More

    ಆರ್‌ಬಿಐ ಬಡ್ಡಿ ದರ ನೀತಿಗೆ ನೀರಸವಾಗಿ ಪ್ರತಿಕ್ರಿಯಿಸಿದ ಪೇರುಪೇಟೆ: ಸೂಚ್ಯಂಕ ಅಲ್ಪ ಏರಿಕೆ ಕಂಡರೂ ಸೃಷ್ಟಿಯಾಯಿತು ಹೊಸ ದಾಖಲೆ

    ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿನ ಋಣಾತ್ಮಕ ಪ್ರವೃತ್ತಿ ಹಾಗೂ ರಿಸರ್ವ್ ಬ್ಯಾಂಕ್ ಪ್ರಮುಖ ಬಡ್ಡಿ ದರಗಳ ಮೇಲೆ ಯಥಾಸ್ಥಿತಿ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಅಲ್ಪ ಲಾಭವನ್ನು ದಾಖಲಿಸಿವೆ.

    ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್‌ಬಿಐ) 6 ಸದಸ್ಯರ ದರ-ನಿಗದೀಕರಣ ಸಮಿತಿಯು ಶುಕ್ರವಾರ ಬೆಂಚ್‌ಮಾರ್ಕ್ ಬಡ್ಡಿದರಗಳಲ್ಲಿ ಸತತ ಏಳನೇ ಬಾರಿಗೆ ಯಾವುದೇ ಬದಲಾವಣೆ ಮಾಡದೆ, ಶೇಕಡಾ 6.5ರ ದರದಲ್ಲಿ ಮುಂದುವರಿಸಿತು.

    ಏಪ್ರಿಲ್-ಜೂನ್ ಅವಧಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನದ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿರುವುದು ಆಹಾರ ಹಣದುಬ್ಬರದ ಬಗ್ಗೆ ಆತಂಕವನ್ನುಂಟು ಮಾಡಿದೆ.

    30 ಷೇರುಗಳ ಬಿಎಸ್‌ಇ ಸೂಚ್ಯಂಕ 20.59 ಅಂಕಗಳು ಅಥವಾ ಶೇಕಡಾ 0.03 ರಷ್ಟು ಏರಿಕೆ ಕಂಡು 74,248.22 ಕ್ಕೆ ಸ್ಥಿರವಾಯಿತು. ಇದು ಸೂಚ್ಯಂಕದ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಇಂಟ್ರಾ ಡೇ ವಹಿವಾಟಿನದಲ್ಲಿ ಸೂಚ್ಯಂಕವು ಗರಿಷ್ಠ 74,361.11 ಮತ್ತು ಕನಿಷ್ಠ 73,946.92 ರ ನಡುವೆ ಓಲಾಡಿತು.

    ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 0.95 ಪಾಯಿಂಟ್‌ಗಳ ಅಲ್ಪ ಏರಿಕೆಯೊಂದಿಗೆ 22,513.70 ಕ್ಕೆ ತಲುಪಿತು. 50-ಷೇರುಗಳ ಈ ಬೆಂಚ್‌ಮಾರ್ಕ್‌ ಸೂಚ್ಯಂಕದಲ್ಲಿನ 28 ಷೇರುಗಳ ಬೆಲೆ ಕುಸಿತ ಕಂಡವು.

    “ಆರ್‌ಬಿಐ ನೀತಿ ಸಭೆಯು ನಿರೀಕ್ಷಿತ ರೀತಿಯಲ್ಲಿ ತೆರೆದುಕೊಂಡಿದ್ದರೂ, ಆಹಾರ ಹಣದುಬ್ಬರದ ಮೇಲಿನ ಆತಂಕಗಳು ಮತ್ತು ಬಿಸಿ ಅಲೆಯ ಎಚ್ಚರಿಕೆಗಳು ಭಾವನೆಯನ್ನು ಹಾಳು ಮಾಡಿದವು” ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

    ಪ್ರಮುಖ ಷೇರುಗಳ ಪೈಕಿ, ಅಲ್ಟ್ರಾಟೆಕ್ ಸಿಮೆಂಟ್, ಎಲ್ & ಟಿ, ಭಾರ್ತಿ ಏರ್‌ಟೆಲ್, ಬಜಾಜ್ ಫೈನಾನ್ಸ್ ಮತ್ತು ಟೆಕ್ ಮಹೀಂದ್ರಾ ಸೇರಿ 18 ಷೇರುಗಳು ನಷ್ಟ ಅನುಭವಿಸಿದವು. ಏಷ್ಯನ್ ಪೇಂಟ್ಸ್, ಮಾರುತಿ, ಟೈಟಾನ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್‌ನಂತಹ ಪ್ರಮುಖ ಷೇರುಗಳು ಕೂಡ ಭಾರೀ ಮಾರಾಟವನ್ನು ಕಂಡು ಬೆಲೆ ಕುಸಿತ ಅನುಭವಿಸಿದವು. ಇದಕ್ಕೆ ವ್ಯತಿರಿಕ್ತವಾಗಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಟಿಸಿ ಮತ್ತು ಎಸ್‌ಬಿಐ ಲಾಭ ಗಳಿಸಿದವು.

    ಬಿಎಸ್‌ಇ ಲಾರ್ಜ್‌ಕ್ಯಾಪ್ ಸೂಚ್ಯಂಕ ಶೇ.0.15ರಷ್ಟು ಏರಿಕೆ ಕಂಡರೆ, ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇ.0.50ರಷ್ಟು ಏರಿಕೆ ಕಂಡಿವೆ.

    ಏಷ್ಯಾದ ಮಾರುಕಟ್ಟೆಗಳು ಕುಸಿತ ಕಂಡವು. ಜಪಾನ್‌ನ ನಿಕ್ಕಿ 225 ಶೇಕಡಾ 1.96 ಮತ್ತು ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಶೇಕಡಾ 0.01 ರಷ್ಟು ಕುಸಿದಿದೆ. ದಕ್ಷಿಣ ಕೊರಿಯಾ ಸೂಚ್ಯಂಕ ಕೊಸ್ಪಿ ಶೇ. 1.01ರಷ್ಟು ಕುಸಿದಿದೆ. ಐರೋಪ್ಯ ಮಾರುಕಟ್ಟೆಗಳು ನಷ್ಟದಲ್ಲಿ ವಹಿವಾಟು ನಡೆಸಿದವು. ಜರ್ಮನಿಯ DAX ಮತ್ತು ಲಂಡನ್‌ನ FTSE 100 ಅನುಕ್ರಮವಾಗಿ ಶೇಕಡಾ 1.57 ಮತ್ತು 0.90 ಶೇಕಡಾ ಕಳೆದುಕೊಂಡರೆ, ಫ್ರಾನ್ಸ್‌ನ CAC40 ಶೇಕಡಾ 1.36 ರಷ್ಟು ಕಡಿಮೆಯಾಗಿದೆ. ಗುರುವಾರ ರಾತ್ರಿಯ ವಹಿವಾಟಿನಲ್ಲಿ ಅಮೆರಿಕ ಮಾರುಕಟ್ಟೆಗಳು ಬಹುತೇಕವಾಗಿ ಹಿನ್ನಡೆ ಕಂಡವು.

    “ತೈಲ ಬೆಲೆಗಳು ಮತ್ತು ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಗಳ ಏರಿಕೆಯಿಂದ ಜಾಗತಿಕ ಭಾವನೆಯು ಕುಗ್ಗಿದೆ. ಹೂಡಿಕೆದಾರರು ಮುಂಬರುವ ಅಮೆರಿಕ ಕೃಷಿಯೇತರ ವೇತನದಾರರ ಮತ್ತು ನಿರುದ್ಯೋಗ ದತ್ತಾಂಶಗಳತ್ತ ಗಮನಹರಿಸುತ್ತಾರೆ. ಅಮೆರಿಕ ಫೆಡರಲ್ ರಿಸರ್ವ್‌ನ ಭವಿಷ್ಯದ ಬಡ್ಡಿ ದರದ ಹಾದಿಯಲ್ಲಿ ಸ್ಪಷ್ಟತೆಯನ್ನು ಬಯಸುತ್ತಾರೆ,” ನಾಯರ್ ಹೇಳಿದರು.

    ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಗುರುವಾರ 1,136.47 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.

    ಗುರುವಾರ, ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕ 350.81 ಅಂಕಗಳು ಅಥವಾ ಶೇಕಡಾ 0.47 ರಷ್ಟು ಏರಿಕೆಯಾಗಿ ಜೀವಿತಾವಧಿಯ ಗರಿಷ್ಠ ಮಟ್ಟವಾದ 74,227.63 ಅಂಕಗಳಿಗೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ ಕೂಡ 80 ಅಂಕಗಳು ಅಥವಾ ಶೇಕಡಾ 0.36 ರಷ್ಟು ಏರಿಕೆಯಾಗಿ 22,514.65 ರ ಹೊಸ ಗರಿಷ್ಠ ಮಟ್ಟವನ್ನು ತಲುಪಿತ್ತು.

    ಷೇರು ಪಾಲು ಮಾರಾಟ ಮಾಡಿದ ಎಚ್​ಡಿಎಫ್​ಸಿ ಬ್ಯಾಂಕ್​: ವೈದ್ಯಕೀಯ ಸೇವಾ ಕಂಪನಿಯ ಸ್ಟಾಕ್​ ಬೆಲೆ ಒಂದೇ ದಿನದಲ್ಲಿ 20% ಏರಿದ್ದೇಕೆ?

    7 ದಿನಗಳಲ್ಲಿ ಷೇರು ಬೆಲೆ 9% ಏರಿಕೆ; ಈ ಬ್ಯಾಂಕಿಂಗ್ ಸ್ಟಾಕ್‌ ಕೆಟ್ಟ ಗಳಿಗೆ ಮುಗಿದಿದೆಯೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts