More

    ಉಜ್ಬೇಕಿಸ್ತಾನದಲ್ಲಿ ಮಕ್ಕಳ ಸಾವು: ಭಾರತ ಮೂಲದ 2 ಕೆಮ್ಮಿನ ಸಿರಪ್​ ಬಳಸದಂತೆ WHO ಎಚ್ಚರಿಕೆ

    ಜಿನಿವಾ: ಭಾರತೀಯ ಮೂಲದ ಎರಡು ಕೆಮ್ಮಿನ ಸಿರಪ್​ ಅನ್ನು ಉಜ್ಬೇಕಿಸ್ತಾನದ ಮಕ್ಕಳಿಗೆ ಬಳಸದಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಶಿಫಾರಸು ಮಾಡಿದೆ. ಎರಡು ಸಿರಪ್​ಗಳನ್ನು ನೋಯ್ಡಾ ಮೂಲದ ಮರಿಯನ್ ಬಯೋಟೆಕ್ ಕಂಪನಿ ತಯಾರಿಸಿದ್ದು, ಅವುಗಳನ್ನು ಕೆಳದರ್ಜೆಯ ವೈದ್ಯಕೀಯ ಉತ್ಪನ್ನ ಎಂದಿರುವ ಡಬ್ಲ್ಯುಎಚ್​ಒ, ಉತ್ತಮ ಗುಣಮಟ್ಟ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.

    ಮೊದಲು ಉಜ್ಬೇಕಿಸ್ತಾನದಲ್ಲಿ ಪತ್ತೆಯಾದ ಎರಡು ಸಿರಪ್​ಗಳನ್ನು 2022ರ ಡಿಸೆಂಬರ್​ 22ರಂದು ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯಕೀಯ ಉತ್ಪನ್ನ ಎಚ್ಚರಿಕಾ ವಿಭಾಗ ಡಬ್ಲ್ಯುಎಚ್​ಒಗೆ ವರದಿ ಮಾಡಿತು. ಎರಡು ಸಿರಪ್​ಗಳು ಉತ್ತಮವಾಗಿಲ್ಲದ ಕಾರಣ ಅವುಗಳನ್ನು ಬಳಸದಂತೆ ಉಜ್ಬೇಕಿಸ್ತಾನದ ಜನರಿಗೆ ಇದೀಗ ಎಚ್ಚರಿಕೆ ನೀಡಿದೆ.

    ಅಂದಹಾಗೆ ಆ ಎರಡು ಸಿರಪ್​ಗಳು ಯಾವುವೆಂದರೆ, ಅಂಬ್ರೋನಾಲ್​ (AMBRONOL) ಸಿರಪ್​ ಮತ್ತು ಡಿಒಕೆ-1 ಮ್ಯಾಕ್ಸ್​ (DOK-1 Max) ಸಿರಪ್. ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಮರಿಯನ್​ ಬಯೋಟೆಕ್​ ಕಂಪನಿ ಈ ಎರಡು ಸಿರಪ್​ಗಳನ್ನು ಉತ್ಪಾದಿಸುತ್ತಿದೆ. ಈವರೆಗೂ ಕಂಪನಿಯು ತನ್ನ ಉತ್ಪನ್ನಗಳ ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಯಾವುದೇ ಗ್ಯಾರಂಟಿ ಒದಗಿಸಿಲ್ಲ ಎಂದು WHO ಎಚ್ಚರಿಸಿದೆ.

    ಉಜ್ಬೇಕಿಸ್ತಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿರುವ ವರದಿಗಳು ಹೊರಬೀಳುತ್ತಿದ್ದಂತೆ ಮರಿಯನ್ ಬಯೋಟೆಕ್ ಕಂಪನಿ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

    ಡಬ್ಲ್ಯುಎಚ್​ಒ ಪ್ರಕಾರ, ಉಜ್ಬೇಕಿಸ್ತಾನದ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಗುಣಮಟ್ಟದ ನಿಯಂತ್ರಣ ಪ್ರಯೋಗಾಲಯಗಳು ಕೆಮ್ಮಿನ ಸಿರಪ್‌ಗಳ ಮಾದರಿಗಳನ್ನು ಪರೀಕ್ಷೆ ಮಾಡಿದೆ. ಪ್ರಯೋಗಾಲಯ ವಿಶ್ಲೇಷಣೆಯ ಪ್ರಕಾರ ಎರಡೂ ಉತ್ಪನ್ನಗಳಲ್ಲಿ ಸ್ವೀಕೃತವಲ್ಲದ ಡೈಥಿಲೀನ್ ಗ್ಲೈಕೋಲ್ ಅಥವಾ ಎಥಿಲೀನ್ ಗ್ಲೈಕೋಲ್ ಮಾಲಿನ್ಯಕಾರಕಗಳು ಹೆಚ್ಚು ಪ್ರಮಾಣದಲ್ಲಿದೆ.

    ಈಗಾಗಲೇ ಉಜ್ಬೇಕಿಸ್ತಾನ ಸಮೀಪದ ಇತರೆ ರಾಷ್ಟ್ರಗಳಲ್ಲಿಯು ಈ ಎರಡೂ ಉತ್ಪನ್ನಗಳನ್ನು ಕಂಪನಿ ಮಾರಾಟ ಮಾಡಿರಬಹುದು ಮತ್ತು ಅನೌಪಚಾರಿಕ ಮಾರುಕಟ್ಟೆಗಳ ಮೂಲಕ ಬೇರೆ ದೇಶಗಳನ್ನು ವಿತರಣೆ ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರಿಕೆ ವಹಿಸಿ ಎಂದಿರುವ ಡಬ್ಲ್ಯುಎಚ್​ಒ, ಎರಡೂ ಉತ್ಪನ್ನಗಳು ಬಳಕೆಗೆ ಯೋಗ್ಯವಲ್ಲ, ಅದರಲ್ಲೂ ಮಕ್ಕಳಿಗಂತೂ ಬಳಸಲೇಬೇಡಿ ಎಂದಿದೆ. ಬಳಸಿದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಕೆಯನ್ನು ನೀಡಿದೆ.

    ಮರಿಯನ್ ಬಯೋಟೆಕ್ ಕಂಪನಿಯು ತಯಾರಿಸಿದ ಔಷಧಿಗಳನ್ನು ಸೇವಿಸಿ 18 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಡಿಸೆಂಬರ್ 22 ರಂದು ಉಜ್ಬೇಕಿಸ್ತಾನ ಸರ್ಕಾರ ಆರೋಪ ಮಾಡಿದ್ದು, ಕಳೆದ ಮಂಗಳವಾರ (ಜ.10) ಉತ್ತರ ಪ್ರದೇಶದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಮರಿಯನ್ ಬಯೋಟೆಕ್ ಕಂಪನಿಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿದೆ.

    ಸಾಕಷ್ಟು ದಾಖಲೆಗಳನ್ನು ಒದಗಿಸದ ಕಾರಣ ನಾವು ಮರಿಯನ್ ಬಯೋಟೆಕ್ ಕಂಪನಿಯ ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿದ್ದೇವೆ. ಅಲ್ಲದೆ, ರಾಜ್ಯ ಪರವಾನಗಿ ಪ್ರಾಧಿಕಾರದಿಂದ ಶೋಕಾಸ್ ನೋಟಿಸ್ ಸಹ ನೀಡಲಾಗಿದೆ ಎಂದು ಗೌತಮ್ ಬುದ್ಧ ನಗರ ಡ್ರಗ್ ಇನ್ಸ್‌ಪೆಕ್ಟರ್ ವೈಭವ್ ಬಬ್ಬರ್ ತಿಳಿಸಿದರು. ಔಷಧಿಗಳ ಮಾದರಿ ಫಲಿತಾಂಶಗಳು ಇನ್ನೂ ಬಾಕಿ ಇವೆ ಎಂದು ತಿಳಿಸಿದರು. (ಏಜೆನ್ಸೀಸ್​)

    ಹಾಸನದಲ್ಲೊಂದು ಕರುಳು ಹಿಂಡುವ ಘಟನೆ: ತಾಯಿ ಮಾಡಿದ ತಪ್ಪಿಗೆ ಏನೂ ಅರಿಯದ ಕಂದಮ್ಮ ದುರಂತ ಸಾವು

    ಆರ್‌ವಿ ವಿಶ್ವವಿದ್ಯಾಲಯದಿಂದ 10 ಕೋಟಿ ರೂ. ವಿದ್ಯಾರ್ಥಿ ವೇತನ: 500ಕ್ಕೂ ಹೆಚ್ಚು UG, PG ವಿದ್ಯಾರ್ಥಿಗಳಿಗೆ ಪ್ರಯೋಜನ

    ವಿಧಾನಸಭಾ ಚುನಾವಣೆಗೆ ಸ್ಪರ್ಧೆ! ಸ್ವಾಭಿಮಾನಿ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts