More

    SUCCESS STORY | ಆಘಾತಕ್ಕೆ ಎದೆಗುಂದದೆ ಮುನ್ನುಗ್ಗಿದ ಸಾಧಕಿ; ದೌರ್ಬಲ್ಯವೇ ಬಲ ಇವರಿಗೆ

    | ಎನ್. ಗುರುನಾಗನಂದನ, ಬೆಂಗಳೂರು

    ದೌರ್ಬಲ್ಯವನ್ನು ಶಾಪ ಎಂದು ತಿಳಿಯದೆ ಗುರಿಯ ಕಡೆಗೆ ನಡೆಯುವುದೇ ನಿಜವಾದ ಸಾಧಕನ ಸ್ವಭಾವ. ನನಗೆ ಓಡಾಡಲು ವಾಹನ ಇಲ್ಲ, ಸಮಯ ಸರಿಯಿಲ್ಲ ಎಂಬ ಹಲವಾರು ಕುಂಟುನೆಪ ಹೇಳಿ ಮಾಡಬೇಕಾದ ಕೆಲಸವನ್ನು ಮುಂದೂಡುತ್ತೇವೆ. ಅದರಿಂದ ಸಾಧನೆಯ ಹಾದಿಯಲ್ಲಿ ಮುಂದಕ್ಕೆ ಸಾಗಲು ಸಾಧ್ಯವಾಗುವುದಿಲ್ಲ. ಆದರೆ ಇಲ್ಲೊಬ್ಬರು ತಮ್ಮ ದೌರ್ಬಲ್ಯವನ್ನೇ ಬಲವನ್ನಾಗಿಸಿಕೊಂಡು ಸಾಧನೆ ಮಾಡಿದ್ದಾರೆ.

    ಡಾ.ರಾಜಲಕ್ಷ್ಮೀ ಎಸ್ ಜೆ ವೃತ್ತಿಯಲ್ಲಿ ದಂತ ವೈದ್ಯರು. ಕಾಲೇಜಿನಲ್ಲಿದ್ದಾಗ ರಸ್ತೆ ಅಪಘಾತದಲ್ಲಿ ಬೆನ್ನಿಗೆ ಏಟು ಬೀಳುತ್ತದೆ. ಎರಡು ಶಸ್ತ್ರ ಚಿಕಿತ್ಸೆಗಳು ಕೂಡ ವಿಫಲವಾಗುತ್ತದೆ. ನಡೆದಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಮೊದಲು ವೀಲ್ಚೇರ್ ಅನ್ನು ನಿರಾಕರಿಸಿದರು. ಆದರೀಗ ಅದನ್ನು ಬೆಸ್ಟ್ ಫ್ರೆಂಡ್ ಎಂದು ಭಾವಿಸುತ್ತಾರೆ. ವೈಫಲ್ಯದಿಂದ ಉಂಟಾದ ಆಘಾತದ ಮಧ್ಯದಲ್ಲೂ ಛಲ ಬಿಡದೆ ದಂತ ವಿಜ್ಞಾನದ ಪದವಿಯನ್ನು ರ್ಯಾಂಕ್​ನಲ್ಲಿ ಉತ್ತೀರ್ಣರಾಗುತ್ತಾರೆ. ನಂತರ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕವನ್ನು ಪಡೆಯುತ್ತಾರೆ.

    ಮೊದಲಿನಿಂದಲೂ ಇವರಿಗೆ ಮಾಡೆಲಿಂಗ್​ನಲ್ಲಿ ಆಸಕ್ತಿ. ಅಪಘಾತದ ನಂತರವೂ ತನಗೆ ಇದ್ದ ಆಸಕ್ತಿಯನ್ನು ಕೈ ಬಿಡದೆ 2014ರಲ್ಲಿ ಮಿಸ್ ವೀಲ್ಚೇರ್ ಇಂಡಿಯಾ ಪಟ್ಟವನ್ನು ಮುಡಿಗೇರಿಸಿಕೊಳ್ಳುತ್ತಾರೆ. ಇದಲ್ಲವೆ ನಿಜವಾದ ಸಾಧನೆಯೆಂದರೆ. ಡಾ.ರಾಜಲಕ್ಷ್ಮೀ, ಎಸ್ಜೆ ಫೌಂಡೇಶನ್ ಮೂಲಕ 2015ರ ಮಿಸ್ ವೀಲ್ಚೇರ್ ಇಂಡಿಯಾವನ್ನು ಬೆಂಗಳೂರಿನಲ್ಲಿ ಆಯೋಜಿಸುತ್ತಾರೆ. ಸಂಸ್ಥೆಯ ಮೂಲಕ ಅಂಗವಿಕಲರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾರೆ. ಅಂಗವಿಕಲರಿಗೆ 3% ಮೀಸಲಾತಿಯನ್ನು ತಂದುಕೊಡುವಲ್ಲಿ ಯಶಸ್ವಿಯಾಗುತ್ತಾರೆ. ಇವರು ಟೆಡೆಕ್ಸ್ ಟಾಕ್ ನೀಡಿದ್ದಾರೆ. ಅದರೊಂದಿಗೆ ಉಚಿತ ದಂತ ಶಿಬಿರ ಮತ್ತು ಬ್ಯೂಟಿ ಪೆಜೆಂಟ್​ಗಳನ್ನು ಆಯೋಜಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಅದರೊಂದಿಗೆ ಅಂಗವಿಕಲರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಹೋರಾಟ ನಡೆಸಿದ್ದಾರೆ.

    ಇದನ್ನೂ ಓದಿ: ದಾಸವಾಳದಲ್ಲಿ ಅಡಗಿದೆ ಆರೋಗ್ಯಕರ ಅಂಶಗಳು; ಇಂತಿವೆ ನೀವು ತಿಳಿದುಕೊಳ್ಳಬೇಕಾದ ಪ್ರಯೋಜನಗಳು…

    ರಾಜಲಕ್ಷ್ಮೀ ರಿಮೋಟ್ ಕಂಟ್ರೋಲ್ ವೀಲ್ಚೇರ್ ಅನ್ನು ನಿರಾಕರಿಸಿ ಮ್ಯಾನ್ಯುಯಲ್ ವೀಲ್ಚೇರ್ ಬಳಸಲು ಆರಂಭಿಸಿದರು. ಏಕೆಂದರೆ ದೈಹಿಕ ಸದೃಢತೆಗಾಗಿ. ವೀಲ್ಚೇರ್​ನಲ್ಲಿಯೇ ಹತ್ತಾರು ದೇಶಗಳನ್ನು ಸುತ್ತಿದ್ದಾರೆ. ಇವರ ಜೀವನ ನೋಡಿದರೆ ಬರುವ ಕಷ್ಟಗಳನ್ನು ಸವಾಲೆಂದು ಸ್ವೀಕರಿಸಿ ಮುಂದೆ ಹೋಗಬೇಕೆಂದು ಅನಿಸುತ್ತದೆ. ದೌರ್ಬಲ್ಯಗಳನ್ನು ಬಲವನ್ನಾಗಿಸಿಕೊಂಡು ಕೆಲಸ ಮಾಡಬೇಕು. ಅಂದು ನಾನು ಕಾಲು ಕಳೆದುಕೊಂಡೆ ಎಂದು ಸುಮ್ಮನೆ ಕುಳಿತುಕೊಂಡಿದ್ದರೆ ಮಿಸ್ ವೀಲ್ಚೇರ್ ಇಂಡಿಯಾ ಆಗಲು ಸಾಧ್ಯವಾಗುತ್ತಿರಲಿಲ್ಲ. ದುಃಖವನ್ನು ಬದಿಗಿಟ್ಟು ಉತ್ಸಾಹದಿಂದ ಬದುಕ್ಕಿದ್ದಕ್ಕೆ ತಾನೆ ಸಾಧಿಸಲು ಸಾಧ್ಯವಾಗಿದ್ದು. ಅಂಗವೈಫಲ್ಯದ ನಡುವೆಯೂ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಡಾ. ರಾಜಲಕ್ಷ್ಮೀ ಎಸ್ ಜೆ ಅವರು ಮಾದರಿಯಾಗಿ ನಿಲ್ಲುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts