More

    ತಾತ್ವಿಕ ನೆಲೆಯಲ್ಲಿ ಹೋರಾಟ

    ತೀರ್ಥಹಳ್ಳಿ: ವಿದ್ಯಾರ್ಥಿ ಜೀವನದಿಂದಲೇ ತಾವು ನಂಬಿದ ತಾತ್ವಿಕ ನೆಲೆಯಲ್ಲಿ ಬದುಕಿ ಅಹಿಂಸಾತ್ಮಕ ಹೋರಾಟದಿಂದ ಪ್ರಜೆಗಳಲ್ಲಿ ಆಲೋಚಿಸುವ ಕ್ರಮವನ್ನು ರೂಪಿಸಿದ್ದ ಸಮಾಜವಾದಿ ಧುರೀಣ ಶಾಂತವೇರಿ ಗೋಪಾಲಗೌಡರ ಹುಟ್ಟಿದ ನೆಲ ಇಂದಿಗೂ ಅಭಿವೃದ್ಧಿ ಆಗಿಲ್ಲ ಎಂದು ವಿಶ್ರಾಂತ ಪ್ರಾಚಾರ್ಯ ಡಾ. ಬಿ.ಗಣಪತಿ ಬೇಸರ ವ್ಯಕ್ತಪಡಿಸಿದರು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್‌ನಿಂದ ಪಟ್ಟಣದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮೂರು ಬಾರಿ ಶಾಸಕರಾಗಿದ್ದ ಗೋಪಾಲ ಗೌಡರು ಕೊನೆಯವರೆಗೂ ಬಾಡಿಗೆ ಮನೆಯಲ್ಲೇ ವಾಸವಿದ್ದರು. ಅವರು ಜನ್ಮ ತಾಳಿದ ಶಾಂತವೇರಿ ಗ್ರಾಮ ಕೇವಲ ದೀಪ ಬೆಳಗಲು ಹಾಗೂ ಈ ಪವಿತ್ರ ಭೂಮಿಯ ಮಣ್ಣು ತೆಗೆದುಕೊಂಡು ಹೋಗಲು ಮೀಸಲಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
    ಗೇಣಿದಾರರ ಪರ ಹೋರಾಟ ನಡೆಸಿ ಸಮ ಸಮಾಜ ನಿರ್ಮಾಣದ ಪರಿಕಲ್ಪನೆ ಹೊಂದಿದ್ದ ಗೋಪಾಲ ಗೌಡರು ವಿದ್ಯಾರ್ಥಿ ಜೀವನದಲ್ಲೇ ಜೈಲು ವಾಸ ಅನುಭವಿಸಿದ್ದರು. 52ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ, ಆನಂತರ ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮೊದಲ ಅವಧಿಯಲ್ಲೇ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದು ನಾಗರಿಕ ಸರ್ಕಾರದ ಹೊಣೆ. ಜತೆಗೆ ಮಕ್ಕಳು ಹಸಿದಿರದಂತೆ ಮಧ್ಯಾಹ್ನದ ಊಟವನ್ನೂ ನೀಡುವಂತೆ ಆಗ್ರಹಿಸಿದ್ದರು ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್, ಗೋಪಾಲ ಗೌಡರು ರಾಜಕಾರಣಿ ಮಾತ್ರವಲ್ಲದೇ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿಯೂ ಆಳವಾದ ಜ್ಞಾನ ಹೊಂದಿದ್ದರು. ಅಪರೂಪಕ್ಕೆ ಜನ್ಮ ತಾಳುವ ಇಂತಹ ವ್ಯಕ್ತಿಗಳು ಎಂದಿಗೂ ಅಮರ ಎಂದು ಹೇಳಿದರು.

    ಕಸಾಪ ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಪಪಂ ಅಧ್ಯಕ್ಷೆ ಗೀತಾ ರಮೇಶ್, ಸದಸ್ಯರಾದ ಸುಶೀಲಾ ಶೆಟ್ಟಿ, ಗುತ್ತಿಗೆದಾರ ಡಿ.ಎಸ್.ಅಬ್ದುಲ್ ರಹಮಾನ್, ರೇಣುಕಾ ಹೆಗ್ಡೆ, ಮಹಮದ್, ಪ್ರಸನ್ನ ತಿರಳೇಬೈಲು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts