More

    ಗ್ರಾಪಂ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ಶುರು ; ನಾಯಕರ ಮನೆಬಾಗಿಲು ತಟ್ಟುತ್ತಿದ್ದಾರೆ ಗೆದ್ದ ಸದಸ್ಯರು

    ಚಿಕ್ಕನಾಯಕನಹಳ್ಳಿ: ಗ್ರಾಪಂ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ಅಧ್ಯಕ್ಷ ಸ್ಥಾನ ಹಿಡಿಯಲು ನೆಚ್ಚಿನ ನಾಯಕರ ಮನೆಬಾಗಿಲಿಗೆ ಎಡತಾಕುತ್ತಿದ್ದಾರೆ. ಗೆದ್ದ ಸದಸ್ಯರು ಗುಂಪುಗೂಡಿ ಗುಂಡು, ತುಂಡು ಪಾರ್ಟಿ ನಡೆಸುವುದು ಸಾಮಾನ್ಯವಾಗಿದೆ.

    27 ಗ್ರಾಪಂಗಳಿಗೆ ಮೀಸಲಾತಿ ಮಾರ್ಗಸೂಚಿ ಪ್ರಕಟವಾಗಿದ್ದು, ತಾಲೂಕಿನಲ್ಲಿ ಹಿಂದಿನ ಅವಧಿಯ ಮೀಸಲಾತಿ ಪರಿಗಣಿಸಿ ಈ ವರ್ಷದ ಮೀಸಲಾತಿ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಬೆಂಬಲದಲ್ಲಿ ಗೆದ್ದವರು ಮೀಸಲಾತಿಯನ್ನು ಬೇಕಾದವರಿಗೆ ಪಡೆಯುವ ವಿಶ್ವಾಸದಲ್ಲಿದ್ದಾರೆ.

    ತಾಲೂಕಿನ ಸದಸ್ಯರ ಪೈಕಿ 21ಜನ ಅವಿರೋಧವಾಗಿ ಆಯ್ಕೆಯಾಗಿದ್ದು, 427 ಸದಸ್ಯರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. 215 ಸಾಮಾನ್ಯ ಹಾಗೂ 233 ಮಹಿಳಾ ಮೀಸಲಾತಿಯಡಿ ಆಯ್ಕೆಯಾಗಿದ್ದಾರೆ. ಎಸ್‌ಸಿ ಸದಸ್ಯರಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ 36 ಮಹಿಳೆಯರು ಆಯ್ಕೆಯಾಗಿರುವುದು ವಿಶೇಷವಾಗಿದ್ದು, ಒಟ್ಟು 55 ಸದಸ್ಯರಿದ್ದಾರೆ. 27 ಗ್ರಾಪಂಗಳಲ್ಲಿ 14 ಅಧ್ಯಕ್ಷ ಸ್ಥಾನ ಮಹಿಳೆಯರಿಗೆ ಮೀಸಲಿದ್ದು, ಅನುಸೂಚಿತ ಜಾತಿಗೆ ಮೀಸಲಾದ 6ರಲ್ಲಿ 3 ಮಹಿಳೆಯರಿಗೆ, ಅನುಸೂಚಿತ ಪಂಗಡದಲ್ಲಿ ಮೀಸಲಾತಿಯ 3ರಲ್ಲಿ 2ಮಹಿಳೆಯರಿಗೆ, ಬಿಸಿಎಂ(ಎ)ವರ್ಗದಲ್ಲಿ 3ರಲ್ಲಿ 2 ಮಹಿಳೆಯರಿಗೆ, ಬಿಸಿಎಂಬಿ ವರ್ಗಕ್ಕೆ 1ಮೀಸಲಿದೆ ಸಾಮಾನ್ಯದಲ್ಲಿ 14ರಲ್ಲಿ 7ಮಹಿಳೆಯರಿಗೆ ಮೀಸಲಿದೆ.

    ಮೀಸಲಾತಿ ವಿಷಯದಲ್ಲಿ ಸಚಿವರು ತಟಸ್ಥ: ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಾಧುಸ್ವಾಮಿ ಅವರೇ ಅಧಿಕಾರದಲ್ಲಿರುವ ಕಾರಣಕ್ಕೆ ಮೀಸಲಾತಿ ವಿಷಯದಲ್ಲಿ ಪ್ರಭಾವ ಬಳಸಿಕೊಳ್ಳಲು ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ. ಆದರೆ, ಮೀಸಲಾತಿ ವಿಷಯದಲ್ಲಿ ಕಾನೂನು ಮೀರಿ ನಡೆಯುವುದು ಅಸಾಧ್ಯ ಎಂಬ ಬಗ್ಗೆ ಸಚಿವರು ಬೆಂಬಲಿಗರ ಮನವೊಲಿಕೆಯಲ್ಲಿದ್ದಾರೆ ಎನ್ನಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮೀಸಲಾತಿ ಪ್ರಕಟಿಸುವಂತೆ ಜಿಲ್ಲಾಡಳಿತಕ್ಕೆ ಸಚಿವರೇ ಸೂಚಿಸಿರುವ ಹಿನ್ನೆಲೆಯಲ್ಲಿ ಕದನ ಕುತೂಹಲ ಮೂಡಿಸಿದೆ.

    ಎರಡು ಅವಧಿಯಲ್ಲಿ ಮೇಲನಹಳ್ಳಿ ಕ್ಷೇತ್ರದಲ್ಲಿ ನನ್ನ ಪತಿ ಆಯ್ಕೆಯಾಗಿದ್ದರು. ಈ ಬಾರಿ ನನಗೆ ಜನರು ಆಶೀರ್ವಾದ ಮಾಡಿದ್ದಾರೆ. ಸ್ಥಳೀಯ ಆಡಳಿತದಲ್ಲಿ ಮಹಿಳೆಯರಿಗೆ ಶೇ.50 ಮೀಸಲಾತಿ ಇದ್ದು, ನಮ್ಮ ಪಂಚಾಯಿತಿಯಲ್ಲಿಯೂ ಮಹಿಳೆಯರಿಗೆ ಅಧ್ಯಕ್ಷ ಅಥವಾ ಉಪಾಧ್ಯಕ್ಷ ಗಾದಿ ಸಿಕ್ಕರೆ ಸಹಜವಾಗಿ ಖುಷಿಯಾಗುತ್ತದೆ.
    ಶೈಲಾ ಶಶಿಧರ್ ಹೊನ್ನೇಬಾಗಿ ಗ್ರಾಪಂ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts