More

    ಇಂಥ ಸ್ವಾರ್ಥ ಒಳ್ಳೆಯದು…; ಮನೋಲ್ಲಾಸ

    ಇಂಥ ಸ್ವಾರ್ಥ ಒಳ್ಳೆಯದು...; ಮನೋಲ್ಲಾಸ| ಬೇಲೂರು ರಾಮಮೂರ್ತಿ

    ಗುರುಕುಲದಲ್ಲಿ ಶಿಷ್ಯರ ವ್ಯಕ್ತಿತ್ವದ ಬಗ್ಗೆ ಉಪದೇಶ ಮಾಡಿದ ಗುರುಗಳು- ‘ನಿಮ್ಮ ಬದುಕಿನಲ್ಲಿ ಒಂದಿಷ್ಟು ಸ್ವಾರ್ಥಿಗಳಾದರೆ ನಿಮಗೇ ಒಳ್ಳೆಯದು’ ಎಂದರು. ಗುರುಗಳ ಈ ಮಾತನ್ನು ಕೇಳಿ ಶಿಷ್ಯರಿಗೆ ಅಚ್ಚರಿಯಾಯಿತು. ಏಕೆಂದರೆ ಕೆಲವೇ ತಿಂಗಳುಗಳ ಹಿಂದೆ ಗುರುಗಳು, ‘ನೀವು ಎಲ್ಲವೂ ನನ್ನದು, ನನಗೇ, ನನಗಿದ್ದರೆ ಸಾಕು ಎನ್ನುವ ಸ್ವಾರ್ಥವನ್ನು ಬಿಟ್ಟು ಸಮಯ ಸಂದರ್ಭಗಳಿಗೆ ಅನುಸಾರವಾಗಿ ಸಮಾಜಸೇವೆ ಮಾಡಬೇಕು, ಇತರರ ಕಷ್ಟಗಳಿಗೆ ಸ್ಪಂದಿಸಬೇಕು’ ಎಂದಿದ್ದರು. ಶಿಷ್ಯರು ಗುರುಗಳ ಮುಂದಿನ ಮಾತಿಗೆ ಕಾದರು.

    ಗುರುಗಳು ನಗುತ್ತ, ‘‘ಹೌದು ನಾನು ಹೇಳಿದ್ದು ಸರಿ, ಅದನ್ನು ವಿಸ್ತರಿಸಿ ಹೇಳುತ್ತೇನೆ ಕೇಳಿ. ಒಂದೂರಿನಲ್ಲಿ ಒಬ್ಬ ಸಮಾಜ ಸುಧಾರಕ ಇದ್ದ. ಅವನು ಎಲ್ಲಿಯಾದರೂ ಸರಿ, ಯಾವುದೇ ಊರಿನಲ್ಲಿ ಆದರೂ ಸರಿ ಯಾರಿಗಾದರೂ ತೊಂದರೆ ಎಂದು ಕೇಳಿದ ನಂತರ ಕಡಿಮೆ ಅವಧಿಯಲ್ಲಿ ಅಲ್ಲಿಗೆ ತಲುಪಿ ತನ್ನ ಕೈಲಾದ ಸಹಾಯ ಮಾಡುವುದರ ಜೊತೆಗೆ ಅಲ್ಲಿನವರನ್ನೂ ಹುರಿದುಂಬಿಸಿ ಸಹಾಯ ಮಾಡಿಸುತ್ತಿದ್ದನಂತೆ. ಆ ಊರಿನವರು, ‘ಅರೇ, ಈ ಊರಿನವರಾದ ನಾವು ಇಲ್ಲೇ ಇದ್ದೇವೆ. ಇವನು ಹೇಗೆ ನಮಗಿಂತ ಮುಂಚೆ ಇಲ್ಲಿಗೆ ಬರ್ತಾನೆ’ ಅಂತ ಯೋಚಿಸಿದರಂತೆ. ಹಾಗಂತ ಊರಿನವರು ಪ್ರಶ್ನಿಸಿದಾಗ ಸಮಾಜ ಸುಧಾರಕ, ‘ನನಗೆ ಯಾರಿಗಾದರೂ ಸಹಾಯ ಮಾಡಬೇಕು ಅನಿಸಿದಾಗ ಎಲ್ಲವೂ ಮನಸ್ಸಿನ ವೇಗದಲ್ಲಿ ನಡೆಯುತ್ತದೆ. ಅಲ್ಲದೇ ಇದರಲ್ಲಿ ನನ್ನ ಸ್ವಾರ್ಥವೂ ಇದೆ’ ಅಂದನಂತೆ. ‘ಇತರರಿಗೆ ಸಹಾಯ ಮಾಡುವುದರಲ್ಲಿ ಇವರದೇನು ಸ್ವಾರ್ಥ?’ ಎಂದು ಕೇಳಿದರೆ ಆತ ಹೇಳಿದನಂತೆ- ‘ಬೇರೊಬ್ಬರಿಗೆ ಸಹಾಯ ಮಾಡುವುದರಲ್ಲಿ ನಾನೇ ಮೊದಲಿಗನಾಗಬೇಕು ಎನ್ನುವ ಸ್ವಾರ್ಥ ನನ್ನದು. ಯಾರೋ ಸಹಾಯ ಮಾಡುತ್ತಿದ್ದರು, ನಾನು ಅಲ್ಲಿ ಹೋಗಿ ಸೇರಿಕೊಂಡೆ ಎನ್ನುವುದಕ್ಕಿಂತ ಸಹಾಯ ಮಾಡಲು ನಾನೇ ಪ್ರಾರಂಭ ಮಾಡಬೇಕು ಎನ್ನುವ ಆಶಯ’ ಎಂದನಂತೆ. ಆಗ ಆ ಊರಿನವರು, ಈ ರೀತಿಯ ಸ್ವಾರ್ಥ ಎಲ್ಲರಿಗೂ ಇದ್ದರೆ ಸಮಾಜದಲ್ಲಿ ಸಮಸ್ಯೆಗಳೇ ಇರೋದಿಲ್ಲವಲ್ಲ’ ಅಂದುಕೊಂಡರಂತೆ.

    ಕಥೆ ಮುಗಿಸಿದ ಗುರುಗಳು- ‘ನೀವು ಬದುಕಿರುವ ತನಕ ಆ ಸಮಾಜ ಸುಧಾರಕನ ಹಾಗೆ ಸ್ವಾರ್ಥಿಗಳಾಗಿ. ಎಲ್ಲಿ ಒಳ್ಳೆಯ ಕೆಲಸಗಳು ಆಗಬೇಕೋ ಅಲ್ಲಿ ನೀವೇ ಮೊದಲಿಗರಾಗಬೇಕು ಎನ್ನುವ ಸ್ವಾರ್ಥ ಬೆಳೆಸಿಕೊಳ್ಳಿ. ಮಳೆ ಸುರಿಯುವಾಗ ಹೇಗೆ ಮನೆ, ಬೀದಿ, ಅಂಗಳ, ದೇವಸ್ಥಾನ, ಅಂತ ನೋಡದೇ ಒಂದೇ ಸಮನೆ ಸುರಿಯುತ್ತದೋ ನೀವುಗಳು ಯಾರಿಗಾದರೂ ಸಹಾಯ ಮಾಡಬೇಕಾಗಿ ಬಂದಾಗ ಅವನು, ಇವನು ಅಂತ ಯೋಚಿಸದೆ ಸಹಾಯದ ಮಳೆ ಸುರಿಸಿರಿ. ಆ ಮಳೆಯ ಬೆಳೆ ನಿಮ್ಮ ಬದುಕನ್ನು ಕಾಪಾಡುತ್ತದೆ’ ಎಂದರು.

    ನಿಜವಲ್ಲವೇ, ಪರಿಸ್ಥಿತಿ ದಾರುಣವಾಗಿರುವಾಗ, ಜನರು ಸಹಾಯಕ್ಕಾಗಿ ಕೈ ಚಾಚುತ್ತಿರುವಾಗ ನಾವೇ ಮೊದಲಿಗರಾಗಬೇಕು ಎನ್ನುವ ಭಾವದಿಂದ ಸಹಾಯ ಮಾಡಲು ಧಾವಿಸುವುದು ಒಳ್ಳೆಯದು. ಇದರಿಂದ ನಮ್ಮ ಸುತ್ತಮುತ್ತಲಿನವರ ಸಂಕಷ್ಟ, ನೋವು ಒಂದಿಷ್ಟಾದರೂ ತಗ್ಗಬಹುದು. ನಮಗೂ ಸಣ್ಣದೊಂದು ಆತ್ಮಸಂತೃಪ್ತಿ ಲಭಿಸಬಲ್ಲದು.

    (ಲೇಖಕರು ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts