More

    ಬಸ್‌ಗಾಗಿ ವಿದ್ಯಾರ್ಥಿಗಳ ಪರದಾಟ

    ಅಣ್ಣಿಗೇರಿ: ರಾಜ್ಯದಲ್ಲಿ ಜಾರಿಯಾದ ಶಕ್ತಿ ಯೋಜನೆ ಪರಿಣಾಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರತಿನಿತ್ಯ ಕೆಲಸಕ್ಕೆ ತೆರಳುವ ಪುರುಷ ಪ್ರಯಾಣಿಕರು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.

    ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ತೆರಳಲು ಸರಿಯಾದ ಬಸ್ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಪುರುಷ ಪ್ರಯಾಣಿಕರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೆರಳಲು ಸಮರ್ಪಕ ಬಸ್ ಇಲ್ಲ.

    ಬೆಳಗಿನ ಸಮಯ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಿಗೆ ತೆರಳಬೇಕೆಂದರೆ ತುಂಬಿದ ಬಸ್‌ನಲ್ಲಿ ಜೋತು ಬಿದ್ದು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಸ್ಥಳೀಯ ಶಾಸಕರು ಕ್ಯಾರೆ ಎನ್ನುತ್ತಿಲ್ಲ. ಏನಾದರೂ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆ ಹೆಚ್ಚಿನ ಬಸ್ ಸೌಲಭ್ಯವನ್ನು ಕಲ್ಪಿಸಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಬೇಕು ಎಂದು ವಿದ್ಯಾರ್ಥಿಗಳಾದ ಅಭಿಷೇಕ ಪಟ್ಟೇದ, ಪ್ರವೀಣ ಪಟ್ಟೇದ, ಯಲ್ಲಪ್ಪ ಅಜ್ಜಣ್ಣವರ, ಲಕ್ಷ್ಮೀ ವಡ್ಡರ, ಉಮಾ ಬೇವಿನಕಟ್ಟಿ, ನಾಗೇಶ ವಡ್ಡರ, ಕೈಫ್ ಸೌದಾಗರ ಆಗ್ರಹಿಸಿದ್ದಾರೆ.

    ಅಣ್ಣಿಗೇರಿಯಿಂದ ವಿವಿಧ ಭಾಗಗಳಿಗೆ ತೆರಳುವ ಸರ್ಕಾರಿ ನೌಕರರ ಗೋಳು ಹೇಳತೀರದಾಗಿದೆ. ಅಸಮರ್ಪಕ ಬಸ್ ವ್ಯವಸ್ಥೆಯಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲ. ಹೀಗಾಗಿ, ನನ್ನ ಕುಟುಂಬವನ್ನು ಬಿಟ್ಟು ಕೆಲಸ ಮಾಡುವ ಸ್ಥಳದಲ್ಲಿಯೇ ಚಿಕ್ಕದೊಂದು ಮನೆ ಮಾಡಿಕೊಂಡು ಇದ್ದೇನೆ.
    > ಹೆಸರು ಹೇಳಲಿಚ್ಚಿಸದ ಸರ್ಕಾರಿ ನೌಕರ

    ಈ ತಿಂಗಳ ಕೊನೆಗೆ ಹೆಚ್ಚುವರಿಯಾಗಿ 10 ಬಸ್‌ಗಳನ್ನು ಓಡಿಸಲು ಮೇಲಧಿಕಾರಿಗಳು ತಿಳಿಸಿದ್ದಾರೆ. ಇನ್ನು ಸ್ವಲ್ಪ ದಿನದಲ್ಲಿ ಕೊರತೆಯ ಮಾಹಿತಿಯನ್ನು ಗಮನಿಸಿ ಸರಿಪಡಿಸಲಾಗುವುದು.
    >ಬಸವರಾಜ ಎಂ., ನವಲಗುಂದ ಡಿಪೋ ಮ್ಯಾನೇಜರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts