More

    ಸಕ್ಕರೆ ಜಿಲ್ಲೆಯ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ

    ಬೆಳಗಾವಿ: ‘ಈ ಹಿಂದೆ ಹೆಚ್ಚಿನ ವಾಹನ ಸೌಕರ್ಯ ಇರಲಿಲ್ಲ. ಬಹುತೇಕ ಸಲ ನಮ್ಮೂರಿನಿಂದ ಚಕ್ಕಡಿ ಅಥವಾ ಕಾಲ್ನಡಿಗೆ ಮೂಲಕ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆವು. ವಿದ್ಯುತ್ ಇಲ್ಲದ ಕಡೆ ದೀಪ ಹಚ್ಚಿಕೊಂಡೇ ವೇದಿಕೆ ಮೇಲೆ ಕಲೆ ಪ್ರದರ್ಶಿಸುತ್ತಿದ್ದೆವು.

    ಹತ್ತಾರು ಸವಾಲುಗಳ ಮಧ್ಯೆಯೂ ಮುಂದುವರಿಸಿ ಕೊಂಡು ಬಂದ ಕಲೆ ಇಂದು ರಾಜ್ಯೋತ್ಸವ ಪ್ರಶಸ್ತಿ ತಂದುಕೊಟ್ಟಿರುವುದು ಸಂತಸ ತಂದಿದೆ’
    ಹೀಗೆಂದು ‘ವಿಜಯವಾಣಿ’ ಯೊಂದಿಗೆ ತಮ್ಮ ಅನುಭವ ಹಂಚಿಕೊಂಡವರು 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮೂಡಲಗಿ ತಾಲೂಕಿನ ಅರಬಾವಿಯ ಬಯಲಾಟ ಕಲಾವಿದೆ ಕೆಂಪವ್ವ ಹರಿಜನ. 4 ದಶಕಗಳಿಂದ ಬಯಲಾಟದಲ್ಲಿ ನಟನೆ, ಹಾಡುಗಾರಿಕೆ ಮತ್ತು ಕುಣಿತದ ಮೂಲಕ ಪ್ರೇಕ್ಷಕರನ್ನು ಸೆಳೆದಿರುವ ಕೆಂಪವ್ವ ಅವರು, ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಲ್ಲೂ ಪ್ರದರ್ಶನ ನೀಡಿದ್ದಾರೆ. 1 ಸಾವಿರಕ್ಕೂ ಅಧಿಕ ಪ್ರಯೋಗಗಳಲ್ಲಿ ತೆರೆ ಮೇಲೆ ಮಿಂಚಿ, ಗಮನ ಸೆಳೆದಿದ್ದಾರೆ.

    ‘ತಂದೆ ಯಲ್ಲಪ್ಪ ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ, ಸಹಜವಾಗಿ ನಾನೂ ಕಲೆಯತ್ತ ಆಕರ್ಷಿತಳಾದೆ. ಮನೆಯಲ್ಲೂ ಸಾಕಷ್ಟು ತಾಪತ್ರಯಗಳಿದ್ದವು. ಕೆಲವೆಡೆ ಕಾರ್ಯಕ್ರಮಕ್ಕೆ ಹೋದಾಗ, ಉಪವಾಸ ಇರಬೇಕಾಗುತ್ತಿತ್ತು. ಇನ್ನೂ, ಈ ಕಲೆ ಮೂಲಕವೇ ಹಣ ಗಳಿಸುವುದಂತೂ ದೂರದ ಮಾತೇ. ಆದರೂ, ನನ್ನ ಕುಟುಂಬ, ನನ್ನೂರಿನ ಹೆಸರು ಬೆಳಗಬೇಕೆಂದು ಕಲಾ ಚಟುವಟಿಕೆ ಕೈಬಿಡಲಿಲ್ಲ’ ಎಂದು ಮನದಾಳ ಹಂಚಿಕೊಂಡರು.

    ‘ನಾನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯೆಯಾಗಿದ್ದೆ. ಆಗ, 100ಕ್ಕೂ ಅಧಿಕ ಯುವ ಕಲಾವಿದರಿಗೆ ತರಬೇತಿ ನೀಡಿದ್ದೆವು. ಅಂದು ನಮ್ಮ ಗರಡಿಯಲ್ಲಿ ಪಳಗಿದವರು ಇಂದು ಕಲಾ ಪರಂಪರೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕಲಾವಿದ ಸತ್ತರೂ, ಆತನ ಕಲೆ ಸಾಯುವುದಿಲ್ಲ. ಇದನ್ನೇ ನಂಬಿದವಳು ನಾನು. ಇದೇ ಕಾರಣಕ್ಕೆ ನನ್ನ ಮಗಳು ಲಕ್ಷ್ಮೀಗೂ ಬಯಲಾಟ ಕಲಿಸಿದ್ದೇನೆ. ಯುವಪೀಳಿಗೆಯನ್ನು ಕಲೆಯತ್ತ ಆಕರ್ಷಿಸುವ ಕೆಲಸ ಮಾಡುವೆ ಎಂದು ಅಭಿಪ್ರಾಯಪಟ್ಟರು. ಅವರ ಸಾಧನೆಗೆ ಹತ್ತಾರು ಪ್ರಶಸ್ತಿಗಳು ಸಂದಿವೆ.

    ಸಂಗೀತ ಕಲಿಯಲು ಪೂರಕವಾದ ವಾತಾವರಣವಿತ್ತು: ನಮ್ಮ ಮನೆಯಲ್ಲೇ ಸಂಗೀತಕ್ಕೆ ಪೂರಕವಾದ ವಾತಾವರಣವಿತ್ತು. ತಾಯಿ ಹಾಡುತ್ತಿದ್ದ ದೇವರ ನಾಮಗಳಿಂದ ಸಂಗೀತದತ್ತ ಆಸಕ್ತಿ ಚಿಗುರೊಡೆಯಿತು. ಈ ಹವ್ಯಾಸಕ್ಕೆ ನೀರೆರೆದು ಪೋಷಿಸಿದ್ದರಿಂದ ನನ್ನನ್ನು ಎತ್ತರಕ್ಕೆ ಬೆಳೆಸಿತು’ ಎಂದು ಹಿಂದುಸ್ತಾನಿ ಶಾಸೀಯ ಸಂಗೀತದ ಪ್ರಸಿದ್ಧ ಗಾಯಕರಲ್ಲಿ ಒಬ್ಬರಾಗಿರುವ ಬೆಳಗಾವಿಯ ಅನಂತ ತೇರದಾಳ ಸ್ಮರಿಸಿದರು.

    ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಅವರು, ಸಂಗೀತದಲ್ಲಿ ಪಳಗಲು ತಾಳ್ಮೆ, ಪರಿಶ್ರಮ ಅಗತ್ಯ. ಆಗ, ಈ ಕ್ಷೇತ್ರದಲ್ಲಿ ಭವಿಷ್ಯ ಕಾಣಬಹುದು. ಪ್ರೇಕ್ಷಕರ ಹೃದಯ ಗೆಲ್ಲಬಹುದು ಎಂದು ಅಭಿಪ್ರಾಯಪಟ್ಟರು. ಖ್ಯಾತ ಸಂಗೀತಗಾರ ಭೀಮಸೇನ ಜೋಷಿ ಶಿಷ್ಯರಾಗಿದ್ದ ಅವರು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಸಂಗೀತಪ್ರಿಯರ ಮನ ತಣಿಸಿದ್ದಾರೆ. ಭಾರತ ಮಾತ್ರವಲ್ಲದೆ, ದುಬೈನಲ್ಲೂ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸಿ, ನಾಡಿನ ಹೆಸರು ಬೆಳಗಿದ್ದಾರೆ.

    ಏಳನೇ ವಯಸ್ಸಿನಲ್ಲೇ ಸಂಗೀತದತ್ತ ಆಕರ್ಷಿತರಾದ ಅವರು, 6 ದಶಕಗಳ ಕಾಲ ಗಾಯಕರಾಗಿ ಮಿಂಚಿದ್ದಾರೆ. ಅವರ ಸಾಧನೆಗೆ ಪ್ರಶಸ್ತಿ ಮತ್ತೊಂದು ಗರಿ ಮೂಡಿಸಿದೆ.

    | ಇಮಾಮಹುಸೇನ್ ಗೂಡುನವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts