More

    ಬತ್ತಿದ್ದ ಬೋರ್‌ವೆಲ್‌ಗಳಿಗೆ ಮರುಜೀವ : ಬೇಸಿಗೆ ಬೆಳೆಗೆ ನೀರಿನ ಚಿಂತೆಯಿಲ್ಲ

    ಚಿಕ್ಕಬಳ್ಳಾಪುರ: ಬರಪೀಡಿತ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಕುಸಿತದಿಂದ ಬತ್ತಿದ್ದ ಕೊಳವೆಬಾವಿಗಳಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ಜಲಧಾರೆ ಉಕ್ಕುತ್ತಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರ, ಬೇಸಿಗೆ ಬೆಳೆಗೆ ನೀರಿನ ಚಿಂತೆಯೂ ದೂರವಾಗಿದೆ.

    ಈ ಹಿಂದೆ ಇದ್ದಕ್ಕಿದ್ದಂತೆ ಬೋರ್‌ವೆಲ್ ಬತ್ತಿದ್ದವು, ನಾಲ್ಕೈದು ಕಡೆ ಪಾಯಿಂಟ್ ನೋಡಿದರೂ ನೀರು ಸಿಗುತ್ತಿಲ್ಲ ಎನ್ನುವ ಅಳಲು ಮಾರ್ದನಿಸುತ್ತಿತ್ತು, ಆದರೆ ಬಯಲುಸೀಮೆ ಜಿಲ್ಲೆ ಕಂಡು ಕೇಳರಿಯದಷ್ಟು ವರುಣ ಆರ್ಭಟಿಸಿದ್ದರಿಂದ ಕೆರೆ-ಕಟ್ಟೆಗಳು ಭರ್ತಿಯಾಗಿರುವುದರ ಜತೆಗೆ ಸ್ವರೂಪವನ್ನೇ ಕಳೆದುಕೊಂಡಿದ್ದ ಹಳ್ಳ-ನದಿಗಳು ಮೈದುಂಬಿ ಹರಿದಿದ್ದು ಅದರಂತೆ ಕೊಳವೆ ಬಾವಿಗಳಲ್ಲಿಯೂ ನೀರು ಉಕ್ಕುತ್ತಿದೆ.

    721 ಮಿ.ಮೀ ವಾಡಿಕೆ ಮಳೆ ಪೈಕಿ ಪ್ರಸಕ್ತ ಸಾಲಿನಲ್ಲಿ 1,233 ಮಿ.ಮೀ ಬಿದ್ದಿದ್ದು ಕಳೆದ 40 ವರ್ಷಗಳಲ್ಲಿಯೇ ಈ ಬಾರಿಯ ವರ್ಷಧಾರೆ ದಾಖಲೆಯಾಗಿದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗ ವ್ಯಾಪ್ತಿಗೆ ಒಳಪಡುವ 169 ಕೆರೆಗಳ ಪೈಕಿ 82 ಕೆರೆಗಳು ಪೂರ್ಣ ಪ್ರಮಾಣದಲ್ಲಿ, 24 ಕೆರೆಗಳು ಶೇ.51 ರಿಂದ 99, 33 ಕೆರೆಗಳು ಶೇ.31 ರಿಂದ 50, 29 ಕೆರೆಗಳು ಶೇ.30ರಷ್ಟು ತುಂಬಿವೆ. ಮತ್ತೊಂದೆಡೆ ನಗರ, ಪಟ್ಟಣ ಪ್ರದೇಶಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿರುವ ಜಲಾಶಯಗಳು, ಕೆರೆಗಳು ಸಂಪೂರ್ಣವಾಗಿ ತುಂಬಿದ್ದು, ಇನ್ನೂ ಕೋಡಿಯಲ್ಲಿ ಜಲನರ್ತನ ಮುಂದುವರಿಯುತ್ತಲೇ ಇದೆ. ರಾಜಕಾಲುವೆ, ಚೆಕ್ ಡ್ಯಾಂಗಳೂ ಭರ್ತಿಯಾಗಿವೆ.

    ಮುಂದಿನ ಬೆಳೆಗೆ ಅನುಕೂಲಕರ: ಈ ಬಾರಿ ಸುರಿದ ಧಾರಾಕಾರ ಮಳೆಗೆ ನಾನಾ ಬೆಳೆಗಳು ಹಾಳಾಗಿರಬಹುದು. ಆದರೆ, ಕೈ ಕೊಟ್ಟಿದ್ದ ಕೊಳವೆಬಾವಿಯಲ್ಲಿ ಜಲ ಮರುಪೂರಣ, ಹೆಚ್ಚಿನ ನೀರಿನ ಲಭ್ಯತೆಯು ಮುಂದಿನ ದಿನಗಳಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲು ಅನುಕೂಲಕರವಾಗಿದೆ ಎಂಬುದು ರೈತಾಪಿ ವರ್ಗಕ್ಕೆ ಕೊಂಚ ಸಮಾಧಾನ ನೀಡಿದೆ.

    ನೀರು ಪೂರೈಕೆ ಸಮಸ್ಯೆಗೆ ಪರಿಹಾರ: ಅಂತರ್ಜಲಮಟ್ಟ ಹೆಚ್ಚಳದಿಂದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದ್ದು, ಬೇಸಿಗೆಯಲ್ಲಿ ನೀರು ಪೂರೈಕೆಗೆ ಹೆಣಗಾಡುತ್ತಿದ್ದ ಸ್ಥಳೀಯ ಆಡಳಿತ ಸಂಸ್ಥೆಗಳು ನಿರಾಳವಾಗಿವೆ. ಗ್ರಾಮೀಣ ಭಾಗದಲ್ಲಿ ಬೋರ್‌ವೆಲ್ ಸಂಪರ್ಕದ ನೀರಿನ ಶುದ್ಧೀಕರಣದ 757 ಘಟಕಗಳ ಪೈಕಿ 739 ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೆ ಸದ್ಯಕ್ಕಂತೂ ನೀರಿನ ಅಭಾವದ ಸಮಸ್ಯೆ ಇಲ್ಲ. ನಗರ, ಪಟ್ಟಣ ಪ್ರದೇಶಗಳಲ್ಲೂ ಪ್ರತಿನಿತ್ಯ ಕುಡಿಯುವ ನೀರು ಪೂರೈಕೆಯಾಗುತ್ತಿದೆ.

    ತಗ್ಗಿದ ಸಮಸ್ಯಾತ್ಮಕ ಗ್ರಾಮಗಳು: ಜಿಲ್ಲೆಯಲ್ಲಿ ಬೇಸಿಗೆಯಲ್ಲಷ್ಟೇ ಅಲ್ಲದೆ ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಗಳಿದ್ದವು. ಮಳೆಯಿಂದ ಈ ಸಂಖ್ಯೆ ತಗ್ಗಿದೆ. ಚಿಂತಾಮಣಿ 8, ಶಿಡ್ಲಘಟ್ಟ 9, ಚಿಕ್ಕಬಳ್ಳಾಪುರ 7 ಸೇರಿ ಸಮಸ್ಯಾತ್ಮಕ 24 ಗ್ರಾಮಗಳನ್ನು (ನ.11 ಕ್ಕೆ) ಗುರುತಿಸಿದ್ದು ಟ್ಯಾಂಕರ್ ಮೂಲಕ 3 ಗ್ರಾಮಗಳಿಗೆ ಮತ್ತು 21 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ದಿನಕ್ಕೆ ಚಿಂತಾಮಣಿಯಲ್ಲಿ 6 ಟ್ರಿಪ್ ಮತ್ತು ಶಿಡ್ಲಘಟ್ಟದಲ್ಲಿ 2 ಟ್ರಿಪ್ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ತಿಳಿಸಿದೆ.

    ಬತ್ತಿದ್ದ ಕೊಳವೆ ಬಾವಿಯಿಂದ ನೀರು ಉಕ್ಕುತ್ತಿದೆ. ಅಂತರ್ಜಲಮಟ್ಟ ಹೆಚ್ಚಳದ ಲೆಕ್ಕಾಚಾರದಲ್ಲಿ ಮುಂದಿನ ಮೂರ್ನಾಲ್ಕು ಬೆಳೆಗಳಿಗೆ ನೀರಿನ ಕೊರತೆ ಕಂಡು ಬರುವುದಿಲ್ಲ.
    ಯಲುವಹಳ್ಳಿ ಮಂಜುನಾಥ್, ರೈತ

    ತೋಟದಲ್ಲಿ ಕೊರೆಸಿದ ಕೊಳವೆಬಾವಿ ವೈಲ್ಯದಿಂದ ಪಕ್ಕದ ರೈತರ ಬೋರ್‌ವೆಲ್ ನೆಚ್ಚಿಕೊಳ್ಳಬೇಕಾಗಿತ್ತು. ಹಿಂದೆ ಹಲವು ಬಾರಿ ಖಾಸಗಿ ಟ್ಯಾಂಕರ್ ನೀರು ಬಳಸಿ ಬೆಳೆಗಳನ್ನು ಉಳಿಸಿಕೊಂಡಿದ್ದೆ. ಇದೀಗ ವಿಫಲವಾಗಿದ್ದ ಕೊಳವೆಬಾವಿಯಲ್ಲಿ ಜಲ ಮರುಪೂರಣದಿಂದ ಇತರ ಅವಲಂಬನೆ ತಪ್ಪಿದೆ.
    ದಿಬ್ಬೂರು ವೆಂಕಟೇಶ್, ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts