More

    ಹಣ ಬಲವ ಮಣಿಸಿದ ಮಹಿಳೆ; ಚಂದನಾ ಬೌರಿ ಎಂಬಾಕೆಯ ಯಶೋಗಾಥೆ

    ರಾಜಕಾರಣಕ್ಕೆ ಪ್ರವೇಶ ಪಡೆಯಲು ‘ಬ್ಯಾಕ್​ಗ್ರೌಂಡ್’ ಇರಬೇಕು, ಗಾಡ್​ಫಾದರ್ ಇರಬೇಕು, ಚುನಾವಣೆಯಲ್ಲಿ ಗೆಲ್ಲಲು ಕೋಟಿಕೋಟಿ ಹಣದ ಹೊಳೆ ಹರಿಸಬೇಕು, ಹತ್ತಾರು ವಾಹನಗಳು, ಸಾವಿರಾರು ಕಾರ್ಯಕರ್ತರು ಇರಬೇಕು ಎನ್ನುವುದು ಸಾಮಾನ್ಯ ಅಭಿಪ್ರಾಯ. ಕೂಲಿ ಕಾರ್ವಿುಕರು, ತುತ್ತು ಅನ್ನಕ್ಕೂ ಪರದಾಡುವವರೂ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಗಳಿಸಲು ಸಾಧ್ಯ ಎಂದರೆ ನಂಬುವಿರಾ?

    | ಚೈತ್ರಾ ಬಿ.ಜಿ.

    ಅವತ್ತು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ದಿನ. ಇಡೀ ದೇಶದ ಕಣ್ಣು ಪಶ್ಚಿಮ ಬಂಗಾಳದತ್ತ ನೆಟ್ಟಿದ್ದರೆ, ಫಲಿತಾಂಶದ ನಂತರ ನಿಬ್ಬೆರಗಾಗುವಂತೆ ಮಾಡಿದ್ದು ಬಾಂಕುರ ಜಿಲ್ಲೆಯ ಸಲ್ತೋರ ಕ್ಷೇತ್ರ. ಅಂದು ನಡೆದದ್ದು ರಾಜಕೀಯ ರಂಗದಲ್ಲಿ ಬಹುಶಃ ಹಿಂದೆಂದೂ ಆಗದಂಥ ಅಚ್ಚರಿಯ, ಅಪರೂಪದ ಘಟನೆ. 

    ಅದಕ್ಕೆ ಕಾರಣ ಭರ್ಜರಿ ಯಶಸ್ಸು ಗಳಿಸಿದ್ದ ಚಂದನಾ ಬೌರಿ ಎಂಬ ಬಡ ಮಹಿಳೆ. ಅಷ್ಟಕ್ಕೂ ಇವರಲ್ಲೇನು ವಿಶೇಷ ಅಂತೀರಾ? ಕೇವಲ ಐದಡಿ ಎತ್ತರದ ಈ ಹೆಣ್ಣುಮಗಳ ಇಡೀ ಜೀವನವೇ ಕುತೂಹಲಕರ. ಆಕೆ ಓದಿದ್ದು ಹತ್ತನೆಯ ತರಗತಿ. ಇರುವುದು ಗುಡಿಸಲಿನಲ್ಲಿ. ಪತಿ ದಿನಗೂಲಿ. 30 ವರ್ಷದ ಚಂದನಾ 3 ಮಕ್ಕಳ ಅಮ್ಮ. ಇನ್ನೂ ವಿಚಿತ್ರ ಎಂದರೆ, ಬಿಜೆಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಚಂದನಾರನ್ನು ಕಣಕ್ಕೆ ಇಳಿಸಿದ್ದು ಖುದ್ದು ಅವರ ಅರಿವಿಗೆ ಬಂದದ್ದು ಇನ್ಯಾರೋ ಬಂದು ಹೇಳಿದಾಗಲೇ!

    ಚುನಾವಣೆಯ ಸಂದರ್ಭದಲ್ಲಿ ಚಂದನಾ ಘೋಷಿಸಿಕೊಂಡ ಆಸ್ತಿ ವಿವರ ಏನು ಗೊತ್ತೆ? ಬ್ಯಾಂಕ್ ಖಾತೆಯಲ್ಲಿ ಇರುವ 6000 ರೂ. ಮತ್ತು ಒಟ್ಟೂ ಆಸ್ತಿಯ ಮೌಲ್ಯ 31 ಸಾವಿರ ರೂ., ಪತಿಯದ್ದು 30 ಸಾವಿರ ರೂ.! ಜತೆಗೆ, ಮನೆಯಲ್ಲಿರುವ 3 ದನ ಮತ್ತು 3 ಕುರಿ. ಇದಿಷ್ಟೇ ಇವರ ಆಸ್ತಿ. ಹಣ ಬಲ, ಅಧಿಕಾರ ಬಲ, ಕೌಟುಂಬಿಕ ಹಿನ್ನೆಲೆ, ಶಿಫಾರಸು ಯಾವುದೂ ಇಲ್ಲದೇ ಬಂದ ಗೆಲುವು ಇದು. ಪ್ರಾಮಾಣಿಕತೆಗೆ ದಕ್ಕಿದ ಬೆಲೆ, ನಿರಂತರ ಶ್ರಮ, ಪಕ್ಷ ನಿಷ್ಠೆಗೆ, ಕಠಿಣ ಪರಿಶ್ರಮಕ್ಕೆ ಸಂದ ಗೌರವ. ಇದೇ ಅವರನ್ನು ಚುನಾವಣಾ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಯಾಗಿ ನಿಂತಿದ್ದ, ಎರಡೆರಡು ಉನ್ನತ ಪದವಿ, ಎರಡು ಕೋಟಿಗೂ ಮಿಕ್ಕಿದ ಆದಾಯ ಹೊಂದಿದ ತೃಣಮೂಲ ಕಾಂಗ್ರೆಸ್​ನ ಸಂತೋಷ ಎಂಬುವವರನ್ನು ಸೋಲಿಸಲು ದಾರಿ ಮಾಡಿಕೊಟ್ಟದ್ದು!

    ಹೆಣ್ಣನ್ನು ಮೂದಲಿಸುತ್ತಾ, ಆಕೆಯಿಂದ ಏನು ಸಾಧ್ಯ ಎನ್ನುತ್ತಾ ಹೆಜ್ಜೆಗೊಂದು ಕಟ್ಟ್ಟುಪಾಡು ಹೇರುತ್ತಿರುವವರು ಹಾಗೆ ಯೋಚಿಸುತ್ತಲೇ ಇರಲಿ ಎನ್ನುತ್ತಲೇ ರಾಜಕೀಯದಲ್ಲಿ ದಿಟ್ಟ ಹೆಜ್ಜೆ ಊರಿದವರು ಚಂದನಾ ಬೌರಿ. ಎಲ್ಲಾ ಸಂಕಷ್ಟಗಳ ನಡುವೆ ಶಾಸಕಿಯಾಗಿರುವ ಚಂದನಾ ಮೂಡಿಸಿರುವ ಈ ಹೆಜ್ಜೆ ಗುರುತು ಇನ್ನೆಲ್ಲೋ ಕುಳಿತಿರುವ ಎಷ್ಟೋ ಚಂದನಾರ ಎದೆಯಲ್ಲೊಂದು ಆತ್ಮವಿಶ್ವಾಸದ ಕಿಡಿಯನ್ನು ಮೂಡಿಸದೇ ಇರಲಾರದು.

    ಟಿಕೆಟ್ ಅರಸಿ ಬಂದಿದ್ದು ಹೇಗೆ?: ಚಂದನಾ ಬೌರಿ ಹುಟ್ಟಿದ್ದು ಪಶ್ಚಿಮ ಬಂಗಾಳದ ಭಾಜೋರಾದಲ್ಲಿ. ಮನೆಯಲ್ಲಿ ಕಡುಬಡತನ, ಹಾಗೂ ಹೀಗೂ ಸಾಗುತ್ತಿದ್ದ ಸಂಸಾರಕ್ಕೆ ತಂದೆಯ ನಿಧನ ದೊಡ್ಡ ಆಘಾತ! ಆಗ ಚಂದನಾಗೆ 10ನೇ ತರಗತಿಯ ಪರೀಕ್ಷಾ ಸಮಯ. ಆ ವೇಳೆ ಚಂದನಾ ಸೇರಿದಂತೆ ಐದು ಮಕ್ಕಳ ಜವಾಬ್ದಾರಿ ಹೊತ್ತಿದ್ದು ಇವರ ತಾಯಿ. ಆಕೆಯೇ ಚಂದನಾಗೆ ಸ್ಪೂರ್ತಿ. ಮಹಿಳೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ತನ್ನ ಅಮ್ಮನೇ ಉದಾಹರಣೆ ಎನ್ನುತ್ತಾರೆ ಚಂದನಾ. ಅಲ್ಲಿಂದ ಮದುವೆಯಾಗಿ ಹೋದ ಮನೆಯಲ್ಲೂ ಕಡುಬಡತನವೇ. ಚಂದನಾ ಅವರ ಪತಿ ಸರ್ಬನ್ ನರೇಗಾದ ದಿನಗೂಲಿ ನೌಕರ. ದಿನಕ್ಕೆ 400 ರೂಪಾಯಿ ಗಳಿಕೆ. ಚಂದನಾ ಅವರೂ ಪತಿಯೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದಾರೆ. ಇದರ ನಡುವೆಯೇ ಚಂದನಾ 2016ರಲ್ಲಿ ಯುವ ಮೋರ್ಚಾದ ಯುವ ಅಧ್ಯಕ್ಷರಾಗಿ, ನಂತರ ಬಾಂಕುರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಈ ಮೂಲಕ ಇವರು ಕೈಗೊಳ್ಳುತ್ತಿದ್ದ ಕಾರ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿತ್ತು. ಈ ಕ್ಷೇತ್ರಕ್ಕೆ ಅರ್ಹ ಅಭ್ಯರ್ಥಿಯೆಂದರೆ ಇವರೇ ಎಂದು ನಿರ್ಧರಿಸಿದರು.

    ಭದ್ರತಾ ಸಿಬ್ಬಂದಿಯಿಂದ ನೆರವು!: ಶಾಸಕರಿಗೆ ನೀಡುವ ಭದ್ರತೆಯನ್ನು ಚಂದನಾ ಅವರಿಗೆ ನೀಡಿದಾಗ ಆ ಸಿಬ್ಬಂದಿಗೆ ಊಟ ಹಾಕಿಸಲು, ವಸತಿ ಕಲ್ಪಿಸಲು ತನ್ನ ಬಳಿ ಹಣ ಇಲ್ಲ ಅಂತ ಭದ್ರತೆಯೇ ಬೇಡ ಎಂದಿದ್ದರು ಚಂದನಾ. ಆದರೆ ನಿಯಮಾನುಸಾರ ಅವರಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಚ್ಚರಿಯ ವಿಷಯ ಎಂದರೆ ಚಂದನಾ ಮಾಡುತ್ತಿರುವ ಕಾರ್ಯಗಳನ್ನು ಕಂಡು ಖುಷಿಗೊಂಡಿರುವ ಭದ್ರತಾ ಸಿಬ್ಬಂದಿ ತಮ್ಮ ಜೇಬಿನಿಂದಲೇ ಖರ್ಚು ಮಾಡಿ ತರಕಾರಿ, ದಿನಸಿ ತಂದು ನೀಡುತ್ತಿದ್ದಾರೆ!

    ರಾಜಕೀಯ ಕಾರಣಕ್ಕೆ ನನ್ನಂಥ ಕಡುಬಡವರ ಮನೆಯಲ್ಲಿ ಶೌಚಗೃಹವೂ ಇಲ್ಲದ ಸ್ಥಿತಿ ಇದೆ. ಕುಡಿವ ನೀರಿಗೂ ತತ್ವಾರ. ಜನಸಾಮಾನ್ಯರ ಕಷ್ಟಗಳು ದೂರಾಗ ಬೇಕು ಎನ್ನುವ ಕನಸನ್ನು ಹೊತ್ತಿದ್ದೇನೆ. ಅದನ್ನು ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡುವೆ.

    | ಚಂದನಾ ಬೌರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts