More

    ರಾಜ್ಯಮಟ್ಟದ ಕೃಷಿ ಮೇಳಕ್ಕೆ ದಿನಗಣನೆ ಆರಂಭ

    ಮೈಸೂರು: ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಚಾನಲ್ ಸಹಯೋಗದಲ್ಲಿ ಫೆ.21ರಿಂದ ಮೂರು ದಿನ ಆಯೋಜಿಸಿರುವ ರಾಜ್ಯ ಮಟ್ಟದ ‘ಕೃಷಿ ಮೇಳ’ಕ್ಕೆ ದಿನಗಣನೆ ಆರಂಭವಾಗಿದೆ. ಅಪರೂಪದ ಕಾರ್ಯಕ್ರಮಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನ ಸಾಕ್ಷಿಯಾಗಲಿದ್ದು, ಕೃಷಿ ಉತ್ಸವದ ಪೂರ್ವ ತಯಾರಿಗಳು ಭರದಿಂದ ಸಾಗಿವೆ. ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮೈಸೂರು ವಿಶ್ವವಿದ್ಯಾಲಯ ಮೇಳಕ್ಕೆ ಸಹಯೋಗ ನೀಡಿದೆ.

    ಮೆರವಣಿಗೆ ಮೆರುಗು: ಸುಸ್ಥಿರ ಕೃಷಿ ಅಭಿವೃದ್ಧಿ ಉದ್ದೇಶದೊಂದಿಗೆ ಮೇಳ ಆಯೋಜಿಸಲಾಗಿದ್ದು, 21ರಂದು ಬೆಳಗ್ಗೆ 10ಕ್ಕೆ ಸಂಸ್ಕೃತ ಪಾಠಶಾಲೆ ವೃತ್ತದಿಂದ ಮಹಾರಾಜ ಕಾಲೇಜು ಮೈದಾನದವರೆಗೆ ಎತ್ತಿನಗಾಡಿ ಮೆರವಣಿಗೆ ಜರುಗಲಿದೆ. ಕೋಲಾಟ ತಂಡ ಮೆರವಣಿಗೆಗೆ ಮೆರುಗು ನೀಡಲಿದೆ. ಸಭಾ ವೇದಿಕೆಯಲ್ಲಿ ಗಾಯಕ, ರಂಗಕರ್ವಿು ಜನಾರ್ದನ್(ಜನ್ನಿ) ಅವರಿಂದ ಜಾನಪದ ಗೀತೆಗಳ ಝೇಂಕಾರ ಮೊಳಗಲಿದೆ.

    ಮುಖ್ಯಮಂತ್ರಿಗಳಿಂದ ಚಾಲನೆ: ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಳವನ್ನು ಉದ್ಘಾಟಿಸಲಿದ್ದಾರೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ಚೆೇರ್ಮನ್ ಡಾ.ವಿಜಯ ಸಂಕೇಶ್ವರ ಅಧ್ಯಕ್ಷತೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಕರುಗಳ ಪ್ರದರ್ಶನಕ್ಕೆ ಚಾಲನೆ ನೀಡುವರು. ಕೃಷಿ ಮೇಳದ ಅಂಗವಾಗಿ ‘ವಿಜಯವಾಣಿ’ ಹೊರ ತಂದಿರುವ ವಿಶೇಷ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬಿಡುಗಡೆಗೊಳಿಸುವರು. ಕೃಷಿ ಸಂಸ್ಕೃತಿ ಕಟ್ಟಿಕೊಡುವ ಮಳಿಗೆಗಳ ಉದ್ಘಾಟನೆಯನ್ನು ತೋಟಗಾರಿಕೆ, ರೇಷ್ಮೆ ಸಚಿವ ಕೆ.ಸಿ.ನಾರಾಯಣಗೌಡ ನೆರವೇರಿಸುವರು.

    ಮೇಳದ ಆಕರ್ಷಣೆಗಳು: ಮೊದಲ ದಿನ ಮಧ್ಯಾಹ್ನ 3ಕ್ಕೆ ಮುಖ್ಯವೇದಿಕೆಯಲ್ಲಿ ಜಾನಪದ ನೃತ್ಯ ಸ್ಪರ್ಧೆ ನಡೆಯಲಿದೆ. ಅದೇ ಹೊತ್ತಿಗೆ ಹೊರಾಂಗಣ ವೇದಿಕೆಯಲ್ಲಿ ದೇಸಿ ಕ್ರೀಡೆಗಳ ಕಲರವ ಕಳೆಗಟ್ಟಲಿದೆ. ಮಹಿಳೆಯರಿಗೆ ರಾಗಿ ಬೀಸುವುದು, ರಂಗೋಲಿ ಸ್ಪರ್ಧೆ, ಬಿಂದಿಗೆ ಹೊತ್ತು ಓಡುವುದು, ಕೂಸುಮರಿ, ಒಂದು ಕಾಲಿನ ಓಟ, ಗೋಣಿಚೀಲದ ಓಟ, ಅವರೆಕಾಯಿ ಬಿಡಿಸುವುದು, ಹಗ್ಗಜಗ್ಗಾಟ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸಂಜೆ 5ಕ್ಕೆ ನವಧಾನ್ಯ ಶಿವಲಿಂಗದ ಬಳಿ ಜಾನಪದ ಗಾಯಕ ಮೈಸೂರು ಗುರುರಾಜ್ ಅವರು ಮಂಟೇಸ್ವಾಮಿ ಕಥಾ ಪ್ರಸಂಗ ನಡೆಸಿಕೊಡಲಿದ್ದಾರೆ.

    2ನೇ ದಿನ ಬೆಳಗ್ಗೆ 10ಕ್ಕೆ ಹೊರಾಂಗಣದಲ್ಲಿ ರಂಗೋಲಿ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಮುಖ್ಯವೇದಿಕೆಯಲ್ಲಿ ವೇಷಭೂಷಣ ಸ್ಪರ್ಧೆ ಜರುಗಲಿದೆ. ಪುರುಷರಿಗಾಗಿ ಹಗ್ಗಜಗ್ಗಾಟ, ಬುಗುರಿ, ಲಗೋರಿ, ಕುದುರೆ ಓಟ, 3 ಕಾಲಿನ ಓಟ, ಮೂಟೆ ಹೊರುವ ಸ್ಪರ್ಧೆ, ಗೋಣಿ ಚೀಲ ಓಟ, ಹಿಮ್ಮುಖ ಓಟ ಸ್ಪರ್ಧೆ ಜರುಗಲಿದೆ.

    ಸಂಜೆ 6ಕ್ಕೆ ರಂಗಕರ್ವಿು ಮಂಡ್ಯ ರಮೇಶ್ ನಿರ್ದೇಶನದಲ್ಲಿ ‘ಚೋರ ಚರಣದಾಸ’ ನಾಟಕವನ್ನು ರಾಮಕೃಷ್ಣನಗರದ ನಟನ ರಂಗಶಾಲೆ ತಂಡವು ಪ್ರಸ್ತುತಪಡಿಸಲಿದೆ. ಕೊನೆ ದಿನ ಬೆಳಗ್ಗೆ 10ಕ್ಕೆ ರಾಗಿಮುದ್ದೆ, ಬಾಳೆಹಣ್ಣು, ಕಡ್ಲೆಪುರಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ.

    ಸಮಾರೋಪ: 23ರಂದು ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.ಎಂ.ಮಹದೇವಪ್ಪ ಸಮಾರೋಪ ಭಾಷಣ ಮಾಡಲಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೆಎಂಎಫ್​ನ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಸಂಸದರಾದ ವಿ.ಶ್ರೀನಿವಾಸಪ್ರಸಾದ್, ಪ್ರತಾಪ್ ಸಿಂಹ, ಸುಮಲತಾ, ಪ್ರಜ್ವಲ್ ರೇವಣ್ಣ ಪಾಲ್ಗೊಳ್ಳಲಿದ್ದಾರೆ.

    ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡುವುದು ನಮ್ಮ ಪ್ರಯತ್ನವಾಗಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ದವರು, ವಿವಿಧ ಕ್ಷೇತ್ರದವರು ನೆರವು- ಸಹಕಾರ ನೀಡುವ ಮೂಲಕ ಮೇಳವನ್ನು ಯಶಸ್ವಿಗೊಳಿಸಲು ಹೆಗಲು ಕೊಟ್ಟಿದ್ದಾರೆ. ಸಾರ್ವಜನಿಕರು, ರೈತರು ಈ ಮೇಳದಲ್ಲಿ ಪಾಲ್ಗೊಂಡು ಕೃಷಿ ಕಲೆ, ಗ್ರಾಮ ಸಂಸ್ಕೃತಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

    ವಿಶೇಷ ಆಕರ್ಷಣೆಗಳು: ಪುರುಷರು ಹಾಗೂ ಮಹಿಳೆಯರಿಗಾಗಿ ದೇಸಿಕ್ರೀಡೆಗಳ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಜಾನಪದ ನೃತ್ಯ ಸ್ಪರ್ಧೆ, ಕರುಗಳ ಪ್ರದರ್ಶನ, ಗೆಡ್ಡೆಗೆಣಸು ಮೇಳ, ಸಿರಿಧಾನ್ಯಗಳ ಮೇಳ, ನಾಟಕ ಪ್ರದರ್ಶನ, ಮಂಟೇಸ್ವಾಮಿ ಕಥಾ ಪ್ರಸಂಗ ಮತ್ತು ರಾಗಿಮುದ್ದೆ, ಬಾಳೆಹಣ್ಣು, ಕಡ್ಲೆಪುರಿ ತಿನ್ನುವ ಸ್ಪರ್ಧೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts