More

    ಬೇಸಿಗೆ ಬೆಳೆಗೆ ನೀರು ಅನುಮಾನ ? – ಅನ್ನದಾತರ ಚಿತ್ತ ಐಸಿಸಿ ಮೀಟಿಂಗ್‌ನತ್ತ

    ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ಇತಿಹಾಸದಲ್ಲೆ ಮೊದಲಸಲ ಮುಂಗಾರು ಬೆಳೆಗೆ ವಾರಬಂದಿ ಪದ್ಧತಿ ಹಾಕಿದ್ದ ಐಸಿಸಿ ಸಭೆ, ಎರಡನೇ ಬೆಳೆಗೆ ಕೈ ಎತ್ತುವ ಸಾಧ್ಯತೆಯಿದೆ. ಆಲಮಟ್ಟಿಯಲ್ಲಿ ನ.7ರಂದು ನಡೆಯಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆಯತ್ತ (ಐಸಿಸಿ) ಜಿಲ್ಲೆಯ ರೈತರ ಚಿತ್ತ ನೆಟ್ಟಿದ್ದು, ಎಷ್ಟುದಿನ ನೀರು ಬರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

    ಇದನ್ನೂ ಓದಿ: ಬತ್ತಿದ್ದ ಬೋರ್‌ವೆಲ್‌ಗಳಿಗೆ ಮರುಜೀವ : ಬೇಸಿಗೆ ಬೆಳೆಗೆ ನೀರಿನ ಚಿಂತೆಯಿಲ್ಲ

    ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದ ನೀರಿನ ಸಂಗ್ರಹ ಅಧಿಕಾರಿಗಳು ಹೇಳುವ ಪ್ರಕಾರ ಬೇಸಿಗೆ ಬೆಳೆಗೆ ನೀರು ಬಿಡುವುದು ಅನುಮಾನ. ರಾಜ್ಯದಲ್ಲಿ ಹಲವು ಪ್ರದೇಶದಲ್ಲಿ ಬರ ಆವರಿಸಿರುವ ಕಾರಣ ನೀರಿನ ಬೇಡಿಕೆ ಹೆಚ್ಚಾಗಿದೆ. ಎರಡನೇ ಬೆಳೆಗೆ ಬಿಡುವ ನೀರು ಕುಡಿವ ನೀರು ಸೇರಿ ವಿವಿಧ ಉದ್ದೇಶಕ್ಕೆ ಕಾಯ್ದಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

    ನಾರಾಯಣಪುರ ಬಲ ಹಾಗೂ ಎಡದಂಡೆ ನಾಲೆಗೆ ಜುಲೈ ಕೊನೇ ವಾರದಲ್ಲಿ ನೀರು ಹರಿಸಲಾಗಿತ್ತು. ಮುಂಗಾರು ಬೆಳೆಗೆ 14 ದಿನ ಚಾಲು 10 ದಿನ ಬಂದ್ ವಾರಬಂದಿ ಪದ್ಧತಿ ಅನುಸರಿಸಲಾಗಿತ್ತು.

    ರೈತರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಎಚ್ಚೆತ್ತ ಸರ್ಕಾರ, ವಾರಬಂದಿಯನ್ನು 10 ರಿಂದ 8 ದಿನಕ್ಕೆ ಇಳಿಸಿತ್ತು. ಅದರಂತೆ ಡಿ.4ರವರೆಗೆ ನೀರು ಹರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ರೈತರು ನಿರಂತರ ನೀರು ಹರಿಸಬೇಡಿ. 8 ದಿನ ವಾರಬಂದಿ ಹಾಕಿ 2024ರ ಮಾ.10ವರೆಗೆ ನೀರು ಹರಿಸಬೇಕು ಎನ್ನುತ್ತಿದ್ದಾರೆ.

    ಬಹುತೇಕ ರೈತರು ಹತ್ತಿ, ಮೆಣಸಿನಕಾಯಿ, ಭತ್ತ ಸೇರಿ ವಿವಿಧ ಬೆಳೆಗಳನ್ನು ಹಾಕಿಕೊಂಡಿದ್ದಾರೆ. ಶೇ.30ಕ್ಕೂ ಹೆಚ್ಚು ಪ್ರದೇಶ ಮೆಣಸಿನಕಾಯಿ ಆವರಿಸಿದೆ. ಸದ್ಯ ಫಸಲು ಹಿಡಿಯವ ಹಂತದಲ್ಲಿದೆ.

    ಹತ್ತಿ ಕಾಯಿಹಿಡಿದು ತೊಳೆ ಬಿಟ್ಟಿದ್ದು, ಈ ಬೆಳೆಗೆ ನೀರಿನ ಕೊರತೆಯಾಗಲ್ಲ. ಆದರೆ, ಮೆಣಸಿನಕಾಯಿಗೆ 8-10 ದಿನಕ್ಕೊಮ್ಮೆ ನೀರು ಬೇಕೇಬೇಕು. ಕನಿಷ್ಠ ಮಾ.10ರವರೆಗೆ ನೀರು ಹರಿಸಿದರೆ ಮಾತ್ರ ಬೆಳೆಗೆ ಕೈಸೇರಲಿದೆ. ಆದರೆ, ಅಧಿಕಾರಿಗಳು ನೀಡುವ ಲೆಕ್ಕಾಚಾರವೇ ಬೇರೆಯಿದೆ.

    ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪುರ ಮೊದಲ ಐಸಿಸಿ ಮೀಟಿಂಗ್ ತೀರ್ಮಾನ ಗಾಳಿಗೆತೂರಿ ಡಿ.10ರವರೆಗೆ ನೀರು ಹರಿಸಲು ಸೂಚನೆ ನೀಡಿದ್ದಾರೆ. ಇದು ರೈತರಿಗೆ ಶಾಪವಾಗಿದ್ದು ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯಲ್ಲಿ ನೀರು ಕೈಕೊಡುವ ಆತಂಕ ಕಾಡುತ್ತಿದೆ. ರೈತರ ಮನವಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೊಪ್ಪು ಹಾಕುತ್ತಿಲ್ಲ.

    ಲಭ್ಯತೆ ಬಗ್ಗೆ ಗೊಂದಲ

    ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದ ನೀರಿನ ಲಭ್ಯತೆ ನೋಡಿ ಎರಡನೇ ಬೆಳೆಗೆ ನೀರು ಹರಿಲಾಗುತ್ತದೆ. ಆದರೆ, ಎರಡೂ ಜಲಾಶಯದಲ್ಲಿ ಎಷ್ಟು ನೀರಿದೆ ಎನ್ನುವುದನ್ನು ಅಧಿಕಾರಿಗಳು ಗುಟ್ಟು ಬಿಟ್ಟುಕೊಡುತ್ತಿಲ್ಲ.

    ರೈತರ ಪ್ರಕಾರ ಆಲಮಟ್ಟಿಯಲ್ಲಿ 90 ಟಿಎಂಸಿ ಅಡಿ, ನಾರಾಯಣಪುರದಲ್ಲಿ ಸುಮಾರು 22 ಟಿಎಂಸಿ ಅಡಿ ಸೇರಿ 110 ಟಿಎಂಸಿ ನೀರು ಲಭ್ಯತೆಯಿದೆ. 8 ದಿನ ವಾರಬಂದಿ ಪ್ರಕಾರ ಮಾ.10ವರೆಗೆ ನಾಲೆಗೆ ನೀರು ಹರಿಸಬಹುದು.

    100 ಟಿಎಂಸಿಯಲ್ಲಿ 40 ಟಿಎಂಸಿ ಕುಡಿವ ನೀರು ಸೇರಿ ವಿವಿಧ ಉದ್ದೇಶಕ್ಕೆ ಕಾಯ್ದಿರಿಸಿದರೂ ಉಳಿವ 60 ಟಿಎಂಸಿ ಅಡಿ ನೀರನ್ನು ವಾರಬಂದಿಯಂತೆ ಮಾ.10ವರೆಗೆ ಹರಿಸಬಹುದು ಎನ್ನುವುದು ರೈತರ ಲೆಕ್ಕಾಚಾರವಾಗಿದೆ.

    ಆದರೆ, ಅಧಿಕಾರಿಗಳು ಹೇಳುವುದೇ ಬೇರೆ. ಎರಡೂ ಜಲಾಶಯದಲ್ಲಿ ಅರ್ಧದಷ್ಟು ಮಾತ್ರ ನೀರಿದ್ದು, ಡಿ.10ವರೆಗೆ ನಿತ್ಯ 1ಟಿಎಂಸಿ ಅಡಿಯಂತೆ ನಾಲೆಗೆ ನೀರು ಹರಿಸಿದರೆ ಡಿ.10ರ ನಂತರ 4-5 ಟಿಎಂಸಿ ಅಡಿ (ಕುಡಿವ ನೀರಿಗೆ 40 ಟಿಎಂಸಿ ಅಡಿಬಿಟ್ಟು) ಉಳಿಯಲಿದೆ. ಈ ನೀರು ನಾಲೆಗೆ ಬಿಟ್ಟರೂ ವಿಪರೀತ ಬಿಸಿಲಿನ ಪರಿಣಾಮ ರೈತರ ಜಮೀನಿಗೆ ಮುಟ್ಟುವುದು ಅನುಮಾನ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ನೀರಾವರಿ ಸಲಹಾ ಸಮಿತಿ ಸಭೆ ಅರ್ಥವಿಲ್ಲದ್ದು. ಚಹಾ, ಬಿಸ್ಟೀಟ್‌ಗೆ ಸೀಮಿತವಾಗಿದೆ. ಅಧಿಕಾರಿಗಳು ಹಾಗೂ 32 ಶಾಸಕರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದು ನೆಪಮಾತ್ರಕ್ಕೆ ಸಭೆ ಕರೆದಿದ್ದಾರೆ. ಸಭೆಗೆ ರೈತರಿಗೆ ಆಹ್ವಾನ ನೀಡಿಲ್ಲ. ನಿರಂತರವಾಗಿ ನೀರು ಹರಿಸಿದರೆ ನೀರು ವ್ಯರ್ಥವಾಗಲಿದ್ದು 8 ದಿನ ವಾರಬಂದಿ ಹಾಕಿ ಮಾ.10ವರೆಗೆ ನೀರು ಹರಿಸಲು ಅವಕಾಶವಿದೆ. ಆದರೆ, ಅಧಿಕಾರಿಗಳು ನೀರಿನ ಲಭ್ಯತೆ ಮುಚ್ಚಿಟ್ಟು ತಪ್ಪು ವರದಿ ನೀಡುತ್ತಿದ್ದಾರೆ.
    | ಪ್ರಭಾಕರ್ ಪಾಟೀಲ್ ಇಂಗಳದಾಳ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ.

    ಆಲಮಟ್ಟಿಯಲ್ಲಿ ನ.7ರಂದು ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು ಎರಡನೇ ಬೆಳೆಗೆ ನೀರು ಬಿಡುವ ಬಗ್ಗೆ ಅಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಡಿ.4ರವರೆಗೆ ನೀರು ಹರಿಸಲು ಆದೇಶವಿದೆ. ಬರಗಾಲ ಇರುವುದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹವಿಲ್ಲ. ಎರಡೂ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಿದೆ.
    | ಪ್ರೇಮಸಿಂಗ್, ಚೀಫ್ ಇಂಜಿನಿಯರ್, ಎನ್‌ಆರ್‌ಬಿಸಿ ಬಿ.ಗುಡಿ ವಿಭಾಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts