More

    ಮಕ್ಕಳ ಮನಸ್ಸು ಅರಿತು ಪಾಠ ಮಾಡಿ

    ರಾಣೆಬೆನ್ನೂರ: ಶಿಕ್ಷಕರು ಒತ್ತಡದ ಬದಲು ಆನಂದದಿಂದ ಪಾಠ ಮಾಡಿದಾಗ ಮಕ್ಕಳ ಮನಸ್ಸಿಗೆ ತಲುಪುತ್ತದೆ. ಪಾಠ ಪ್ರವಚನಗಳನ್ನು ಸೇವೆಯ ರೀತಿಯಲ್ಲಿ ಮಾಡಬೇಕು ಎಂದು ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ಮಂಗಳನಾಥಾನಂದಜಿ ಮಹಾರಾಜ್ ಹೇಳಿದರು.

    ಇಲ್ಲಿನ ಮಾಗೋಡ ರಸ್ತೆಯ ರಾಮಕೃಷ್ಣ ವಿವೇಕಾನಂದ ಆಶ್ರಮದ 16ನೇ ವಾರ್ಷಿಕೋತ್ಸವದ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಶಿಕ್ಷಕರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

    ಮಕ್ಕಳು ಭಗವಂತನ ಸ್ವರೂಪ ಎಂದು ಪಾಠ ಮಾಡಬೇಕು. ಅಂದಾಗ ಮಕ್ಕಳ ಜೀವನ ಉಜ್ವಲವಾಗಲು ಸಾಧ್ಯ ಎಂದರು.

    ಮೈಸೂರಿನ ರಾಮಕೃಷ್ಣ ಆಶ್ರಮದ ಶಾಂತಿವ್ರತಾನಂದಜಿ ಮಹಾರಾಜ್ ಮಾತನಾಡಿ, ಶಿಕ್ಷಕರು, ಸೈನಿಕರು ಮತ್ತು ರೈತರು ದೇಶದ ಅಭಿವೃದ್ಧಿ ಹರಿಕಾರರು. ಶಾಲೆಯು ಸಮಾಜದ ವಿವಿಧ ಸ್ತರದ ಶ್ರೇಷ್ಠ ವ್ಯಕ್ತಿಗಳನ್ನು ತಯಾರು ಮಾಡುವ ಪ್ರಯೋಗಶಾಲೆಯಾಗಿದ್ದು, ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ಶಿಕ್ಷಣವೆಂದರೆ ಕೇವಲ ಜ್ಞಾನವನ್ನು ನೀಡುವುದಾಗಿರದೆ ಮನಸ್ಸು ಮತ್ತು ದೇಹವನ್ನು ತರಬೇತಿಗೊಳಿಸುವ ಒಂದು ಸಾಧನ ಎಂದರು.

    ಮಂಡ್ಯದ ವಿವೇಕ ಶಿಕ್ಷಣ ವಾಹಿನಿ ಮುಖ್ಯಸ್ಥ ನಿತ್ಯಾನಂದ ವಿವೇಕವಂಶಿ ಮಾತನಾಡಿ, ಇಂದು ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳ ಶ್ರೇಷ್ಠತೆ ಪರಿಗಣಿಸಲಾಗುತ್ತಿದೆ. ಮಕ್ಕಳಿಗೆ ದೈಹಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ, ಭಾವನಾತ್ಮಕ ಅಂಶಗಳನ್ನು ಒಳಗೊಂಡ ಪಂಚಮುಖಿ ಶಿಕ್ಷಣ ನೀಡಬೇಕಾಗಿದೆ. ಶಿಕ್ಷಕರು ಮಕ್ಕಳಿಗೆ ನಮ್ಮ ದೇಶದ ಶರಣರು, ಮಹಾತ್ಮರು, ಆದರ್ಶ ಪುರುಷರ ಬಗ್ಗೆ ತಿಳಿ ಹೇಳಬೇಕು ಎಂದರು.

    ಹೊಸಪೇಟೆ ರಾಮಕೃಷ್ಣ ಗೀತಾಶ್ರಮದ ಸ್ವಾಮಿ ಸುಮೇಧಾನಂದಜಿ ಮಹಾರಾಜ್, ಸ್ಥಳೀಯ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಪ್ರಕಾಶಾನಂದಜಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು. ಪರಿಣಾಮಕಾರಿ ಬೋಧನೆ ಎಂಬ ವಿಷಯ ಕುರಿತು ಬಳ್ಳಾರಿಯ ಸಂಪನ್ಮೂಲ ವ್ಯಕ್ತಿ ರಾಜಶೇಖರ ಉಪನ್ಯಾಸ ನೀಡಿದರು.

    ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎ.ಬಿ. ಚಂದ್ರಶೇಖರ, ಡಾ. ಚಂದ್ರಶೇಖರ ಕೇಲಗಾರ, ಸೋಮಶೇಖರ ಮುಂಡರಗಿ, ನಿರ್ಮಲಾ ಮಾನೆ, ಇಸ್ಮಾಯಿಲ್ ಐರಣಿ, ಬಿ.ಪಿ. ಶಿಡೇನೂರ, ರವಿ ಗೋಣೆಪ್ಪಣವರ, ಹೇಮಂತ, ಬಿ.ಆರ್. ಕುಸಗೂರ, ಕೊಟ್ರೇಶಪ್ಪ ಎಮ್ಮಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts