ವಿಜಯವಾಡ: ಪ್ರೀತಿಯ ಪ್ರಸ್ತಾವನೆ ತಿರಸ್ಕರಿಸಿದಕ್ಕೆ ಕೋಪಗೊಂಡ ಯುವಕನೊಬ್ಬ ಯುವತಿಗೆ ಬೆಂಕಿ ಹಚ್ಚಿರುವ ಆತಂಕಕಾರಿ ಘಟನೆ ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ವಿಜಯವಾಡ ನಗರದ ಹನುಮನ್ಪೇಟೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗಂಭೀರ ಗಾಯಗಳಿಂದ ಯುವತಿ ಸ್ಥಳದಲ್ಲಿ ಮೃತಪಟ್ಟಿದ್ದು, ಸಂತ್ರಸ್ತೆಯನ್ನು ಚಿನ್ನಾರಿ (20) ಎಂದು ಗುರುತಿಸಲಾಗಿದೆ. ವಿಜಯವಾಡದ ಕೋವಿಡ್ ಕೇರ್ ಕೇಂದ್ರದಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಳು. ಕೃಷ್ಣ ಜಿಲ್ಲೆಯ ವಿಸ್ಸಾನ್ನಾಪೇಟೆಯ ನಿವಾಸಿಯಾದ ಚಿನ್ನಾರಿ, ತನ್ನ ಫ್ರೆಂಡ್ಸ್ಗಳೊಟ್ಟಿಗೆ ಬಾಡಿಗೆ ರೂಮ್ ಒಂದರಲ್ಲಿ ವಾಸವಿದ್ದಳು.
ಆರೋಪಿ ಎಸ್. ನಾಗಭೂಷಣಂ ಕೃಷ್ಣ ಜಿಲ್ಲೆಯ ರೆಡ್ಡಿಗುಡೆಮ್ ಮಂಡಲದ ಶ್ರೀರಾಂಪುರಂ ಗ್ರಾಮದ ನಿವಾಸಿ. ಈತ ಕೆಲ ತಿಂಗಳಿಂದ ಚಿನ್ನಾರಿ ಹಿಂದೆ ಬಿದ್ದಿದ್ದ. ಈತನ ಕಿರುಕುಳ ತಾಳದೇ ಚಿನ್ನಾರಿ ವಿಜಯವಾಡದ ಗವರ್ನರ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಬಳಿಕ ಪೊಲೀಸರು ನಾಗಭೂಷಣಂಗೆ ಎಚ್ಚರಿಕೆ ನೀಡಿದ್ದರು. ತಾನು ಚಿನ್ನಾರಿಯ ಸಹವಾಸಕ್ಕೆ ಹೋಗುವುದಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ ಬಳಿಕ ಆಕೆ ತನ್ನ ದೂರನ್ನು ಹಿಂಪಡೆದುಕೊಂಡಿದ್ದಳು.
ಇದನ್ನೂ ಓದಿ: ನಿರಂತರವಾಗಿ ಲೈಂಗಿಕ ಕಿರುಕುಳ; ಸಹಿಸಲಾಗದ 17ರ ಯುವತಿ ಬಾವಿಗೆ ಹಾರಿದಳು
ಇದಾದ ಕೆಲವೇ ದಿನಗಳಲ್ಲಿ ಚಿನ್ನಾರಿ ಕೆಲಸ ಮುಗಿಸಿ ಮನೆಗೆ ಮರಳುವಾಗ, ನಾಗಭೂಷಣಂ ಆಕೆಯನ್ನು ಹಿಂಬಾಲಿಸಿ ಬಂದು ಮಾರ್ಗ ಮಧ್ಯೆ ತಡೆದಿದ್ದನು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ತಾರಕಕ್ಕೇರಿ ಆರೋಪಿ ನಾಗಭೂಷಣಂ, ಚಿನ್ನಾರಿ ಮೇಲೆ ಪೆಟ್ರೋಲ್ ಬೆಂಕಿ ಹಚ್ಚಿದ್ದ. ಗಂಭೀರ ಗಾಯಗಳಿಂದ ಬಳಲಿದ್ದ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಘಟನೆಯಲ್ಲಿ ಆರೋಪಿಗೂ ಸಹ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿತ್ತು. ತಕ್ಷಣ ಆತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಸ್ಪತ್ರೆಯಲ್ಲಿ ದಾಖಲಾಗಿರುವ ಆರೋಪಿಯ ವಿಚಾರಣೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಗರ್ಭಿಣಿಯಾಗಿರುವ ಬಾಲಿವುಡ್ ನಟಿಗೆ ನಿತ್ಯ ಗಂಡನ ಈ ಸೇವೆ ಇಲ್ಲದಿದ್ದರೆ ನಿದ್ದೆಯೇ ಬರಲ್ಲ!