More

    ಬೀದಿ ವ್ಯಾಪಾರಿಗಳ ಕಿರಿಕಿರಿ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಮಳೆಗಾಲದ ಹಣಬೆಯಂತೆ ಆಗಾಗ ಬಿ.ಸಿ.ರೋಡಿನಲ್ಲಿ ಅನಧಿಕೃತವಾಗಿ ತಲೆ ಎತ್ತುತ್ತಿರುವ ಬೀದಿ ವ್ಯಾಪಾರಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಂಗಳೂರು- ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯನ್ನೇ ಆಕ್ರಮಿಸುವ ಮಟ್ಟಿಗೆ ಬೀದಿ ವ್ಯಾಪಾರಿಗಳ ವಹಿವಾಟು ಎಗ್ಗಿಲ್ಲದೆ ನಡೆಯುತ್ತಿದೆ.

    ಜನರಿಗೂ ದಾರಿ ಪಕ್ಕ ತರಕಾರಿ, ದಿನಸಿ ಸುಲಭದಲ್ಲಿ ಸಿಗುತ್ತಿರುವುದರಿಂದ ಪ್ರತಿ ಭಾನುವಾರ ಬಿ.ಸಿ.ರೋಡಿನ ರಾ.ಹೆದ್ದಾರಿ ಪಕ್ಕ ಜನಜಾತ್ರೆ ನೆರೆದಿರುತ್ತದೆ. ಈ ಅನಧಿಕೃತ ಮಾರ್ಕೆಟ್‌ನಿಂದಾಗಿ ಜನಸಂಚಾರ, ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದ್ದು, ಸಾರ್ವಜನಿಕರಿಂದಲೇ ದೂರುಗಳು ಕೇಳಿಬಂದಿವೆ.

    ಬಿ.ಸಿ.ರೋಡಿನ ಮೇಲ್ಸೆತುವೆಯ ಅಡಿಭಾಗದಲ್ಲಿ ಸಣ್ಣದಾಗಿ ಆರಂಭಗೊಳ್ಳುವ ಬೀದಿ ವ್ಯಾಪಾರ ದಿನ ಕಳೆಯುತ್ತಿದ್ದಂತೆಯೇ ಬೆಳೆಯುತ್ತಾ ಕ್ರಮೇಣ ಮಾರ್ಕೆಟ್ ಸ್ವರೂಪವನ್ನೇ ಪಡೆದುಕೊಳ್ಳುತ್ತದೆ. ಇತರ ದಿನಗಳಿಗಿಂತ ಭಾನುವಾರ ಒಂದು ಪಟ್ಟು ಹೆಚ್ಚು ಎನ್ನುವಂತೆ ಹೊರ ಜಿಲ್ಲೆಗಳ ಬೀದಿ ವ್ಯಾಪಾರಿಗಳು ಬಿ.ಸಿ.ರೋಡಿಗೆ ಆಗಮಿಸಿ ರಸ್ತೆ ಬದಿ ಆಕ್ರಮಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೇ ಬೀದಿ ವ್ಯಾಪಾರ ನಡೆಯುತ್ತಿರುವುದರಿಂದ ವಾಹನ ಸಂಚಾರಕ್ಕೂ ಇದು ಅಡ್ಡಿ ಉಂಟು ಮಾಡುತ್ತಿದೆ. ರಸ್ತೆ ಪಕ್ಕ ವಾಹನ ನಿಲ್ಲಿಸಿ ತರಕಾರಿ ಕೊಳ್ಳಲು ಜನ ಮುಗಿ ಬೀಳುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಸೆಂಟ್ರಲ್ ಮಾರ್ಕೆಟ್‌ನಂತಾಗಿ ಬಿಡುತ್ತದೆ.

    ಈ ಬೀದಿ ವ್ಯಾಪಾರಿಗಳಿಂದ ವಾಹನ ಸಂಚಾರ, ಜನ ಸಂಚಾರಕ್ಕೆ ಅಡ್ಡಿಯಾಗುವುದರ ಜತೆಗೆ ಪುರಸಭೆಗೆ ತೆರಿಗೆ ಪಾವತಿಸಿ ಅಂಗಡಿಗಳಲ್ಲಿ ತರಕಾರಿ, ದಿನಸಿ ಮಾರುವ ವ್ಯಾಪಾರಿಗಳಿಗೂ ಹೊಡೆತ ಬೀಳುತ್ತಿದೆ. ಪುರಸಭೆ ಹಲವು ಬಾರಿ ಅನಧಿಕೃತವಾಗಿ ಬೀದಿ ವ್ಯಾಪಾರ ಮಾಡುವವರನ್ನು ತೆರವುಗೊಳಿಸುವ ಪ್ರಯತ್ನ ನಡೆಸಿದೆ. ಆದರೆ ಕೆಲದಿನಗಳಲ್ಲಿ ಮತ್ತೆ ಅದೇ ಸ್ಥಳದಲ್ಲಿ ಬೀದಿ ವ್ಯಾಪಾರ ಆರಂಭಗೊಳ್ಳುತ್ತದೆ. ಮತ್ತೆ ಅದೇ ಸಮಸ್ಯೆ ಮರುಕಳಿಸುತ್ತದೆ. ರಸ್ತೆಗೆ ತಾಗಿಕೊಂಡೇ ಬೀದಿ ವ್ಯಾಪಾರ ಮಾಡುವುದರಿಂದ ವಾಹನ ಸಂಚಾರಕ್ಕೆ ತೊಡಕಾಗುವ ನಿಟ್ಟಿನಲ್ಲಿ ಈ ಹಿಂದೆ ಬಂಟ್ವಾಳ ಪೊಲೀಸರು ರಸ್ತೆ ಬದಿ ವ್ಯಾಪಾರ ನಡೆಸದಂತೆ ಬ್ಯಾರಿಕೇಡ್ ಇಟ್ಟು ಬ್ಯಾನರ್ ಬರಹವನ್ನೂ ಹಾಕಿದ್ದರು. ಬ್ಯಾನರ್ ತೆರವುಗೊಳಿಸಿದ ಬಳಿಕ ಮತ್ತೆ ಬೀದಿ ವ್ಯಾಪಾರ ಶುರುವಾಗಿದೆ.

    ಬೇಕಿದೆ ಸಂತೆ ಮಾರುಕಟ್ಟೆ
    ಎಷ್ಟು ಬಾರಿ ತೆರವುಗೊಳಿಸಿದರೂ ಮತ್ತೆ ಮತ್ತೆ ರಸ್ತೆ ಬದಿ ವ್ಯಾಪಾರ ಆರಂಭಿಸುವ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವುದೇ ಪುರಸಭೆಗೆ ಸವಾಲು. ನಾವು ಬಡವರು, ನಮ್ಮ ಹೊಟ್ಟೆಗೆ ಹೊಡಿಬೇಡಿ ಎಂದು ಜನಪ್ರತಿನಿಧಿಗಳು, ಅಧಿಕಾರಿಗಳ ಮುಂದೆ ಅನುಕಂಪ ಗಿಟ್ಟಿಸಿಕೊಳ್ಳುವ ಬೀದಿ ವ್ಯಾಪಾರಿಗಳಿಂದ ನಗರದ ಸ್ವಚ್ಛತೆಗೂ ತೊಂದರೆಯಾಗುತ್ತಿದೆ. ವ್ಯಾಪಾರದ ಬಳಿಕ ತರಕಾರಿಯ ವ್ಯರ್ಥ ಪದಾರ್ಥಗಳನ್ನು ರಸ್ತೆ ಬದಿಯೇ ಎಸೆದು ಹೋಗುತ್ತಾರೆ. ಅಂಗಡಿದಾರರು ಪುರಸಭೆಗೆ ತೆರಿಗೆ ಹಾಗೂ ಕಸದ ಶುಲ್ಕ ಪಾವತಿಸಿದರೆ ಬೀದಿ ವ್ಯಾಪಾರಿಗಳಿಗೆ ಮಾರಾಟಕ್ಕೆ ಸ್ಥಳವೂ ಉಚಿತ, ಕಸದ ಶುಲ್ಕವೂ ಇಲ್ಲ. ಬೀದಿ ವ್ಯಾಪಾರಿಗಳಿಗೆಂದೇ ನಿಗದಿತ ಸ್ಥಳದಲ್ಲಿ ಪ್ರತ್ಯೇಕ ಸಂತೆ ಮಾರುಕಟ್ಟೆ ನಿರ್ಮಾಣದ ಬೇಡಿಕೆ ಈ ಹಿಂದಿನಿಂದಲೂ ಕೇಳಿಬರುತ್ತಿದೆ. ಬಿ.ಸಿ.ರೋಡ್ ಸುಂದರೀಕರಣ ಸಂದರ್ಭ ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಪ್ರತ್ಯೇಕ ಸಂತೆ ಮಾರುಕಟ್ಟೆ ನಿರ್ಮಿಸುವುದಾಗಿ ಶಾಸಕ ರಾಜೇಶ್ ನಾಕ್ ತಿಳಿಸಿದ್ದರು. ಆದರೆ ಸುಂದರೀಕರಣ ಆಗುವವರೆಗೆ ಬೀದಿ ವ್ಯಾಪಾರಿಗಳಿಂದ ನಗರದ ಅಂದ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ.

     

    ಬಿ.ಸಿ.ರೋಡಿನ ಮೇಲ್ಸೆತುವೆಯ ಅಡಿಭಾಗದಲ್ಲಿದ್ದ ಬೀದಿ ವ್ಯಾಪಾರ ಈಗ ರಸ್ತೆ ಅಂಚಿಗೆ ಬಂದಿದೆ. ಮಹಿಳೆಯರು ಸಣ್ಣ ಮಕ್ಕಳನ್ನು ಹಿಡಿದುಕೊಂಡು ತರಕಾರಿ, ದಿನಸಿ ಕೊಳ್ಳಲು ಬರುತ್ತಾರೆ. ಮಕ್ಕಳನ್ನು ಬಿಟ್ಟು ತರಕಾರಿ ಕೊಳ್ಳುವಾಗ ಮಕ್ಕಳು ಆಚೀಚೆ ನೋಡದೆ ಹೆದ್ದಾರಿಗೆ ಓಡುತ್ತಾರೆ. ಈ ಸಂದರ್ಭ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ? ಬೀದಿ ವ್ಯಾಪಾರಿಗಳ ವಿರುದ್ಧ ಕ್ರಮ ಜರುಗಿಸಬೇಕಾದ ಪೊಲೀಸರು, ಪುರಸಭೆಯವರು ಇಲ್ಲಿಂದಲೇ ತರಕಾರಿ ಕೊಂಡೊಯ್ಯುತ್ತಿದ್ದಾರೆ. ಇದಕ್ಕೊಂದು ಸರಿಯಾದ ವ್ಯವಸ್ಥೆ ಇಲ್ಲವೇ?
    ಪ್ರಭಾಕರ ದೈವಗುಡ್ಡೆ, ಸಾಮಾಜಿಕ ಕಾರ್ಯಕರ್ತ, ಬಿ.ಸಿ.ರೋಡು

    ರಸ್ತೆ ಬದಿ ತರಕಾರಿ ಮಾರಾಟ ಮಾಡುವುದರಿಂದ ವಾಹನ ಸಂಚಾರ ಹಾಗೂ ಜನ ಸಂಚಾರಕ್ಕೆ ತೊಂದರೆಯಾಗುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಬದಿ ವ್ಯಾಪಾರ ನಡೆಸದಂತೆ ಬೀದಿ ವ್ಯಾಪಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸುವ ಮೂಲಕ ಬೀದಿಬದಿ ಹಾಗೂ ಇನ್ನಿತರ ವ್ಯಾಪರಿಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚಿಂತನೆ ಇದೆ. ಲೀನಾಬ್ರಿಟ್ಟೋ, ಮುಖ್ಯಾಧಿಕಾರಿ ಪುರಸಭೆ ಬಂಟ್ವಾಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts