More

    ಕೈರಂಗಳ ಪುಣ್ಯಕೋಟಿನಗರ ಶಾಲಾ ಪರಿಸರದಲ್ಲಿ ಬಾರ್: ಬಾಳೆಪುಣಿ ಗ್ರಾಪಂಗೆ ವಿದ್ಯಾರ್ಥಿಗಳ ಮುತ್ತಿಗೆ

    ಉಳ್ಳಾಲ: ಶಾಲಾ ಆವರಣದಿಂದ 100 ಮೀಟರ್ ಅಂತರದಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾರಾಟ ಮಾಡಬಾರದೆನ್ನುವ ರಾಜ್ಯ ಸರ್ಕಾರದ ನಿಯಮ ಉಲ್ಲಂಘಿಸಿ ಕೈರಂಗಳ ಪುಣ್ಯಕೋಟಿ ನಗರ ಶಾರದಾ ಗಣಪತಿ ವಿದ್ಯಾಕೇಂದ್ರದ ಬಳಿ ಬಾರ್ ಮತ್ತು ರೆಸ್ಟೋರೆಂಟ್‌ಗೆ ನಿರಾಕ್ಷೇಪಣಾ ಪತ್ರ ನೀಡಿರುವುದನ್ನು ಖಂಡಿಸಿ ಬುಧವಾರ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಬಾಳೆಪುಣಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿದರು.

    ಶಿಕ್ಷಣ ಸಂಸ್ಥೆಯ ಸಂಚಾಲಕ ಟಿ.ಜಿ.ರಾಜಾರಾಮ್ ಭಟ್ ಮಾತನಾಡಿ, ಶಾಲಾ ಆವರಣದಿಂದ 13 ಮೀಟರ್ ಅಂತರದಲ್ಲಿ ಬಾರ್ ಮತ್ತು ರೆಸ್ಟೋರೆಂಟ್‌ಗೆ ಗ್ರಾಮ ಪಂಚಾಯಿತಿ ನಿರಾಕ್ಷೇಪಣಾ ಪತ್ರ ನೀಡಿದೆ. ಇದು ಸರ್ಕಾರದ ಮಾರ್ಗಸೂಚಿ ಕಡೆಗಣನೆಯಾಗಿದೆ ಎಂದು ಆರೋಪಿಸಿದರು.

    ನಿರಾಕ್ಷೇಪಣಾ ಪತ್ರ ನೀಡುವ ಮೊದಲು ಸಾರ್ವಜನಿಕ ಆಕ್ಷೇಪಣೆಗೆ ಗ್ರಾಪಂ ಅವಕಾಶ ನೀಡಿಲ್ಲ. ಇದರಿಂದಾಗಿ ಶಾಲಾ ಮಕ್ಕಳಿಗೆ ತುಂಬಾ ತೊಂದರೆ ಆಗಲಿದೆ. ಬಾರ್ ಮುಂದೆ ಪಾಠ ಕೇಳುವ ದುಸ್ಥಿತಿಗೆ ವಿದ್ಯಾರ್ಥಿಗಳು ಬೇಸತ್ತಿದ್ದು, ತಕ್ಷಣ ಅನುಮತಿ ರದ್ದುಪಡಿಸಬೇಕು. ಪ್ರಥಮ ಹಂತದಲ್ಲಿ ಮನವಿ ನೀಡಲಾಗಿದ್ದು, ಮುಂದಿನ ಹಂತದಲ್ಲಿ ಮೇಲ್ಮನವಿ, ಧರಣಿ, ಆಮರಣಾಂತ ಸತ್ಯಾಗ್ರಹದಂಥ ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.

    ಪಂಚಾಯಿತಿ ಅಧ್ಯಕ್ಷೆ ರಝಿಯಾ ಮನವಿ ಸ್ವೀಕರಿಸಿದರು. ಬಳಿಕ ವಿವಾದಿತ ಬಾರ್ ಮತ್ತು ರೆಸ್ಟೋರೆಂಟ್ ಎದುರು ಜಮಾಯಿಸಿದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

    ಶಾಲಾ ಆವರಣದ ನೂರು ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಮಾದಕ ಪದಾರ್ಥ ಮಾರುವಂತಿಲ್ಲ ಎನ್ನುವ ಕಾನೂನು ಇದೆ. ಆದರೆ ಇಲ್ಲಿ ನಿಯಮ ಉಲ್ಲಂಘಿಸಿ ಬಾರ್ ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.
    -ರಶ್ಮಿತಾ ವಿದ್ಯಾರ್ಥಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts