತಾಂಡಾಕ್ಕೆ ನೀರೊದಗಿಸುವ ದೃಷ್ಟಿಯಿಂದ ನಿರ್ಮಿಸಿರುವ ಓವರ್ ಹೆಡ್ ಟ್ಯಾಂಕ್‌ಗೆ ವರ್ಷಗಳು ಕಳೆದರೂ ಪೈಪ್‌ಲೈನ್ ಸಂಪರ್ಕ ಕಲ್ಪಿಸಿಲ್ಲ. ತಾತ್ಕಾಲಿಕವಾಗಿ ಸ್ಥಳೀಯರು ಪಕ್ಕದ ಹಂಪಿ ಗ್ರಾಪಂ ಮೊರೆ ಹೋಗಿದ್ದಾರೆ. ಹೊಸದಾಗಿ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ಉಪಯೋಗವಿಲ್ಲದಂತಾಗಿದೆ.

    ಬೇಸಿಗೆಯಲ್ಲಿ ಜನರಿಗೆ ಕುಡಿವ ನೀರಿನ ಸಮಸ್ಯೆ ಆಗದಂತೆ ಅಗತ್ಯ ಸಿದ್ಧತೆ ಮಾಡಲಾಗುತ್ತಿದೆ. 24/7 ಕೊಳವೆ ಜಾಲ ಸರಿಪಡಿಸುವುದು, ಬೋರ್‌ವೆಲ್‌ಗಳ ರಿಪೇರಿ ಕೈಗೆತ್ತಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಎರಡು ಒಎಚ್‌ಟಿ ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕೂ ಮೀರಿ ಸಮಸ್ಯೆ ಉಂಟಾದರೆ ಬಾಡಿಗೆ ಟ್ಯಾಂಕರ್‌ಗಳ ಮೂಲಕ ಒದಗಿಸಲಾಗುವುದು. ನೀರು ಪೂರೈಕೆಗೆ ಹಣಕಾಸಿನ ತೊಂದರೆ ಇಲ್ಲ.
    ಮನೋಹರ್, ನಗರಸಭೆ ಪೌರಾಯುಕ್ತ, ಹೊಸಪೇಟೆ

    ಬೆಳಗಾದರೆ ಸಾಕು, ಪ್ರತಿಯೊಂದಕ್ಕೂ ನೀರು ಬೇಕೇಬೇಕು. ಆದರೆ, ಹೊಸಪೇಟೆಯ ಜಾಲಾರ ಓಣಿಯ ಹಲವು ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ಮೇನ್ ಬಜಾರ್‌ನಿಂದ ನೀರು ಹೊರುವುದು ಅನಿವಾರ್ಯವಾಗಿದೆ. ಬೆಳಗಿನ ಜಾವ ನೀರು ಬಿಡುವುದರಿಂದ ತಡರಾತ್ರಿಯಿಂದ ಕಾದು ಕೂಡುವಂತಾಗಿದೆ. ಸಮಸ್ಯೆ ಬಗೆಹರಿದರೆ ಸಾಕು ಎನ್ನುವಂತಾಗಿದೆ.
    ಗೌರಮ್ಮ, ಜಾಲಾರ ಓಣಿ ನಿವಾಸಿ, ಹೊಸಪೇಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts