More

    ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಅಪಾರ ಬೆಳೆ ಹಾನಿ

    ದೇವದುರ್ಗ: ತಾಲೂಕಿನಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯಿಂದ ರೈತರು ಕಂಗಾಲಾಗಿದ್ದು, ಹಿಂಗಾರು ಹಂಗಾಮಿನ ಬೆಳೆಗಳು ವರುಣನ ಅವಕೃಪೆಗೆ ಒಳಗಾಗಿವೆ. ಜಮೀನುಗಳಲ್ಲಿ ಒಣಗಲು ಹಾಕಿದ್ದ ಭತ್ತ, ಮೆಣಸಿನಕಾಯಿ ರಾಶಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.

    ಅಕಾಲಿಕ ಮಳೆಯಿಂದ ರಾಶಿ ಮಾಡಿದ, ರಾಶಿ ಹಂತಕ್ಕೆ ಬಂದ ಬೆಳೆಗಳಿಗೆ ಹೊಡೆತ ಬಿದ್ದಿದೆ. ಡಿಸೆಂಬರ್‌ನಲ್ಲಿ ನಾಟಿ ಮಾಡಿದ್ದ ಭತ್ತದ ಬೆಳೆಗಳು ಸದ್ಯ ರಾಶಿ ಮಾಡಲಾಗುತ್ತಿದ್ದು ತಡವಾಗಿ ನಾಟಿಮಾಡಿದ ಭತ್ತ ಇನ್ನೂ ಕಟಾವು ಆಗಬೇಕಿದೆ. ಬಿರುಗಾಳಿ ಸಹಿತ ಮಳೆಯಿಂದ ಭತ್ತದ ಫಸಲು ನೆಲಕ್ಕುರುಳಿದ್ದು, ಒಂದೂವರೆ ತಿಂಗಳಿನಿಂದ ರಾಶಿ ಮಾಡಿ ಸಂಗ್ರಹಿಸಿದ್ದ ಮೆಣಸಿನಕಾಯಿಗೂ ಮಳೆ ಹೊಡೆತ ನೀಡಿದೆ.

    ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರಿನಿಂದ ತಾಲೂಕಿನಲ್ಲಿ 20 ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಬಿಡಿಸಿ ಒಣಗಲು ಹಾಕಿದ್ದ ಮೆಣಸಿನಕಾಯಿ ರಾಶಿ ಕಣಕ್ಕೆ ನೀರು ನುಗ್ಗಿ ರೈತರಿಗೆ ಬರೆ ಎಳೆದಿದೆ. ಇನ್ನು ಕೆಲವು ಕಡೆ ಬಿಳಿಕಾಯಿ ಆರಿಸಲು ಒಣಗಲು ಹಾಕಿದ್ದ, ಕಣದತುಂಬ ಹರಡಿಸಿದ್ದ ಮೆಣಸಿನಕಾಯಿ ನೀರು ನುಗ್ಗಿ ಹಾನಿಗೊಳಗಾಗಿದೆ.

    ಬೆಲೆ ಕುಸಿಯುವ ಭೀತಿ:

    ಒಂದೆಡೆ ಪ್ರಕೃತಿ ವಿಕೋಪ, ಇನ್ನೊಂದೆಡೆ ಬೆಲೆ ಇಳಿಕೆಗೆ ಅಕ್ಷರಶಃ ನಲುಗಿದ ರೈತರು ಮಗದೊಂದು ಕಡೆ ರಾಶಿ ಮಾಡಿದ ಭತ್ತ ಖರೀದಿ ಇಲ್ಲದೆ ಕಂಗಲಾಗಿದ್ದಾರೆ. ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಸರ್ಕಾರಕ್ಕೆ ರೈತರು ಹಲವು ಸಲ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ. ಇದರಿಂದ ರಾಶಿ ಮಾಡಿದ ಭತ್ತ ಖಾಲಿಜಾಗದಲ್ಲಿ ಸಂಗ್ರಹಿಸುತ್ತಿದ್ದಾರೆ. ಇನ್ನೊಂದು ಖಾಸಗಿ ವ್ಯಾಪಾರಿಗಳು ವಂಚನೆ ಮಾಡುತ್ತಿರುವ ಕಾರಣ ಭತ್ತ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

    ಇದನ್ನೂ ಓದಿ:Web Exclusive: ಬಿಳಿ ‘ಸೋನಾ’ಕ್ಕಿಲ್ಲ ಯೋಗ್ಯ ಬೆಲೆ; ಕರೊನಾದಿಂದಾಗಿ ಭತ್ತದ ಧಾರಣೆ ಕುಸಿತ

    ಮೆಣಸಿನಕಾಯಿ ಮಳೆಗೆ ತೊಯ್ದಿದ್ದರಿಂದ ಬೆಲೆ ಕುಸಿಯುವ ಭೀತಿ ಎದುರಾಗಿದೆ. ಸಾಮಾನ್ಯ ಬೆಳೆಗಳು ಒಂದೆರಡು ದಿನಗಳಲ್ಲಿ ರಾಶಿ ಮಾಡಬಹುದು. ಮೆಣಸಿನಕಾಯಿ ಬೆಳೆ ರಾಶಿ ಮಾಡಲು ಕನಿಷ್ಠ 20-25ದಿನ ಹಿಡಿಯುತ್ತದೆ. ಕಾಯಿ ಬಿಡಿಸಿದ ನಂತರ ಒಣಗಲು ಹಾಕಿ, ಒಣಗಿದ ಕಾಯಿಗಳಲ್ಲಿ ಬಿಳಿಕಾಯಿ ಆರಿಸಿ ತೆಗೆದು ಬೇರ್ಪಡಿಸಬೇಕು. ಇದಕ್ಕೆ ಸಮಯ, ಜಾಗ, ಕೂಲಿಕಾರರು ಹೆಚ್ಚುಬೇಕು. ಬಹುತೇಕ ರೈತರು ಕಾಯಿಬಿಡಿಸಿ ಒಣಗಲು ಹಾಕಿದ್ದಾರೆ. ಮಳೆ ಬಂದಿದ್ದರಿಂದ ಕಾಯಿಗಳು ತೊಯ್ದು ಹಾಳಾಗಿದ್ದರೆ, ಕೆಲವು ಬಿಳಿಕಾಯಿ ಆಗುತ್ತಿವೆ. ಸಧ್ಯಪ್ರತಿ ಕ್ವಿಂಟಾಲ್‌ಗೆ 12ರಿಂದ 15ಸಾವಿರ ರೂ. ಬೆಲೆಯಿದ್ದು ಮಳೆ ಬಂದ ಕಾರಣ ಬೆಳೆತೊಯ್ದು ಬೆಲೆ ಇಳಿಯುವ ಭೀತಿ ರೈತರಿಗೆ ಕಾಡುತ್ತಿದೆ. ಭತ್ತಕ್ಕೆ ಉತ್ತಮ ಬೆಲೆಯಿದ್ದರೂ ಮಳೆಯಿಂದ ತೊಯ್ದರೆ ಕಂದುಬಂದು ಬೆಲೆ ಕುಸಿಯಲಿದೆ.

    ಪ್ರತಿಎಕರೆಗೆ 25-30ಸಾವಿರ ರೂ. ಖರ್ಚು ಮಾಡಿ ಭತ್ತ ಬೆಳೆದಿದ್ದು, ಶುಕ್ರವಾರ ಧಾರಾಕಾರ ಮಳೆ ಸುರಿದ ರಾಶಿಗೆ ನೀರು ನುಗ್ಗಿವೆ. ಒಣಗಲು ಹಾಕಿದ್ದ ಮೆಣಸಿನಕಾಯಿ ಕೂಡ ಮಳೆಗೆ ಹಾಳಾಗಿವೆ. ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆಯಲು ಮೀನಮೇಷ ಎಣಿಸುತ್ತಿದೆ. ಅಧಿಕಾರಿಗಳಿಗೆ ಹೇಳಿದರೆ ನಮಗೂ ಅದಕ್ಕೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ.
    ಶಿವಕುಮಾರ ಪಾಟೀಲ್
    ಕಕ್ಕಲದೊಡ್ಡಿ ರೈತ

    ಕೋಟ್=====

    ಅಕಾಲಿಕ ಮಳೆ ಅತಿಯಾಗಿ ಬಂದು, ತುಂಬ ನಷ್ಟವಾದರೆ ಮಾತ್ರ ಸರ್ಕಾರದಿಂದ ಪರಿಹಾರ ನೀಡಬಹುದು. ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದಿದೆ. ಸಂಬಂಧಿಸಿದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ವೇ ಮಾಡಲು ತಿಳಿಸಲಾಗಿದೆ. ಹಾನಿಯಾದ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುತ್ತೇವೆ.
    ಶ್ರೀನಿವಾಸ್ ಚಾಪೇಲ್ ಗ್ರೇಡ್-2 ತಹಸೀಲ್ದಾರ್

    ಪೇಚಿಗೆ ಸಿಲುಕಿದ ಅನ್ನದಾತರು

    ಸಿರವಾರ: ತಾಲೂಕಿನಲ್ಲಿ ಶುಕ್ರವಾರ ಸುರಿದ ಅಕಾಲಿಕ ಮಳೆಯಿಂದ ಭತ್ತದ ರಾಶಿಗೆ ನೀರು ನುಗ್ಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತುಂಗಭದ್ರ ಎಡದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ನೂರಾರು ಎಕರೆಯಲ್ಲಿ ಬೆಳೆದ ಭತ್ತದ ಬೆಳೆಯು ಉತ್ತಮ ಇಳುವರಿಯೊಂದಿಗೆ ಕಟಾವು ಮಾಡಲಾಗಿದೆ. ಕಟಾವು ಮಾಡಿದ ಭತ್ತವನ್ನು ಇನ್ನೇನು ಚೀಲದಲ್ಲಿ ತುಂಬಬೇಕು ಎನ್ನುವಷ್ಟರಲ್ಲಿ ರೈತರಿಗೆ ಸಂಕಷ್ಟ ಎದುರಾಗಿದೆ. ಭತ್ತ ನಾಟಿ ಮಾಡಿದಾಗಿನಿಂದ ಕಟಾವಿನವರೆಗೂ ಯಾವುದೇ ತೊಂದರೆ ಅನುಭವಿಸದ ರೈತರು ಕೊನೆಗೆ ಘಳಿಗೆಯಲ್ಲಿ ಪೇಚಿಗೆ ಸಿಲುಕಿದ್ದಾರೆ.

    ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಅಪಾರ ಬೆಳೆ ಹಾನಿ

    ಲೇಕಿಂಚೇರಿಯಲ್ಲಿ ಹಾರಿಹೋದ ಟಿನ್‌ಗಳು

    ಹಟ್ಟಿಚಿನ್ನದಗಣಿ: ಬಿರುಗಾಳಿ, ಮಳೆಯಿಂದ ತಾಲೂಕಿನಾದ್ಯಂತ ಗಿಡ-ಮರಗಳು ಉರುಳಿ ಬಿದ್ದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಬಿರುಗಾಳಿಗೆ ಕೆಲ ಮನೆಗಳ ಟಿನ್‌ಗಳು ಹಾರಿ ಹೋಗಿದ್ದು, ಕೆಲ ಬೈಕ್-ಕಾರುಗಳ ಮೇಲೆ ಮರಬಿದ್ದಿದ್ದು ಜಖಂಗೊಂಡಿವೆ. ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹಟ್ಟಿಚಿನ್ನದಗಣಿಗೆ ಸಮೀಪದ ಲೇಕಿಂಚೇರಿ ಬಳಿಯ ನೀರಿನ ದೊಡ್ಡಿಯ ಅಂಬವ್ವ ಸಣ್ಣ ಹನುಮಂತ ಎನ್ನುವವರ ಮನೆಯ ಮೇಲ್ಛಾವಣಿ ಶನಿವಾರ ಕುಸಿದಿದ್ದು, ಮನೆ ಮುಂಭಾಗದ ಟಿನ್‌ಗಳು ಹಾರಿಹೋಗಿವೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts