More

    ಶರೀರದ ನಿಶ್ಚಲತೆ- ಮನಸ್ಸಿನ ಪ್ರಶಾಂತತೆಗೆ ಪದ್ಮಾಸನ

    Yogakshemaದೇಹವು ಕೆಲವು ಕಾಲದವರೆಗೆ ಸ್ಥಿರವಾಗಿ ಹಾಗೂ ನಿಶ್ಚಲವಾಗಿದ್ದರೆ ಮಾತ್ರ ಧ್ಯಾನದ ಅನುಭವವನ್ನು ಪಡೆಯಬಹುದು. ಗಾಢವಾದ ಧ್ಯಾನಕ್ಕೆ ಬೆನ್ನೆಲುಬು ನೆಟ್ಟಗಿರಬೇಕಾದ್ದು ಅಗತ್ಯ. ಈ ಸ್ಥಿತಿಗೆ ಪೂರಕವಾದಂಥ ಆಸನಗಳು ಕೆಲವು ಮಾತ್ರ ಇವೆ. ನಿರಾಯಾಸವಾಗಿ ಸ್ವಪ್ರಯತ್ನವಿಲ್ಲದೆಯೇ ಧ್ಯಾನಾಸನಗಳಲ್ಲಿ ನಿಶ್ಚಲತ್ವವನ್ನು ಪಡೆಯಬೇಕಾಗುತ್ತದೆ. ಆಸನ ಮತ್ತು ಧ್ಯಾನವನ್ನು ಕುರಿತು ಹೃಷಿಕೇಶದ ಸ್ವಾಮಿ ಶಿವಾನಂದರು ಹೀಗೆ ಹೇಳುತ್ತಾರೆ:

    ‘ನಿರಂತರವಾಗಿ ಒಂದೇ ಸ್ಥಿತಿಯಲ್ಲಿ ಕನಿಷ್ಠ ಎರಡು ಗಂಟೆಗಳ ಕಾಲ ಸ್ಥಿರವಾಗಿ ಕುಳಿತುಕೊಳ್ಳಲು ಸಮರ್ಥವಾಗಿರಬೇಕು. ಆಗ ಮಾತ್ರವೇ ನಿಜವಾದ ಆಸನಸಿದ್ಧಿ. ಆಸನಗಳ ನಿಪುಣತೆ ಲಭಿಸುತ್ತದೆ, ಮನಸ್ಸಿನ ಏಕಾಗ್ರತೆ ಸಾಧ್ಯವಾಗುತ್ತದೆ ಮತ್ತು ಆತ್ಮಾನಂದದ ಅನುಭವವಾಗುತ್ತದೆ. ಶಾಂತಿ ದೊರಕುತ್ತದೆ.’

    ಮುನ್ನೆಚ್ಚರಿಕೆಗಳು: ಧ್ಯಾನಾಸನದಲ್ಲಿ ಕೆಲವು ಕಾಲ ಕುಳಿತ ನಂತರ ಕಾಲುಗಳಿಗೆ ತುಂಬಾ ತೊಂದರೆ ಎನಿಸಿದರೆ ಅಥವಾ ತುಂಬಾ ನೋವಾದರೆ ನಿಧಾನವಾಗಿ ಕಾಲನ್ನು ಬಿಡಿಸಿಕೊಂಡು ನೀವಿಕೊಳ್ಳಿ. ಧ್ಯಾನಾಸನಗಳನ್ನು ಮಾಡುತ್ತಿರುವಾಗ ಅಥವಾ ಈ ಆಸನಗಳನ್ನು ಮುಕ್ತಾಯಗೊಳಿಸುತ್ತಿರುವಾಗ ಮೊಣಕಾಲಿನ ಮೇಲೆ ಒತ್ತಡವಾಗದಂತೆ ಗಮನಿಸಿ. ಧ್ಯಾನದ ಆಸನದಲ್ಲಿ ಕುಳಿತುಕೊಳ್ಳಲು ಅನಗತ್ಯ ಪ್ರಯಾಸವಾಗಲಿ, ಬಲವಂತವಾಗಲಿ ಸಲ್ಲದು.

    ಅಭ್ಯಾಸ ಸೂಚನೆ: ಈ ಆಸನ ಹಿತವಾಗುವಂತೆ ಮಾಡುವ ಒಂದು ಉಪಾಯವೆಂದರೆ ಒಂದು ಚಿಕ್ಕ ಮೆತ್ತೆಯ ಮೇಲೆ ಕುಳಿತು ಆಸನಗಳನ್ನು ಮಾಡುವುದು. ಕಮಲದ ಭಂಗಿ ಅಭ್ಯಾಸ ಕ್ರಮ ಕಮಲವನ್ನು ಹೋಲುವ ಆಸನ ಪದ್ಮಾಸನ.

    ಮಾಡುವ ವಿಧಾನ ಹೀಗಿದೆ: ಕಾಲನ್ನು ಮುಂದಕ್ಕೆ ಚಾಚಿ ಕುಳಿತುಕೊಳ್ಳಿ. ಒಂದು ಕಾಲನ್ನು ನಿಧಾನವಾಗಿ ಮಡಿಸಿ ಅದರ ಪಾದವನ್ನು ಪಕ್ಕದ ತೊಡೆಯ ಮೇಲಿಡಿ. ಈ ಕಾಲಿನ ಅಂಗಾಲು ಮೆಲ್ಮುಖವಾಗಿರಲಿ ಮತ್ತು ಅದರ ಹಿಮ್ಮಡಿ ಪ್ಯೂಬಿಕ್ ಎಲುಬಿಗೆ ಹತ್ತಿರವಾಗಿರಲಿ. ಇದು ಸರಿಯಾಗಿದೆ ಅನ್ನಿಸಿದ ನಂತರ ಇನ್ನೊಂದು ಕಾಲನ್ನು ಇದೇ ರೀತಿ ಪಕ್ಕದ ತೊಡೆಯ ಮೇಲಿಡಿ. ಕೊನೆಯಲ್ಲಿ ಎರಡೂ ಮಂಡಿಗಳು ನೆಲಕ್ಕೆ ತಾಗಿರಲಿ. ತಲೆ ಮತ್ತು ಬೆನ್ನು ನೆಟ್ಟಗಿರಲಿ. ಭುಜಗಳು ಸಡಿಲವಾಗಿರಲಿ. ಕೈಗಳನ್ನು ಮೊಣಕಾಲುಗಳ ಮೇಲೆ ಜ್ಞಾನ ಮುದ್ರೆ, ಚಿನ್ಮುದ್ರೆ ಅಥವಾ ಭೈರವ ಮುದ್ರೆಯಲ್ಲಿ ಇಟ್ಟುಕೊಳ್ಳಿ. ತೋಳುಗಳಲ್ಲಿ ಯಾವುದೇ ಬಿಗಿ ಇಲ್ಲದಿರಲಿ. ಮೊಣಕೈಗಳು ಸ್ವಲ್ಪ ಬಾಗಿರಲಿ. ಭುಜಗಳನ್ನು ಎತ್ತರಿಸಬಾರದು ಅಥವಾ ಮುಂದಕ್ಕೆ ಬಾಗಿಸಬಾರದು. ಕಣ್ಣು ಮುಚ್ಚಿಕೊಂಡು, ಇಡೀ ದೇಹವನ್ನು ಸಡಿಲಬಿಡಿ.

    ವಿಧಿ ನಿಷೇಧಗಳು: ಸಯಾಟಿಕ, ಸೇಕ್ರಲ್ ಸೋಂಕುಗಳು ಅಥವಾ ಮೊಣಕಾಲು ದುರ್ಬಲ ಇಲ್ಲವೇ ಗಾಯವಾಗಿರುವಂಥವರು ಈ ಆಸನವನ್ನು ಮಾಡಬಾರದು. ಧ್ಯಾನಪೂರ್ವಾಸನಗಳನ್ನು ಮಾಡುವ ಮೂಲಕ ಮೊಣಕಾಲುಗಳು ಹೇಗೆ ಬೇಕೋ ಹಾಗೆ ಮಣಿಯುವಂತಾಗುವವರೆಗೆ ಪದ್ಮಾಸನಕ್ಕೆ ತೊಡಗಬಾರದು.

    ಪ್ರಯೋಜನಗಳು: ಪದ್ಮಾಸನದಿಂದ ದೀರ್ಘಕಾಲದವರೆಗೆ ದೇಹವನ್ನು ಸ್ಥಿರವಾಗಿಸಲು ಸಾಧ್ಯವಾಗುತ್ತದೆ. ಈ ಆಸನವು ಕಾಲುಗಳ ಸುಭದ್ರ ತಳಪಾಯದ ಮೇಲೆ ಮೈ ಮತ್ತು ತಲೆಯ ಭಾಗವನ್ನು ಕಂಬದಂತೆ ಎತ್ತಿಹಿಡಿಯುತ್ತದೆ. ದೇಹವು ನಿಶ್ಚಲವಾಗಿರುವುದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಈ ನಿಶ್ಚಲತೆ ಮತ್ತು ಪ್ರಶಾಂತತೆಗಳು ನಿಜವಾದ ಧ್ಯಾನದ ಮೊದಲ ಹಂತ. ಪದ್ಮಾಸನವು ಪೆರಿನಿಯಂನಲ್ಲಿರುವ ಮೂಲಾಧಾರ ಚಕ್ರದಿಂದ ಶಿರದಲ್ಲಿರುವ ಸಹಸ್ರಾರ ಚಕ್ರದವರೆಗೆ ಪ್ರಾಣವು ನಿರಾಳವಾಗಿ ಸಂಚರಿಸುವಂತೆ ಮಾಡುತ್ತದೆ. ಇದು ಧ್ಯಾನದ ಉನ್ನತ ಅನುಭವವನ್ನು ನೀಡುತ್ತದೆ. ಪದ್ಮಾಸನದ ಭಂಗಿಯು ಬೆನ್ನುಮೂಳೆಯ ಆಧಾರ ಭಾಗದ ಮೇಲೆ ಒತ್ತಡ ಹಾಕುವ ಮೂಲಕ ನರಮಂಡಲಕ್ಕೆ ಆರಾಮದ ಅನುಭವ ನೀಡುತ್ತದೆ. ಉಸಿರಾಟ ನಿಧಾನವಾಗುತ್ತದೆ. ಸ್ನಾಯುಗಳ ಬಿಗಿತ ಕಡಿಮೆಯಾಗುತ್ತದೆ. ರಕ್ತದೊತ್ತಡ ಇಳಿಯುತ್ತದೆ. ಕಾಲುಗಳಿಗೆ ಆಗುತ್ತಿದ್ದ ದೊಡ್ಡ ಪ್ರಮಾಣದ ರಕ್ತಸಂಚಾರವು ಉದರಭಾಗದತ್ತ ತಿರುಗುವುದರಿಂದ ಕಾಕ್ಸಿಕ್ ಪ್ರದೇಶದ ಮತ್ತು ಸೇಕ್ರಲ್ ನರಗಳು ಪುನಶ್ಚೇತನ ಪಡೆಯುತ್ತವೆ. ಜೀರ್ಣಕ್ರಿಯೆಯನ್ನು ಸಹ ಈ ಪ್ರಕ್ರಿಯೆಯು ಪ್ರಚೋದಿಸುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts