More

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕನ್ನಡಿಗ ಸ್ಟುವರ್ಟ್‌ ಬಿನ್ನಿ ಗುಡ್​​ ಬೈ

    ಟೀಂ ಇಂಡಿಯಾ ಹಾಗೂ ಕರ್ನಾಟಕ ತಂಡದ ಆಲ್‌ರೌಂಡರ್‌, ಕನ್ನಡಿಗ ಸ್ಟುವರ್ಟ್‌ ಬಿನ್ನಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಬೌಲಿಂಗ್‌ ದಾಖಲೆ ಹೊಂದಿರುವ ಬಿನ್ನಿ ಪ್ರಥಮ ದರ್ಜೆಯ ಕ್ರಿಕೆಟ್‌ಗೂ ಗುಡ್‌ ಬೈ ಹೇಳಿದ್ದಾರೆ.

    ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿರುವುದು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆ ನೀಡಿದೆ’ ಎಂದು ಬಿನ್ನಿ ನಿವೃತ್ತಿ ಸಮಯದಲ್ಲಿ ಹೇಳಿದ್ದಾರೆ. ತನ್ನ ಕ್ರಿಕೆಟ್‌ ಕರಿಯರ್‌ನಲ್ಲಿ ಸಹಕಾರ ನೀಡಿದ ಬಿಸಿಸಿಐ, ಕೋಚ್‌ಗಳು, ಸಹ ಆಟಗಾರರು ಹಾಗೂ ಇತರೆ ತಂಡಗಳಿಗೆ ಧನ್ಯವಾದಗಳು ಎಂದು ಸ್ಟುವರ್ಟ್‌ ಬಿನ್ನಿ ಹೇಳಿದ್ದಾರೆ.

    ಬೌಲಿಂಗ್​​ನಲ್ಲಿ ದಾಖಲೆ:

    ಬೌಲಿಂಗ್‌ನಲ್ಲಿ ದಾಖಲೆ ಹೊಂದಿರುವ ಬಿನ್ನಿ, 2014ರಲ್ಲಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 4 ರನ್‌ ನೀಡಿ 6 ವಿಕೆಟ್‌ಗಳನ್ನು ಪಡೆದಿದ್ದರು. ಈ ದಾಖಲೆಯನ್ನು ಇದುವರೆಗೂ ಯಾರು ಸಹ ಮುರಿದಿಲ್ಲ. 94 ಪ್ರಥಮ ದರ್ಜೆಯ ಪಂದ್ಯಗಳನ್ನಾಡಿರುವ ಬಿನ್ನಿ, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು.

    ವೆಸ್ಟ್‌ ಇಂಡೀಸ್‌ ವಿರುದ್ಧ ಫ್ಲೋರಿಡಾದಲ್ಲಿ ನಡೆದಿದ್ದ ಟಿ-20 ಪಂದ್ಯದಲ್ಲಿ ಇವಿನ್‌ ಲೂಯಿಸ್‌ಗೆ ಒಂದೇ ಓವರ್‌ನಲ್ಲಿ ಬಿನ್ನಿ 31 ರನ್‌ ಬಿಟ್ಟುಕೊಟ್ಟು ದುಬಾರಿ ಬೌಲರ್‌ ಎನಿಸಿಕೊಂಡಿದ್ದರು. ಆ ಓವರ್‌ನಲ್ಲಿ ಲೂಯಿಸ್‌ 5 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಬಿನ್ನಿಗೆ ಅದೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಸ್ಟುವರ್ಟ್‌ ಬಿನ್ನಿ ಅವರ ತಂದೆ ರೋಜರ್‌ ಬಿನ್ನಿ ಬಿಸಿಸಿಐ ಆಯ್ಕೆ ಸಮಿತಿಯ ಸದಸ್ಯರೂ ಆಗಿದ್ದರು.

    ಅಂದಹಾಗೆ ಕರ್ನಾಟಕ ಮೂಲದ ಸ್ಟುವರ್ಟ್ ಬಿನ್ನಿ, 2014 ರಿಂದ 2016ರವರೆಗೆ ಭಾರತ ತಂಡವನ್ನು ಮೂರೂ ಸ್ವರೂಪದಲ್ಲಿ ಪ್ರತಿನಿಧಿಸಿದ್ದಾರೆ. 6 ಟೆಸ್ಟ್‌ ಪಂದ್ಯಗಳಿಂದ 194 ರನ್‌, 14 ಏಕದಿನ ಪಂದ್ಯಗಳಿಂದ 230 ರನ್‌ ಹಾಗೂ 3 ಟಿ20 ಪಂದ್ಯಗಳಿಂದ 35 ರನ್ ಗಳಿಸಿದ್ದಾರೆ. ಇದರ ಜೊತೆಗೆ ಬೌಲಿಂಗ್‌ನಲ್ಲಿ ಎಲ್ಲಾ ಸ್ವರೂಪದಲ್ಲಿಯೂ 24 ವಿಕೆಟ್‌ ಪಡೆದಿದ್ದಾರೆ. (ಏಜೆನ್ಸೀಸ್)


    VIDEO: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಐತಿಹಾಸಿಕ ದಾಖಲೆ: ಏಳು ಪದಕಗಳ ಬೇಟೆ

    ಕೆಲವೆಡೆ ಕಾಲಿಟ್ಟಿದೆ ಮತ್ತೊಂದು ವಿಚಿತ್ರ ಜ್ವರ: ಉ.ಪ್ರದೇಶದಲ್ಲಿ ಹಲವರ ಸಾವು! ಹಾಸಿಗೆಗಾಗಿ ಪರದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts