ದಾಸವಾಳ ಹೂವಿನಲ್ಲಿ ಅತ್ಯಂತ ಪ್ರಯೋಜನಕಾರಿಯಾದ ಆರೋಗ್ಯಕರ ಅಂಶಗಳಿವೆ ಅನ್ನೋದು ಬಹುತೇಕ ಮಂದಿಗೆ ಗೊತ್ತಿಲ್ಲ. ದಾಸವಾಳ ಹೂವು ತನ್ನ ಒಡಲಲ್ಲಿ ಹೃದಯಕ್ಕೆ ಸಂಬಂಧಿಸಿದಂತೆ ಹಲವಾರು ಆರೋಗ್ಯದಾಯಕ ಗುಣಗಳನ್ನು ಹೊಂದಿದೆ. ಈ ಹೂವು ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿರುವುದಲ್ಲದೆ, ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ರಕ್ಷಣೆ ಕೊಡುವ ಆಹಾರವಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.
ಅದರಲ್ಲೂ ಕೂದಲು ಉದುರುವಿಕೆ ನಿವಾರಣೆಗೆ ದಾಸವಾಳವು ಹೇಳಿ ಮಾಡಿಸಿದ ಔಷಧ. ಎಲ್ಲಾ ರೀತಿಯಲ್ಲೂ ಮಾನವನಿಗೆ ಉಪಯುಕ್ತವಾಗಿರುವ ದಾಸವಾಳ ಹೂವಿನಿಂದ ಹೃದಯಕ್ಕೆ ಏನೆಲ್ಲಾ ಉಪಯೋಗ ಸಿಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ…
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ದಾಸವಾಳವು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಹೆಚ್ಚಿನ ಪರಿಣಾಮಕಾರಿಯಾಗಿದೆ. ‘ಜರ್ನಲ್ ಆಫ್ ನ್ಯೂಟ್ರೀಶನ್’ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ದಾಸವಾಳದ ಚಹಾವನ್ನು ಕುಡಿಯುವುದರಿಂದ ಸಿಸ್ಟೋಲಿಕ್ ರಕ್ತದೊತ್ತಡ ಕಡಿಮೆಯಾಗುತ್ತದೆ. ಜತೆಗೆ ಡಯಾಸ್ಟೋಲಿಕ್ ರಕ್ತದೊತ್ತಡವನ್ನೂ ಕಡಿಮೆ ಮಾಡುವಲ್ಲಿ ಸಹಕಾರಿ ಎಂಬುದು ತಿಳಿದು ಬಂದಿದೆ.
ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುತ್ತದೆ
ಜರ್ನಲ್ ಆಫ್ ಆಲ್ಟರ್ನೇಟಿವ್ ಮತ್ತು ಕಾಂಪ್ಲಿಮೆಂಟರಿ ಮೆಡಿಸಿನ್’ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ದಾಸವಾಳ ಚಹಾದ ಸೇವೆನೆಯಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಶೇ.22 ರಷ್ಟು ಕಡಿಮೆ ಮಾಡುತ್ತದೆ. ಜತೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಡೆದು ಹೃದಯಕ್ಕೆ ಸಂಭವಿಸುವ ಅಪಾಯವನ್ನು ತಡೆಯಲು ಹೆಚ್ಚು ಸಹಾಯ ಮಾಡುತ್ತದೆ.
ದಾಸವಾಳವು ಹೃದ್ರೋಗ ಸೇರಿದಂತೆ ವಿವಿಧ ರೋಗಗಳನ್ನು ಉಂಟು ಮಾಡುವ ಜೀವಕೋಶಗಳನ್ನು ನಾಶಪಡಿಸಲು ಸಹಕಾರಿಯಾಗಿದೆ. ಹೀಗಾಗಿ ವೈದ್ಯರ ಸಲಹೆ ಪಡೆದು ದಾಸವಾಳ ಚಹಾ ಸೇವಿಸುವುದನ್ನು ರೂಢಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಂಡುಕೋಳ್ಳಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಪ್ರಮಾಣ ಹೆಚ್ಚಾಗಿದ್ದು, ಇದಕ್ಕೆಲ್ಲ ದಾಸವಾಳ ರಾಮಬಾಣದಂತೆ ಕೆಲಸ ಮಾಡುತ್ತದೆ.